ಕವನ

ಯಾರಿಗೆ ಬಂತು ಸ್ವಾತಂತ್ರ್ಯ?

ಹೆತ್ತೇನಹಳ್ಳಿ ಮಂಜುನಾಥ್


ದೇಶಕೆ ದುಡಿದ ತೋಳಿಗೆ,
ಬೆವರ ಸುರಿಸಿದವರ ಕೈಯಿಗೆ,
ಹೊತ್ತು ಸಲಹಿದ ತಾಯಿಯ ಮಡಿಲಿಗೆ,
ಕೂಗಿ ಕರೆದರೂ ಬರಲಿಲ್ಲಾ ಸ್ವಾತಂತ್ರ್ಯ,
ಸಾರಿ ಕೂಗಿದರೂ ಸಿಗಲಿಲ್ಲಾ ಸ್ವಾತಂತ್ರ್ಯ,

ಮಲವ ಹೊತ್ತ ತಲೆಗಳಿಗೆ,
ಕಲ್ಲು ಕುಟ್ಟುವ ಕೈಗಳಿಗೆ,
ಉತ್ತಿ ಬಿತ್ತಿದ ರೈತನಿಗೆ,
ಕೂಗಿ ಕರೆದರೂ ಬರಲಿಲ್ಲಾ ಸ್ವಾತಂತ್ರ್ಯ
ಸಾರಿ ಕೂಗಿದರೂ ಸಿಗಲಿಲ್ಲಾ ಸ್ವಾತಂತ್ರ್ಯ,

ಚಪ್ಪಲಿ ಹೊಲೆದ ಚನ್ನನಿಗೆ,
ಮೂಟೆ ಹೊರುವ ಮುನಿಯನಿಗೆ,
ರದ್ದಿಯ ಆಯ್ದು ಶುದ್ದಿಗೊಳಿಸಿದವಗೆ
ಕೂಗಿ ಕರೆದರೂ ಬರಲಿಲ್ಲಾ ಸ್ವಾತಂತ್ರ್ಯ
ಸಾರಿ ಕೂಗಿದರೂ ಸಿಗಲಿಲ್ಲಾ ಸ್ವಾತಂತ್ರ್ಯ,

ಸ್ವಚ್ಛಗೊಳಿಸಿದ ಸ್ವಚ್ಛಂದ ಮನಸ್ಸಿಗೆ,
ಕಂಬಳಿ ಮಾಡಿ ಬೆಚ್ಚಗಿರಿಸಿದ ಸಿದ್ದಯ್ಯನಿಗೆ,
ಮಡಿಯ ಮಾಡಿದ ಮಾದೇವನಿಗೆ,
ಕೂಗಿ ಕರೆದರೂ ಬರಲಿಲ್ಲಾ ಸ್ವಾತಂತ್ರ್ಯ
ಸಾರಿ ಕೂಗಿದರೂ ಸಿಗಲಿಲ್ಲಾ ಸ್ವಾತಂತ್ರ್ಯ,

ಕೂಗಿ ಕರೆದರೂ, ಸಾರಿ ಕೂಗಿದರೂ ಸಿಗದೇ ಇದ್ದ ಸ್ವಾತಂತ್ರ್ಯ,
ಹಸಿದ ಹೊಟ್ಟೆಗೆ, ಬೆತ್ತಲ ಮೈಗೆ ಸಿಗದೇ ಇದ್ದ ಸ್ವಾತಂತ್ರ್ಯ
ನೆಟ್ಟಗೋಯ್ತು ಮೈಗಳ್ಳರ ಮನೆಗೆ,
ಬಂಡವಾಳ ಶಾಹಿಯ ತಿಜೋರಿಗೆ,
ಅಧಿಕಾರಸ್ಥರ ಜೇಬೊಳಗೆ….!!!!

Comment here