ತುಮಕೂರು ಲೈವ್

ಪಡಿತರ ವಿತರಣೆಯಲ್ಲಿ ಅಕ್ರಮ, ಜನರಿಗೆ ಹಿಂಸೆ: ಬೆಳಗುಂಬ ವೆಂಕಟೇಶ್ ಆರೋಪ

Public story.in


ತುಮಕೂರು: ಜಿಲ್ಲೆಯಲ್ಲಿ ಪಡಿತರ ವಿತರಣೆಯಲ್ಲಿ ಅನ್ಯಾಯ, ಅಕ್ರಮ ನಡೆಯುತ್ತಿದೆ. ಜಿಲ್ಲಾಧಿಕಾರಿ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್ ಆರೋಪಿಸಿದ್ದಾರೆ.

ಕರೊನಾ ಕಾರಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳ ಪಡಿತರವನ್ನು ವಿತರಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಜನರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ನಿಯಮಗಳನ್ನು ಸಡಿಲಗೊಳಿಸಿದೆ. ಇದನ್ನೇ ನ್ಯಾಯಬೆಲೆ ಅಂಗಡಿಗಳು ದುರುಪಯೋಗಪಡಿಸಿಕೊಂಡು ಜನರಿಗೆ ಹಿಂಸೆ ನೀಡುತ್ತಿವೆ ಎಂದು ಹೇಳಿದ್ದಾರೆ.

ಒಟಿಪಿ, ಹೆಬ್ಬೆಟ್ಟಿನ ಗುರುತು ಏನನ್ನು ಕೇಳುತ್ತಿಲ್ಲ. ಆದರೆ ಹತ್ತು ರೂಪಾಯಿ ನೀಡಿ ಟೋಕ‌ನ್ ಪಡೆದುಕೊಳ್ಳುವಂತೆ ಹೇಳಲಾಗುತ್ತಿದೆ ಎಂದು ಹೇಳಿದ್ದಾರೆ.

ಒಂದೊಂದು ಕಡೆ ಒಂದೊಂದು ದರವನ್ನು ಪಡೆಯಲಾಗುತ್ತಿದೆ. ಕೆಲವು ಅಂಗಡಿಗಳಲ್ಲಿ 150 ರೂಪಾಯಿ ವರೆಗೂ ಪಡೆಯಲಾಗುತ್ತಿದೆ. ಈ ಬಗ್ಗೆ ಕರೆ ಮಾಡಿ‌ ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಿರುವುದಾಗಿಯೂ ತಿಳಿಸಿದ್ದಾರೆ.

ಎರಡು ತಿಂಗಳ ಪಡಿತರನ್ನು ಪುಕ್ಕಟೆಯಾಗಿ ವಿತರಿಸುವಂತೆ ಸರ್ಕಾರ ಆದೇಶಿಸಿದೆ. ಆದರೆ ಡಿಪೊ ಮಾಲೀಕರು, ಕೆಲವು ಕಡೆಗಳಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ( ಸೊಸೈಟಿ) 75-150 ರೂಪಾಯಿ ವರೆಗೂ ವಸೂಲಿ ಮಾಡುತ್ತಿದ್ದಾರೆ. ಆಹಾರ ಇಲಾಖೆ ಇದನ್ನು ನೋಡಿಯೂ ಮೌನವಹಿಸಿದೆ ಎಂದು ಕಿಡಿ ಕಾರಿದ್ದಾರೆ.

ಸಹಾಯವಾಣಿ ಆರಂಭಿಸಿ


ಪಡಿತರ ಸಮಸ್ಯೆ, ಹಣ ವಸೂಲಿ ಇನ್ನಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನರಿಂದ‌ ದೂರು ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅಧೀನದಲ್ಲೇ ಕೂಡಲೇ ಸಹಾಯ ವಾಣಿ ಆರಂಭಿಸಬೇಕು ಎಂದು ಬೆಳಗುಂಬ ವೆಂಕಟೇಶ್ ಒತ್ತಾಯಿಸಿದ್ದಾರೆ.

ಹಣ ಮತ್ತಿತರ ಆರೋಪ ಕೇಳಿಬಂದರೆ, ಸಹಾಯವಾಣಿಗೆ ದೂರುಗಳು ಬಂದರೆ ದೂರುಗಳ ಆಧಾರಸಲ್ಲಿ ತನಿಖೆ ನಡೆಸಿ ಅಂತಹ ಅಂಗಡಿಗಳ ಲೈಸೆನ್ಸ್ ರದ್ದುಗೊಳಿಸಬೇಕು. ಪ್ರಾಥಮಿಕ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಯಾರಿಗಾದರೂ ಪಡಿತರ ಸಿಗದಿದ್ದರೆ ಅಂತವರು ಈ ಸಹಾಯವಾಣಿಗೆ ಕರೆ ಮಾಡಬೇಕು. ಕರೆ ಮಾಡಿದವರಿಗೆ ಪಡಿತರ ತಲುಪಿಸುವ ಕೆಲಸ ಮಾಡಲು ಈ ಸಹಾಯವಾಣಿಯನ್ನು ಬಳಸಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ.

Comment here