ತುಮಕೂರು ಲೈವ್

ರೈತರಿಗೆ ಧ್ವನಿಗೂಡಿಸಿದ ಪ್ರಧಾನಿ ನರೇಂದ್ರ ಮೋದಿ

ಸಸಿಗೆ ನೀರೆರೆಯುವ ಮೂಲಕ ಸಮಾವೇಶ ಉದ್ಘಾಟಿಸಿದ ಪ್ರಧಾನಿ

ತುಮಕೂರು: ದಕ್ಷಿಣ ಭಾರತದಲ್ಲಿ ಕಾಫಿ, ತೆಂಗು, ರಬ್ಬರ್, ಅರಿಶಿಣ, ಸಾಂಬಾರ್ ಪದಾರ್ಥಗಳನ್ನು ಹೆಚ್ಚು ಬೆಳೆಯುತ್ತಿದ್ದು ಈ ಭಾಗ ಸಶಕ್ತವಾದ ಪ್ರದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದ ಬಿಎಸ್ ವೈ

ತುಮಕೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರೈತರ ಸಮಾವೇಶದಲ್ಲಿ ಕೃಷಿ ಸನ್ಮಾನ್ ನಿಧಿಯ ನಾಲ್ಕನೇ ಕಂತು ಹಣ ಬಿಡುಗಡೆ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳನ್ನು ಉಲ್ಲೇಖಿಸಿ ಅಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.

ತೆಲಂಗಾಣ ಮತ್ತು ಕರ್ನಾಟಕದಲ್ಲಿ ಅರಿಶಿಣವನ್ನು ಹೆಚ್ಚು ಬೆಳೆಯಲಾಗುತ್ತಿದೆ. ರಾಜ್ಯದ ಚಿಕ್ಕಮಗಳೂರು ಕೊಡಗಿನಲ್ಲಿ ಕಾಫಿ ಬೆಳೆಯುತ್ತಿದೆ. ಚಿಕ್ಕಬಳ್ಳಾಪುರ ಮತ್ತು ಮೈಸೂರು ಭಾಗದಲ್ಲಿ ಗುಲಾಬಿ ಈರುಳ್ಳಿ ಉತ್ಪಾದನೆ ಹೆಚ್ಚಾಗಿದ್ದು ಇವುಗಳ ರಫ್ತು ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಾಂಬಾರ್ ಪದಾರ್ಥಗಳ ರಫ್ತು ಮಾಡುವಲ್ಲಿ ದಕ್ಷಿಣ ರಾಜ್ಯಗಳು ಹೆಚ್ಚು ಶಕ್ತಿಶಾಲಿಯಾಗಿವೆ ಎಂದು ತಿಳಿಸಿದರು.

ರೈತರಿಗೆ ನಮಿಸಿದ ಮೋದಿ. ಸಚಿವ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಸೋಮಣ್ಣ, ಲಕ್ಷ್ಮಣ ಸವದಿ

ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಗುರಿಮುಟ್ಟಲು ರೈತರ ಕೊಡುಗೆ ಅಪಾರವಾಗಿದೆ. ವಾಣಿಜ್ಯ ಬೆಳೆ ರಫ್ತು ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಹವಾಮಾನ, ಮಣ್ಣು, ಸಮುದ್ರ ವ್ಯವಸ್ತೆ ಚೆನ್ನಾಗಿರುವುದರಿಂದ ಇಲ್ಲಿನ ಉತ್ಪಾದನೆಯನ್ನು ರಫ್ತು ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣದಲ್ಲಿ ಬೆಳೆಯುವ ಬೆಳೆಗಳನ್ನು ರಫ್ತು ಅಭಿವೃದ್ಧಿ ಪ್ರಾಧಿಕಾರದ ಮೂಲಕ ರಫ್ತು ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ತೆಂಗಿನ ಬೆಳೆಗೆ ಬೆಲೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕೃಷಿಕರಿಗೆ ಸಂಬಂಧಿಸಿದಂತೆ ನೀರಾವರಿ ಯೋಜನೆ, ಫಸಲ್ ಬಿಮಾ ಯೋಜನೆ, ಮಣ್ಣು ಪರೀಕ್ಷೆ ಕಾರ್ಯ ಸೇರಿದಂತೆ ಹಲವು ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬಹಳ ವರ್ಷಗಳಿಂದ ಬೇಡಿಕೆ ಇದ್ದ ಕನಿಷ್ಟ ಬೆಂಬಲ ಬೆಲೆ ಒಂದೂವರೆ ಪಟ್ಟು ಹೆಚ್ಚಳ ಮಾಡಲು ಚಿಂತನೆ ಮಾಡಲಾಗಿದೆ ಎಂದರು. ಅಲ್ಲದೇ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ್ಣು-ತರಕಾರಿಗಳ ಶೇಖರಣೆಯ ಕ್ಷಮತೆಯನ್ನು ಹೆಚ್ಚಿಸಲಾಗುವುದು ಎಂದರು.

ಕರ್ನಾಟಕದಲ್ಲಿ ಬೆಳಗಾಂ-ಮೈಸೂರಿನಿಂದ ಬಾದಾಮಿ, ಚಿಕ್ಕಬಳ್ಳಾಪುರ-ಬೆಂಗಳೂರಿನಿಂದ ಈರುಳ್ಳಿ, ಕೊಡಗು-ಚಿಕ್ಕಮಗಳೂರು ಜಿಲ್ಲೆಯಿಂದ ಕಾಫಿ ಹಾಗೂ ಒಣಮೆಣಿಸಿಕಾಯಿಯನ್ನು ಬೆಳೆಯುತ್ತಿದ್ದು, ಈ ಪದಾರ್ಥಗಳಿಗೆ ಕ್ಲಸ್ಟರ್ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಅಲ್ಲದೇ ಭಾರತದ ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ರಫ್ತಿನಲ್ಲಿ ಸುಮಾರು 15 ಸಾವಿರ ಕೋಟಿಯಿಂದ 19 ಸಾವಿರ ಕೋಟಿಯವರೆಗೆ ಹೆಚ್ಚಳವಾಗಿದೆ ಎಂದರು.

ಸಮಾವೇಶದಲ್ಲಿ ಭಾಗವಹಿಸಿದ್ದ ರೈತರು

ದಕ್ಷಿಣ ಭಾರತದಲ್ಲಿ ತೆಂಗು, ಗೋಡಂಬಿ ಬೆಳೆಗಳನ್ನು ಬೆಳೆಯುತ್ತಿದ್ದು, ಕರ್ನಾಟಕದಲ್ಲಿ ಸುಮಾರು 550ಕ್ಕೂ ಹೆಚ್ಚು ಸೊಸೈಟಿಗಳಿರುವ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತೆಂಗು ಬೆಳೆಗೆ ಸೂಕ್ತ ಬೆಲೆ ನೀಡಲಾಗುವುದು ಎಂದರು.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿ, ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ನಷ್ಟವಾಗಿರುವ ಬಗ್ಗೆ ಪ್ರಧಾನ ಮಂತ್ರಿಯವರ ಗಮನಕ್ಕೆ ತಂದಿದ್ದೇನೆ. ಕರ್ನಾಟಕಕ್ಕೆ 50 ಸಾವಿರ ಕೋಟಿ ರೂ.ಗಳನ್ನು ಪ್ರಕೃತಿ ಪರಿಹಾರ ನಿಧಿಯಿಂದ ನೀಡುವಂತೆ ಪ್ರಧಾನ ಮಂತ್ರಿಗಳಲ್ಲಿ ಕೋರಿದರು.

ಹಲವು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಈ ಯೋಜನೆಗಾಗಿ ಕರ್ನಾಟಕ ರಾಜ್ಯಕ್ಕೆ 50 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕೆಂದು ಮನವಿ ಮಾಡಿದರು.

Comment here