ಕವನ

ನನ್ನಮ್ಮನಿಗೊಂದು ಕಡೆಯ ಪತ್ರ

2014 ರಲ್ಲಿ ಇರಾನಿನಲ್ಲಿ ಅತ್ಯಚಾರಕ್ಕೆ ಒಳಗಾದಾಕೆ ಆರೋಪಿಯನ್ನು ಕೊಂದ ಆರೋಪದ ಮೇಲೆ ಬಂಧನಕ್ಕೆ ಒಳಗಾಗುವಳು. ಗಲ್ಲು ಶಿಕ್ಷೆ ಪ್ರಕಟವಾದಾಗ ಆಕೆ ತನ್ನ ತಾಯಿಗೆ ಒಂದು ಪತ್ರ ಬರೆಯುವಳು. Time of India ದಲ್ಲಿ ಪ್ರಕಟವಾಗಿದ್ದ ಈ ಕವನದ ಭಾವಾನುವಾದವನ್ನು ತುಮಕೂರು ವಿ.ವಿ. ಪ್ರಾಧ್ಯಾಪಕಿಯಾದ ಕವಯತ್ರಿ ಡಾ. ಗಿರಿಜಾ ಅವರು ಮಾಡಿದ್ದಾರೆ.


ಅಮ್ಮ, ಓ ಅಮ್ಮ,
ನನ್ನ ಪ್ರೀತಿಯ ಅಮ್ಮ
ನಾನಿಂದು ಪತ್ರ ಬರೆಯುವ ಹೊತ್ತು
ಸರಪಳಿಗಳ ಹಿಂದೆ ಒಬ್ಬೊಂಟಿಯಾಗಿ
ಸಾವ ಎದುರು ನೋಡುತ್ತಾ
ಕುಳಿತಿಹೆನು….

ಜಗವ ತೊರೆಯುವ ಮುನ್ನ
ನನ್ನ ಮನದಾಳದಿಂಗಿತವ
ನಿನ್ನೊಂದಿಗೆ ಹೇಳುವ ಇರಾದೆ
ಕೊನೆಯ ಕ್ಷಣ ಕಳೆಯುವ ಆಸೆ
ಆದರೆ….
ನಾನಿರುವೆ ಸರಳುಗಳ ಹಿಂದೆ

ಕೈಹಿಡಿದು ಮುನ್ನಡೆಸಿ
ಕುಗ್ಗದೆ ಜಗವ ನೋಡುವ ಪರಿ
ಕಲಿಸಿದೆ ನೀನಂದು
ಮುಗ್ಗರಿಸಿ ಎಡವಿದಾಗ
ದಾರಿ ತೋರಿ ಬದುಕುವುದ ಕಲಿಸಿದಾಕೆ…
ಆದರಿಂದು ನಾನಿರುವೆ ಸರಳುಗಳ ಹಿಂದೆ…..

ಏನೆಂದು ಹೇಳಲಿ..‌
ನನ್ನ ಮೈಮನಗಳ ಘಾಸಿಗೊಳಿಸಿ
ನನ್ನಂತರಂಗದ ಕೂಗು ಕೇಳಿಸಿಕೊಳ್ಳದ
ನನ್ನ ಕಣ್ಣೀರಿಗೂ ಕರಗದವನ
ನಾ ಕೊಂದುಬಿಟ್ಟೆ
ಹಾಗಾಗಿ ನಾನಿರುವೆ ಸರಳುಗಳ ಹಿಂದೆ…..ಇಂದು

ಅಮ್ಮ ನಿನಗೆ ಗೊತ್ತೇ
ನಾ ಬಿಟ್ಟು ಬಿಡೆಂದು ಬೇಡಿದೆ
ಕಾಲು ಹಿಡಿದು ಕಣ್ಣೀರಿಟ್ಟೆ
ಕೋಪಗೊಂಡೆ
ಕಾರಣ ಕೇಳಿದೆ
ನ್ಯಾಯ ನೀಡಿರೆಂದೆ….

ಆದರೆ,
ಕಣ್ಣಿಲ್ಲದ, ಕಿವಿಯಿಲ್ಲದ
ಮನವಿಲ್ಲದ ಜನವೆಂದರು
ಜಗದ ನಿಯಮ ಪಾಲಿಸದವಳೆಂದು
ನಾ ಬದುಕಬಾರದೆಂದು….

ನಾ ಕೇಳುವೆ ಅಮ್ಮ
ನನ್ನಂತರಂಗಕ್ಕಾದ ನೋವು
ಯಾತನೆ, ಕೂಗು
ಯಾಕೆ ಅರ್ಥವಾಗದು
ಯಾಕೆ ಕೇಳಿಸದು
ನನಗಿಲ್ಲವೇ ಬದುಕು
ನನಗಿಲ್ಲವೇ ಆತ್ಮ ಗೌರವ
ನನಗೆ ಬೇಡವೇ ನ್ಯಾಯ

ಅದಕ್ಕೆಂದರವರು,
ನೀ ಹೆಣ್ಣು….

ನೀನಾದರೂ ಕೊಡಿಸುವೆಯಾ
ನನಗೆ ನ್ಯಾಯ
ಕ್ಷಮಿಸಿಬಿಡು ಕೊನೆಯ ಬಾರಿಗೆ
ಈ ನಿನ್ನ ಮಗಳ…..
ಕ್ಷಮಿಸುವೆಯಾ……

Comment here