ಕವನ

ಭಾನುವಾರದ ಕವಿತೆ ‘ಯುಗಾದಿ’

ಡಾ//ರಜನಿ. ಎಂ

ಅಪ್ಪ ಎಡಗಾಲ ನೀಚಿ
ಮಾವಿನ ತೋರಣ ಕಟ್ಟಲು ಕುಳಿತರೆ
ಅಂಚಿಕಡ್ಡಿ… ಸುತ್ತಲಿ ದಾರ ಹಿಡಿದು ನಿಲ್ಲಬೇಕು

ಮನೆ ಬಾಗಿಲಲಿ ನಿಲ್ಲಿಸಿ ಹರಳೆಣ್ಣೆ
ತಿಕ್ಕಿ ಮೈಗೆ ..
ಕಲ್ಲಲ್ಲಿ ಉಜ್ಜಿ ಗಸಗಸ

ಬೆಲ್ಲ, ಬೇವಿನ ಚಿಗುರು ಹೂವು
ಹುಣಿಸೆ ಚಿಗುರು, ಮಾವಿನ ಮಿಡಿ

ತೋತಾಪುರಿ ಮಾವಿನ…. ವಾಟೆ ವಾಟೆ
ಯಾರು?

ಬೇಳೆ ಒಬ್ಬಟ್ಟಿನ ಹೂರಣ
ಬಾಗಿಲಲಿ ಕುಳಿತು ತಿಂದು…

ಹದವಾದ ಬಳಪ ಕಲ್ಲ ಮೇಲೆ ಬೆಂದ
ಒಬ್ಬಟ್ಟು…ಕಾದ ತುಪ್ಪ

ಕಡ್ಲೆ ಗೊಜ್ಜು
ಕೋಸಂಬರಿ

ಹಬೇ ನೀರಿನ ಸ್ನಾನ
ನಮ್ಮ ಬಣ್ಣ ಕಾಗೆ ತಗೊಂಡು
ಕಾಗೆ ಮಿಂಚು ನಾವು ತಗೊಂಡು

ಹೊಸ ಬಟ್ಟೆ ಸದ್ದು..
ಮೇಲೆ ಮಣಿ ಸರ

ಹೊಂಗೆ ಮರದ ಹೂ ಉದುರಿ
ಜಿಂವ್…..ಜಿಂವ್
ಮಕರಂದ ಹೀರಿ

ಅಪ್ಪ ಕೊಟ್ಟ ಬೆಲ್ಲ ಹೆಚ್ಚು
ಒಂದೇ ಎಲೆ ಬೇವು

ಅಮ್ಮನ ಫುಲ್ ವಾಯಲ್
ಹೊಸ ಸೀರೆ

ಆಡಿ ಮನೆಗೆ ಬಂದರೆ
ಅಪ್ಪನ ಕೈಗೆ ಎಲೆ ಮಡಚಿ ಕೊಡುತ್ತಿರುವ
ಅಮ್ಮ..

ಸಂಜೆ 7 ಮನೆ ಚೌಕಾಬಾರ
ಅಪ್ಪ ಕವಡೆ ಹಿಡಿದು ಹಾಕಿ…
ತಿನ್ನುವ ಗುದ್ದು

ತಗಾದಿ ಆಗದೆ
ಮುಗಿಯದ ಯುಗಾದಿ
ಅಪರೂಪ

ನಾಳೆಗೆ
ಕಾದಿದೆ ಒಳ್ಳೇ ಹೊಸ ತಡಕು

Comment here