ಜಸ್ಟ್ ನ್ಯೂಸ್

ಲಾಕ್ ಡೌನ್ ನಿಂದ 15 ಕೋಟಿ ಉದ್ಯೋಗ ನಷ್ಟ

Tumkuru: ದೇಶದಲ್ಲಿ ಕೊರೊನ ಲಾಕ್ ಡೌನ್ ಪರಿಣಾಮ 15 ಕೋಟಿ ಉದ್ಯೋಗಗಳು ನಷ್ಟವಾಗಿವೆ. ಐದು ಕೋಟಿಯಷ್ಟು ಯುವಜನತೆ ಉದ್ಯೋಗ ಕಳೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಜಿಡಿಪಿಯ ಶೇ.1ರಷ್ಟು ಪರಿಹಾರವನ್ನು ಮಾತ್ರ ಕೇಂದ್ರ ಸರ್ಕಾರ ನೀಡಿದೆ. ಆದರೆ ಜಿಡಿಪಿಯ ಶೇ10ರಷ್ಟ ನೀಡಲಾಗಿದೆ ಎಂದು ಸುಳ್ಳು ಹೇಳಲಾಗುತ್ತಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ.

ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ವಿಡಿಯೋ ಸಂವಾದ ನಡೆಸಿದ ಯೆಚೂರಿ ಮೋದಿ ಸರ್ಕಾರ ಕೊರೊನ ಸಂದರ್ಭವನ್ನು ಸರಿಯಾಗಿ ನಿಭಾಯಿಸಿಲ್ಲ. ಕೇಂದ್ರ ಸರ್ಕಾರ ಪೂರ್ಯತಯಾರಿ ನಡೆಸದೆ ಕೈಗೊಂಡ ಕ್ರಮಗಳಿಂದ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾದರು.

ಕೊರೊನ ವಾರಿಯಾರ್ ಗಳಿಗೆ ಪಿಪಿಇ ಕಿಟ್ ಗಳನ್ನು ಕೊಡಲು ಆಗಲಿಲ್ಲ. ಮೋದಿ ಸರ್ಕಾರ ಖಾಸಗಿ ವೈದ್ಯಕೀಯ ವ್ಯವಸ್ಥೆಯನ್ನುಬಳಸಿಕೊಳ್ಳಲು ಮುಂದಾಗಲಿಲ್ಲ ಎಂದು ಹೇಳಿದರು.

ದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಪರೀಕ್ಷೆ ಹೆಚ್ಚಿದೆ. ಇದರ ನಡುವೆಯೇ ಸೋಂಕು ಕೂಡ ವ್ಯಾಪಿಸುತ್ತಿದೆ. 1000 ಸೋಂಕಿತರಿಗೆ ಕೇವಲ 0.82 ವೈದ್ಯರು, 1000 ಸೋಂಕಿತರಿಗೆ ಕೇವಲ 0.7ರಷ್ಟು ಹಾಸಿಗೆಗಳು ಇವೆ ಇದು ಜನರ ಮೇಲೆ ತೀವ್ರ ಪರಿಣಾಮ ಬೀರಿದೆ.

ಅನೌಪಚಾರಿಕ ಮತ್ತು ಸಣ್ಣ ಕೈಗಾರಿಕೆಗಳ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ಸಮಸ್ಯೆ ಎದುರಿಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

ಮುಂಗಾರು ಸಮಯದಲ್ಲಿ ಕೃಷಿ ಬಿಕ್ಕಟ್ಟು ಉದ್ಭವಿಸಿದೆ. ಬಿತ್ತನೆ ಬೀಜ ಮತ್ತು ಗೊಬ್ಬರಕ್ಕಾಗಿ ರೈತರು ಪರದಾಡುವಂತಹ ಪರಿಸ್ಥಿತ ಇದೆ. ಆದರೂ ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿರುವುದಾಗಿ ತಿಳಿಸಿದೆ. ನಿಜವಾಗಿಯೂ 3.5ರಷ್ಟು ಮಾತ್ರ ಬೆಂಬಲ ಬೆಲೆ ನೀಡಿದೆ. ಆದರೆ 50ರಷ್ಟು ಬೆಂಬಲ ಬೆಲೆ ನೀಡಿದೆ ಎಂದು ಕೆಂದ್ರ ಸರ್ಕಾರ ಅಸಂಬದ್ದವಾಗಿ ಮಾತನಾಡುತ್ತಿದೆ.

ದೇಶದ ಉಗ್ರಾಣದಲ್ಲಿ 8 ಲಕ್ಷ ಕೋಟಿ ಟನ್ ಆಹಾರ ಧಾನ್ಯಗಳು ಕೊಳೆಯುತ್ತಿದೆ. ಜನರು ತೊಂದರೆಯಲ್ಲಿದ್ದು ಅವರ ನೆರವಿಗೆ ಬರುತ್ತಿಲ್ಲ. ಕೊರೊನ ಕಾಲದಲ್ಲಿ ಪ್ರತಿ ಕುಟುಂಬದ ಖಾತೆಗೆ 7,500 ರೂ ನಗದು ವರ್ಗಾವಣೆ ಮಾಡಬೇಕು.ಆರು ತಿಂಗಳವರೆಗೆ ದೊರೆಯಬೇಕು.

ಪ್ರತಿ ವ್ಯಕ್ತಿಗೂ 10 ಕೆಜಿ ಆಹಾರಧಾನ್ಯವನ್ನು ಆರು ತಿಂಗಳವರೆಗೆ ನೀಡಬೇಕು ಎಂದು ಒತ್ತಾಯಿಸಿದರು.

ಜನರ ಸಹಾಯಕ್ಕೆ ಬಾರದ ಮೋದಿ ಸರ್ಕಾರ ಪಿಎಂ-ಕೇರ್ಸ್ ಹೆಸರಿನ ಬಾಧ್ಯತೆ ಇಲ್ಲದ ಮೋಸದ ಖಾತೆ ತೆರೆದು ಹತ್ತು ಸಾವಿರ ಕೋಟಿ ಸಂಗ್ರಹ ಮಾಡಿದೆ. ಜನರ ಪರಿಸ್ಥಿತಿ ಕುಸಿಯುತ್ತಿದ್ದು ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ.

ಮುಖೇಶ್ ಅಂಬಾನಿ ಏಷ್ಯಾದ ಅತಿದೊಡ್ಡ ಶ್ರೀಮಂತರಾಗಿದ್ದು ಲಾಕ್ ಡೌನ್ ಅವಧಿಯಲ್ಲಿ ಆತನ ಆದಾಯ ಶೇ. 17.7ರಷ್ಟು ಹೆಚ್ಚಳವಾಗಿದೆ.

ಕೈಗಾರಿಕೆಗಳು ಮುಚ್ಚುತ್ತಿವೆ. ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಆರ್ಥಿಕತೆ ಕುಸಿದಿದೆ. ಅಂತಹ ಸಮಯದಲ್ಲೂ ಲಾಭ ಬಂದಿದೆ. ಇದು ಏನನ್ನು ಸೂಚಿಸುತ್ತದೆ ಎಂದು ಪ್ರಶ್ನಿಸಿದರು.

ಕೋರೊನ ಸಂಬಂಧ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಹಲವು ಸೂಚನೆಗಳನ್ನು ಕೊಟ್ಟಿದ್ದೇವೆ.ರಾಷ್ಟ್ರಪತಿ ಮತ್ತು ಪ್ರಧಾನಿಗೆ ಮನವಿಗಳನ್ನು ಕೊಟ್ಟಿದ್ದೇವೆ. ಆದರೂ ಅವುಗಳಲ್ಲಿ ಒಂದನ್ನು ಪರಿಗಣಿಸಲಿಲ್ಲ.

ಪ್ರತಿಪಕ್ಷಗಳ ಜೊತೆ ಸೇರಿ ಪರ್ಯಾಯ ಮಾರ್ಗಗಳನ್ನು ಕೈಗೊಳ್ಳುವ ಸಂಬಂಧ ಸಲಹೆಗಳನ್ನು ನೀಡಿದೆವು. ಮುಂದಿನ ದಾರಿ ಹೇಗಿರಬೇಕು ಎಂದು ಹೇಳಿದೆವು. ಆದರೂ ಅದಕ್ಕೆ ಸ್ಪಂದಿಸಲಿಲ್ಲ.

ಈ ನಡುವೆ 20 ಲಕ್ಷ ಕೋಟಿ ಪ್ಯಾಕೇಜ್ ಸರ್ಕಾರ ಘೋಷಿಸಿದೆ. ಅದು ಸಣ್ಣ ಮೊತ್ತವಾಗಿದೆ. ನಾವು ಜಿಡಿಪಿಯ ಶೇ.5ರಷ್ಟು ಹಣವನ್ನು ಪರಿಹಾರವಾಗಿ ಘೋಷಿಸಬೇಕು ಎಂದು ಒತ್ತಾಯಿಸುತ್ತೇವೆ.

ಆದರೆ ಕೇಂದ್ರ ಇದಕ್ಕೆ ಸಿದ್ದವಿಲ್ಲ. ಜನರ ಬೇಡಿಕೆ ಕುಸಿದಿದೆ. ಹಾಗಾಗಿ ಹಿಂದೆ ತಯಾರಿಸಿದ ವಸ್ತುಗಳನ್ನು ಕೊಳ್ಳಲು ಜನರಿಗೆ ಆಗುತ್ತಿಲ್ಲ. ಬೇಡಿಕೆಗೆ ಪುನಸ್ಛೇತನ ನೀಡಬೇಕು. ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬೇಕು ಆಗ ಮಾತ್ರ ಜನರಿಗೆ ಅನುಕೂಲವಾಗುತ್ತದೆ ಎಂದರು.

Comment here