ಜನಮನ

ಭ್ರಮಾ ಲೋಕ ಕಳಚಿ ಬಿದ್ದಿದೆ…!

ಚಿದು ಎ.ರಂಗಯ್ಯ


ಅಬ್ಬಾ…..! ಎಷ್ಟೊಂದು ಧಾವಂತವಿತ್ತು. ಹೆಂಡತಿ ತಿಂಡಿ ಕೊಡುವುದು ಐದು ನಿಮಿಷ ತಡವಾದರೆ ಸಹಿಸಲು ಆಗುತ್ತಿರಲಿಲ್ಲ. ಅರ್ಧ ಗಂಟೆ ಕರೆಂಟ್ ಹೋದರೆ ಲೈನ್ ಮೆನ್ ನಿಂದ ಹಿಡಿದು ಇಂಧನ ಸಚಿವರ ತನಕ ಎಲ್ಲರಿಗೂ ಹಿಡಿಶಾಪ ಹಾಕುತ್ತೇವೆ. ಎರಡು ನಿಮಿಷ ಟ್ರಾಫಿಕ್ ಸಿಗ್ನಲ್ ಕಾಯುವ ತಾಳ್ಮೆ ಇರಲಿಲ್ಲ.

ಕೆಲಸಕ್ಕೆ ತಡವಾಗುತ್ತದೆ ಎನ್ನುವ ಆತುರ. ತಾನು ಹೋಗದಿದ್ದರೆ ಕೆಲಸವಲ್ಲ ಪ್ರಪಂಚವೇ ನಿಂತು ಹೋಗುತ್ತದೇನೊ ಎನ್ನುವಷ್ಟು ಧಾವಂತ. ತನ್ನಿಂದಲೇ ಎಲ್ಲಾ ನಡೆಯುತ್ತಿದೆಯೇನೋ ಎನ್ನುವ ಭ್ರಮೆ.

ಒಂದು ದಿನ ಎಲ್ಲಿಗಾದರೂ ಹೋಗಬೇಕೆಂದರೆ ‘ಅಯ್ಯೋ ಸಾಧ್ಯವೇ ಇಲ್ಲ, ತುಂಬಾ ಮುಖ್ಯವಾದ ಕೆಲಸ ಇದೆ’ ಎನ್ನುವ ಉತ್ತರ.

ಯಾವುದಕ್ಕೂ ನಮ್ಮ ಬಳಿ ಸಮಯನೇ ಇರಲಿಲ್ಲ. ಶಾಲೆಯಲ್ಲಿ ಪೋಷಕ, ಶಿಕ್ಷಕರ ಸಭೆಗೆ ಬಯ್ದುಕೊಂಡೇ ಹೋಗುತ್ತೇವೆ. ಬಿಲ್ ಕಟ್ಟುವ ಸರದಿಯಲ್ಲಿ ಗೊಣಗಾಡುತ್ತ ನಿಲ್ಲುತ್ತೇವೆ. ಹತ್ತು ಸೆಕೆಂಡ್ ಮೊಬೈಲ್ ಹ್ಯಾಂಗ್ ಆಯಿತೆಂದರೆ ಸಾಕು ಅಬ್ಬಾ..! ಜಗತ್ತೇ ನಿಂತು ಹೋದಷ್ಟು ಅಸಹನೆ.ಎಲ್ಲಾದಕ್ಕೂ ತಡವಾಗುತ್ತದೆ ಎನ್ನುವ ವಿಚಿತ್ರ ಮನಸ್ಥಿತಿ.


ಆದರೆ ಏನಾಯಿತೀಗ? ಎಲ್ಲರೂ ಮನೆಯಲ್ಲಿ ಕುಳಿತಿದ್ದೇವೆ. ಜಗತ್ತು ಹಾಗೆಯೇ ಇದೆ. ಸೂರ್ಯ ಹುಟ್ಟಿ ಯಥಾಪ್ರಕಾರ ಮುಳುಗುತ್ತಿದ್ದಾನೆ. ಗಾಳಿ ಬೆಳಕು ಸ್ವಚ್ಛಂದವಾಗಿ ಹರಿಯುತ್ತಿದೆ. ಯಾವ ಬದಲಾವಣೆಯೂ ಇಲ್ಲ. ತೆಗೆಯೋದು ಅರ್ಧ ಗಂಟೆ ತಡವಾದರೆ ಇನ್ನೇನ್ ಮಹಾ ತೊಂದರೆ ಆಗಿಬಿಡುತ್ತೆ ಎಂದು ಭಾವಿಸಿದ ಅಂಗಡಿಗಳು, ಕಛೇರಿಗಳು ಬಾಗಿಲು ಹಾಕಿಕೊಂಡು ಕುಳಿತಿವೆ.

ಏನೂ ಆಗಲಿಲ್ಲ. ಸ್ವಲ್ಪ ಏರುಪೇರುಗಳಾಗಿವೆ. ಆದರೆ ಯೋಚಿಸಿ..! ನಾವು ಮಾಡುತ್ತಿದ್ದ ಧಾವಂತ, ಆತುರ, ತಡವಾದರೆ ಪ್ರಳಯವೇ ಆಗುತ್ತದೆ ಎನ್ನುವ ಅಸಹನೆ ನಿಜಕ್ಕೂ ಬೇಕಿತ್ತಾ? ನಮಗೇ ಗೊತ್ತಿಲ್ಲದೆ ನಾವು ಎಂಥ ಭ್ರಮಾತ್ಮಕ ಗೋಡೆ ಕಟ್ಟಿಕೊಂಡು ಬದುಕಿ ಬಿಟ್ಟೆವಲ್ಲ ಅಂತ ಈಗಲಾದರೂ ಅನ್ನಿಸಬಹುದಲ್ಲ.

ತಡವಾಗುತ್ತದೆ ಎನ್ನುವ ಆತುರದಲ್ಲಿ ತಿಂಡಿ ತಿನ್ನುವಾಗ ಹೆಂಡತಿಯೊಂದಿಗೆ ಸಮಾಧಾನದಿಂದ ಎರಡು ಮಾತಾಡುವ ಖುಷಿ ಕಳೆದುಕೊಂಡಿದ್ದೇವೆ. ಆ ಸಮಯದಲ್ಲೇ ಆ ದಿನದ ಕುರಿತಾಗಿ ಆಕೆ ಆಡಬೇಕಾಗಿದ್ದ ಎರಡು ಮಾತಿಗೆ ಕಿವಿಯಾಗದೆ ಆಕೆಯ ಇಡಿ ದಿನದ ಖುಷಿಯನ್ನು ಕೊಂದು ಹೊರಟು ಬಿಟ್ಟಿದ್ದೇವೆ.

ತಡವಾಗುತ್ತದೆ ಎನ್ನುವ ಕಾರಣ ಕೊಡದೆ ಶಾಲೆಗೆ ಹೊರಟ ಮಗುವಿನ ಶೂ ಲೇಸ್ ಕಟ್ಟದೆ ಆ ಮಗುವಿನ ಒಂದು ಸುಂದರ ನಗುವಿನ ಖುಷಿಯನ್ನು ಕಳೆದುಕೊಂಡಿದ್ದೇವೆ.

ಆರೋಗ್ಯ ವಿಚಾರಿಸುವುದಕ್ಕೆ ಫೋನ್ ಮಾಡಿದ್ದ ಅಪ್ಪ-ಅಮ್ಮನಿಗೆ “ಕೆಲಸ ಇದೆ ಆಮೇಲೆ ಮಾಡ್ತೀನಿ” ಎನ್ನುವ ಬದಲು ಎರಡು ನಿಮಿಷ ಆರಾಮವಾಗಿ ಮಾತಾಡದೆ ಹೆತ್ತವರಿಂದ ಸಿಗುವ ಖುಷಿಯನ್ನು ಕಳೆದುಕೊಂಡಿದ್ದೇವೆ.

ನಾವು ಏನೋ ಮಹಾ ಸಾಧನೆ ಮಾಡುತ್ತಿದ್ದೇವೆ. ಒಂದರ್ಧ ಗಂಟೆ ನಾನು ಆ ಕೆಲಸ ಮಾಡದಿದ್ದರೆ ದೊಡ್ಡ ತೊಂದರೆ ಆಗುತ್ತದೆ ಎನ್ನುವ ಧಾವಂತದ ಭ್ರಮೆಯಲ್ಲಿ ನಾವು ಕಳೆದುಕೊಂಡ ಸಣ್ಣಸಣ್ಣ ಅದ್ಭುತವಾದ ಖುಷಿಗಳೆಷ್ಟು ಅನ್ನುವುದು ನಮಗೆ ಅರ್ಥವಾಗಲೇ ಇಲ್ಲ.

ತಡವಾದರೆ ಏನೋ ಆಗಿಬಿಡುತ್ತದೆ ಎನ್ನುವ ನಾವೇ ಸೃಷ್ಟಿಸಿಕೊಂಡ ಭ್ರಮೆಯ ಜಗತ್ತು ಎಷ್ಟು ಖಾಲಿ, ಎಷ್ಟು ಅರ್ಥಹೀನ ಅಂತ ಅರ್ಥವಾಗುವ ಸಮಯ ಇದು. ದುಡಿಮೆಯೊಂದೇ ಸಮಯದ ಸದುಪಯೋಗ ಅಂದುಕೊಂಡ ನಮಗೆ ರಾಶಿ ದುಡ್ಡಿದ್ದರೂ ಖರ್ಚು ಮಾಡುವುದಕ್ಕೂ ಅವಕಾಶವಿಲ್ಲದಿದ್ದರೆ ಆ ದುಡ್ಡು ಕಾಗದವಲ್ಲದೆ ಮತ್ತೇನೂ ಅಲ್ಲ ಅನ್ನುವುದೂ ಅರ್ಥವಾಗಬೇಕು.

ದುಡ್ಡು ದುಡಿಯುವ ಭರದಲ್ಲಿ ದುಡ್ಡಿಗಿಂತ ಮೌಲ್ಯಯುತವಾದ ಅದೆಷ್ಟೋ ಮುಗ್ಧ ಖುಷಿಗಳನ್ನು ನಮ್ಮ ಧಾವಂತದ ಪ್ರಯಾಣದ ಚಕ್ರದಡಿಗೆ ಹಾಕಿ ಕೊಂದುಕೊಂಡೇ ಮುಂದೆ ಸಾಗಿದೆವು. ಯಾವುದೋ ಭ್ರಮೆಯ ಬೆನ್ನೇರಿ ಪ್ರಕೃತಿಯಿಂದ ದೂರಾದೆವು. ಸಹಜ ಬದುಕಿನಿಂದ ದೂರಾದೆವು, ಸಂಬಂಧಗಳಿಂದ ದೂರಾದೆವು. ಮೌಲ್ಯಗಳಿಂದ ದೂರಾದೆವು.

ಕರಗಬೇಕಿದ್ದ ಹೃದಯ ಕಲ್ಲಾಗಿ ಹೋಯಿತು. ತೇವಗೊಳ್ಳುತ್ತಿದ್ದ ಕಣ್ಣಂಚಿಗೆ ನೀರಿನ ಬರ ಬಂದು ಅದೆಷ್ಟು ಕಾಲವಾಯಿತೊ, ಮುಗ್ಧವಾಗಿ ಇರಲಿ, ಮುಕ್ತವಾಗಿಯೂ ನಗದ ನಮ್ಮ ಬದುಕಿಗೆ ನಾಗರಿಕತೆ ಎಂದು ಹೆಸರಿಟ್ಟುಕೊಂಡು ಜೀವಂತ ಶವಗಳಾಗಿ ಓಡಾಡುತ್ತಿದ್ದೇವೆ.

ಇದೆಲ್ಲದಕ್ಕೂ ಕಾರಣ, ಬದುಕಿನ ಧಾವಂತದ ಅರ್ಥ ಹೀನ ಓಟ. ಯಾಕೆ ಓಡುತ್ತಿದ್ದೇನೆ? ಯಾಕೆ ಅವಸರ ಪಡುತ್ತಿದ್ದೇನೆ? ಯಾಕೆ ಗಡಿಬಿಡಿ? ಯಾಕೆ ಕೋಪ? ಯಾಕೆ ಅಸಹನೆ? ಯಾಕೆ ಎಲ್ಲರ ಮೇಲೂ ಸಿಡಿಮಿಡಿ? ಎಂದು ಯೋಚನೆ ಮಾಡುವ ವ್ಯವಧಾನವೂ ಇಲ್ಲದಷ್ಟು ಧಾವಂತ.

ಆದರೆ ಈಗ ಅದೆಲ್ಲ ಎಲ್ಲಿಗೆ ಹೋಯಿತು? ನಾವು ಅದು ಮಾಡದಿದ್ದರೆ, ಇದು ಮಾಡದಿದ್ದರೆ, ಅಲ್ಲಿಗೆ ಹೋಗದಿದ್ದರೆ, ಇಲ್ಲಿಗೆ ಹೋಗದಿದ್ದರೆ ಜಗತ್ತು ನಿಂತೇ ಹೋಗುತ್ತದೆ ಎನ್ನುವ ಭ್ರಮೆಯಲ್ಲಿ ಅವಸರ ಮಾಡುತ್ತಿದ್ದೆವು.

ಆದರೆ ಈಗ ನಾವು ಎಲ್ಲಿಗೂ ಹೋಗದೆ, ಏನೂ ಮಾಡದೆ ಮನೆಯಲ್ಲಿ ಕುಳಿತುಕೊಳ್ಳುವುದಕ್ಕೂ ತಯಾರಾಗಿದ್ದೇವೆ. ನಮ್ಮಿಂದಲೇ ಜಗತ್ತು ಎನ್ನುವ ಅಹಂಕಾರದ ಕಿರೀಟ ಎಷ್ಟು ಸಲೀಸಾಗಿ ಎಷ್ಟು ಅಚಾನಕ್ಕಾಗಿ ಕಳಚಿ ಬಿದ್ದಿದೆ ನೋಡಿ.

ಬೆಳಿಗ್ಗೆ ಎದ್ದಾಗಿನಿಂದ ನಾವು ತಯಾರಾಗುವ ರೀತಿ, ಮಾಡುವ ಯೋಚನೆ ಯೋಜನೆಗಳನ್ನು ನೋಡಿದರೆ ಸಾವಿರ ವರ್ಷ ಕಳೆದರೂ ನಮಗೆ ಸಾವೇ ಬರುವುದಿಲ್ಲ ಎನ್ನುವ ಹಾಗಿರುತ್ತಿತ್ತು.

ಆದರೆ ಒಂದು ಕಣ್ಣಿಗೆ ಕಾಣದ ಸೋಂಕು ಎಂಥ ಪಾಠ ಕಲಿಸಿ ಬಿಟ್ಟಿತಲ್ಲ? ಇಷ್ಟು ವರ್ಷ ಹೇಗೆ ಬದುಕಿದ್ದೇವೆ ಎನ್ನುವುದು ಅರ್ಥ ಮಾಡಿಕೊಳ್ಳಲು ಸಾವು ಬಂದು ಬಾಗಿಲು ಹಾಕಿಸಬೇಕಾಯಿತು.

ಇನ್ನಾದರೂ ಅರ್ಥ ಮಾಡಿಕೊಳ್ತೆವಾ..? ಬದುಕು‌ ಇಷ್ಟೆ ಅಂತಾ..? ಅಥವಾ ಮತ್ತದೆ‌ ಧಾವಂತಕ್ಕೆ ಬೀಳ್ತೇವಾ..? ಇದನ್ನ ನಮಗೆ ನಾವೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಷ್ಟೆ…

Comment here