ಜಸ್ಟ್ ನ್ಯೂಸ್

ಕೊರೊನಾ ಕೆಲಸದ ನಡುವೆಯೂ ಅನಾಥರಿಗೆ ಅನ್ನದಾನಿಗಳಾದ ಬೆಳಗಾವಿ ಪೊಲೀಸರು…

ಮಹೇಂದ್ರ ಕೃಷ್ಣಮೂರ್ತಿ


ತುಮಕೂರು: ಇದೊಂದು ಮನಮಿಡಿಯುವ ಕಥೆ.

ಕೊರೊನಾ‌ ಕೆಲಸದ ಒತ್ತಡ. ಮನೆಯವರಿಗೂ ಭಯ, ಆತಂಕ. ಪ್ರತಿ‌ ದಿನವೂ ಕೆಲಸ,‌ ಕೆಲಸ.‌

ಬೆಳಗಾವಿ ಏರ್ಪೋರ್ಟ್ ಪೊಲೀಸ್ ಸಿಬ್ಬಂದಿ ಚಿತ್ರಣ.‌ಕರೊನಾ ಬಳಿಕ ರಾಜ್ಯದ ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಮನೆ, ಮಕ್ಕಳನ್ನು ವಾರಗಟ್ಟಲೆ ಬಿಟ್ಟಿದ್ದಾರೆ.

ಸರ್ಕಾರ,‌ ಜಿಲ್ಲಾಧಿಕಾರಿ, ಇನ್ನಿತರ ಇಲಾಖೆಯ ಅಧಿಕಾರಿಗಳು,‌‌ ಸಿಬ್ಬಂದಿಗಳಿಗಿಂತಲೂ ಬಡ ಜನರು, ಅನಾಥರ ಸಂಕಷ್ಟವನ್ನು ಕಣ್ಣಾರೆ ಕಾಣುತ್ತಿರುವವರು ಸಹ ಪೊಲೀಸರು.

ಸಂಕಷ್ಟಗಳಿಗೆ ಮಿಡಿಯುವ ಮೂಲಕ‌ ಬೆಳಗಾವಿ ಏರ್ ಪೋರ್ಟ್ ಪೊಲೀಸ್ ಠಾಣೆಯ ಪೊಲೀಸರು ಹೊಸ ಮನ್ವಂಥರ ಸೃಷ್ಟಿಸಿದ್ದಾರೆ.

ಲಾಠಿ ಹಿಡಿದ ಕೈಗಳನ್ನಷ್ಟೇ ನೋಡಿದವರಿಗೆ ಅನ್ನ ಹಿಡಿದ ಕೈಗಳು ಬೆಳಗಾವಿಯಲ್ಲಿ ಕಾಣತೊಡಗಿದೆ.

ಕಡಿಮೆ ಸಂಬಳದ‌ ನಡುವೆಯೂ ಸಂಬಳದ ಹಣದಲ್ಲಿ ಈ ಪೊಲೀಸರು‌ ನೆರವಾಗಿದ್ದಾರೆ. ಮುಂದಿನ ಸಂಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಮಧ್ಯಮ ವರ್ಗದ ಜನರು ಒಂದೊಂದು ರೂಪಾಯಿಯನ್ನು ಜೋಪಾನ ಮಾಡಿಕೊಳ್ಳುತ್ತಿದ್ದರೆ ಇವರು ಮಾತ್ರ ಸಂಬಳದಲ್ಲಿ ಸಾಕಷ್ಟು ಹಣವನ್ನು ಅನಾಥರಿಗಾಗಿ ವ್ಯಯಿಸಿದ್ದಾರೆ.

ಪ್ರತಿ ದಿನ ಬಡವರ ಕಷ್ಟ ನೋಡುತ್ತಿದ್ದೇವೆ. ಒಂದೊಂದು ಒತ್ತಿನ ಕೂಳಿಗೂ ಕೆಲವರಿಗೆ ತೊಂದರೆಯಾಗಿದೆ. ಹೀಗಿದ್ದಾಗ ಅನಾಥರಿಗೆ,‌ ಅನಾಥರನ್ನು ನೋಡಿಕೊಳ್ಳುವ ಸಂಸ್ಥೆಗಳಿಗೆ ತೊಂದರೆ ಹೆಚ್ಚಿದೆ ಎಂದು ಅನಾಥರಿಗೆ ನೆರವಾಗಲು ನಿರ್ಧರಿಸಿದವು ಎನ್ನುತ್ತಾರೆ ಠಾಣೆಯ PSI ಈರಪ್ಪ ವಾಲಿ.

ಸಿಬ್ಬಂದಿಗಳೇ ಹಣ ಹಾಕಿಕೊಂಡು ಇನ್ನೂರು ಮಂದಿ ವೃದ್ಧರು, ಅನಾಥ ಮಕ್ಕಳು, ಕಿವುಡ ಮಕ್ಕಳ ಸಂಸ್ಥೆಗಳಿಗೆ‌ ನೆರವು ನೀಡಿದ್ದಾರೆ.

ಸ್ವಾಮಿ ವಿವೇಕಾನಂದ ಅನಾಥ ಮಕ್ಕಳ ಶಾಲೆ, ಸಮರ್ಥನ ಕುರುಡ ಮಕ್ಕಳ ಶಾಲೆ, ಜೀಸಸ್ ಕೇರ್ ಅನಾಥ ಶ್ರಮಕ್ಕೆ ಅಕ್ಕಿ, ಎಣ್ಣೆ, ಬೇಳೆ ಕಾಳು, ಮೊಟ್ಟೆ, ತರಕಾರಿ ಖರೀದಿಸಿ ಕೊಟ್ಟಿದ್ದಾರೆ. ಕೆಲವು ದಿನಗಳ ಮಟ್ಟಿಗೆ ಈ ಅನಾಥರ ಹೊಟ್ಟೆ ತುಂಬಲಿದೆ.

ಈರಪ್ಪ ವಾಲಿ ಅವರೊಂದಿಗೆ ಸಿಬ್ಬಂದಿಗಳಾದ ಅನಂತ ಕುಮಾರ್, ದಳವಾಯಿ ಇನ್ನೂ ಹಲವರು ಈ ನೆರವಿಗೆ ಕೈ ಜೋಡಿಸಿದ್ದಾರೆ.

ಈ ಪೊಲೀಸರ ಈ ದೊಡ್ಡ ನೆರವು ಕರ್ನಾಟಕದ ಮಟ್ಟಿಗೆ ಮೊದಲಾಗಿದೆ. ಪೊಲೀಸರ ಅಂತಃಕರಣ ಅನಾವರಣಗೊಂಡಿದೆ. ಪೊಲೀಸರು ಕಾನೂನು ಪಾಲಕರಷ್ಟೇ ಅಲ್ಲ ಅನ್ನ ಕೊಡುವ ದಾತರೂ ಆಗುತ್ತಾರೆ ಎಂಬಂತ್ತಿದೆ ಈ ಪೊಲೀಸರ ಕೆಲಸ.

Comment here