ಕವನ

ಭಾನುವಾರದ ಕವಿತೆ “ತೊಟ್ಟು ತೊಟ್ಟು”

ಡಾಕ್ಟರ್ ರಜನಿ.

ಮಾವಿನ ಮಿಡಿಯ
ಹಸಿರು ತೊಟ್ಟು

ತೊಟ್ಟಿನ ಬುಡ ಸಿಹಿ

ತಾಯಿ ಜ್ವರ…ಮಗು
ಬಾಯಿಗೆ ಎದೆ ತೊಟ್ಟು

ಎಣ್ಣೆ ಬದನೆಕಾಯಿ.. ಇರಲಿ ತೊಟ್ಟು

ಸೀಬೆ ಹಣ್ಣು ಎರಡು ಎಲೆ ತೊಟ್ಟು ..ಸುಂದರ

ನಿಲ್ಲುವ ನೀರು …ಸಿಗಲಿಲ್ಲ ಎರಡು ತೊಟ್ಟು

ಮಲ್ಲಿಗೆ ದಂಡೆ ತೊಟ್ಟು ಕಟ್ಟು .. ಎಂಥಾ
ದಂಡೆ …

ಒಂದು ತೊಟ್ಟು ಕಾಫಿ ಕೊಡು …ಸೇರುತ್ತೂ ಇಲ್ಲವೋ

ಒಂದು ತೊಟ್ಟು ಎಸರು ಬಿಡು … ಉಣ್ ಲಾರೆ…

ಸಾರು ಮಾಡಲಾರೆ…ಒಂದು ತೊಟ್ಟು ಸಾರು ಈಸ್ಕೊ ಪಕ್ಕದ ಮನೇಲಿ…

ಈ ಮಳೆಗೇ ಇಂಗೆ ತೊಟ್ಟಿಕುದ್ರೆ ..ಮುಂದೆ…

ಆ ಮೂದೇವಿ ಗೆ ..ಹೆಂಡ್ತಿ ಅಂತ ಒಂದು ತೊಟ್ಟು ಪ್ರೀತಿ ಬೇಡ?

ಮಗಿಗೇ ತೊಟ್ಟು ತೊಟ್ಟೆ ಹಾಕು ಔಷಧಿ… ದಕ್ತದೆ…

ಒಂದು ತೊಟ್ಟು ಹರಳೆಣ್ಣೆ ಹಾಕು ನೆತ್ತಿಗೆ .. ತಂಪಾಗುತ್ತದೆ…

ಒಂದು ತೊಟ್ಟು ತುಪ್ಪ ..ಹಾಕು ..ಸೇರುತ್ತ ನೋಡಣ…

ಕಾಲೇ ಬರಲಿಲ್ಲ ನಡಿಯಕ್ಕೆ…ತೊಟ್ಟು ಕಿತ್ತ ಹಣ್ಣು ಬಿದ್ದಂಗೆ ಆಯ್ತು…

ಒಂದು ತೊಟ್ಟು ಗಂಗಾಜಲ ಬಿಡು ಬಾಯಿಗೆ ನೋಡಣ..
ಮಣ್ಣು ..ಚಿನ್ನ ತೇದು ..ಒಂದು ತೊಟ್ಟು ಹನುಕ್ಸು

ಜೀವ ಎಲ್ಲೊ ಒಂದು ತೊಟ್ಟು ಹಿಡ್ಕಂಡ್ ಅದೇ…ಸಂಜೀ ತನಕ ನೋಡ್ಬೇಕು…

ಒಂದು ತೊಟ್ಟು ರಕ್ತ ಇಲ್ಲ…ಇಷ್ಟು ಲೇಟ್ ಆಗಿ ಬಂದ್ರೆ….

ಸಿಸ್ಟರ್ ಸಿಸ್ಟರ್..ಡ್ರಿಪ್ ತೊಟ್ಟು ಬೀಳ್ತಾ ಇಲ್ಲ…….

Comment here