ಜಸ್ಟ್ ನ್ಯೂಸ್

ಲೋಕೇಶ್ ‘ಐ ಲವ್ ಯು’ ಅಂತ ಹೇಳಲೇ ಇಲ್ಲ: ಗಿರಿಜಾ

ಲೋಕೇಶ್ ಅವರಿಂದ ‘ಐ ಲವ್ ಯು’ ಎಂದು ಹೇಳಿಸಿಕೊಳ್ಳಲು ತುಂಬಾ ಆಸೆಯಿತ್ತು. ಆದರೆ ಅವರು ಇಡೀ ಜೀವನದಲ್ಲಿ ಹಾಗೆ ಹೇಳಲೇ ಇಲ್ಲ ಎಂದು ಖ್ಯಾತ ಕಲಾವಿದೆ ಗಿರಿಜಾ ಲೋಕೇಶ್ ಅವರು ನಗು ನಗುತ್ತಾ ಹೇಳಿದರು.

‘ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ‘ಚಾಕ್ ಸರ್ಕಲ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ತಮ್ಮ ನೆನಪಿನ ಓಣಿಯಲ್ಲಿ ಹೆಜ್ಜೆ ಹಾಕಿದರು.

ಲೋಕೇಶ್ ಅವರಿಂದ ನನ್ನ ನಟನೆಗೆ ಮೆಚ್ಚುಗೆ ಪಡೆಯಬೇಕು ಎನ್ನುವ ಆಸೆ ನನಗೆ ಇತ್ತು. ಅವರು ಅದನ್ನು ಬಾಯಿಬಿಟ್ಟು ಹೇಳದಿದ್ದರೂ ಮೌನದಲ್ಲಿಯೇ ಎಲ್ಲ ವ್ಯಕ್ತಪಡಿಸಿಬಿಡುತ್ತಿದ್ದರು ಎಂದರು.

ನನ್ನ ಬದುಕಿನಲ್ಲಿ ಸಾಕಷ್ಟು ಏರಿಳಿತಗಳಿದ್ದವು. ಆದರೆ ನಾನು ಕಷ್ಟ ಬಂದಾಗ ಕುಗ್ಗಲೂ ಇಲ್ಲ. ಬೇರೆ ಸಮಯದಲ್ಲಿ ಹಿಗ್ಗಲೂ ಇಲ್ಲ. ನಾನು ಬದುಕಿನ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿದೆ. ಬಹುಷಃ ಆ ಕಾರಣದಿಂದಾಗಿಯೇ ಇರಬೇಕು ನಾನು ಸದಾ ನಗು ನಗುತ್ತಲೇ ಜೀವನ ಯಾತ್ರೆ ನಡೆಸಿದ್ದೇನೆ ಎಂದರು.

ತಮ್ಮ ಹಾಡಿಗೆ ಕಲ್ಲೇಟು ತಿಂದದ್ದು, ಫಿಲಂ ಹಾಡಿಗೆ ನೃತ್ಯ ಮಾಡಲು ಒಲ್ಲೆ ಎಂದದ್ದರಿಂದ ಹಿಡಿದು ರಂಗಭೂಮಿಯಲ್ಲಿ ಅತಿರಥ ಮಹಾರಥರಿಂದ ಪ್ರಶಂಸೆ ಗಳಿಸಿದ್ದು, ಸಿನೆಮಾ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದು ಎಲ್ಲವೂ ನನ್ನ ಬದುಕಿನ ಮುಖ್ಯ ಭಾಗಗಳೇ ಎಂದರು.

ಲೋಕೇಶ್ ಅವರು ಮೌನಿ ನಾನು ವಾಚಾಳಿ ಆದರೂ ನಾವು ಎಷ್ಟು ಚಂದ ಬದುಕು ನಡೆಸಿದೆವು. ನನ್ನ ಹಾಗೂ ಲೋಕೇಶ್ ಅವರ ಮದುವೆಯ ದಿನವೇ ನಾವು ಕಾಕನ ಕೋಟೆಯಲ್ಲಿ ಅಪ್ಪ ಮಗಳಾಗಿ ಅಭಿನಯಿಸಿದ್ದೆವು. ನಾಟಕದ ಕೊನೆಯಲ್ಲಿ ನಮ್ಮ ಮದುವೆಯ ವಿಷಯವನ್ನು ಘೋಷಿಸಿದಾಗ ಎಲ್ಲಾ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಇದಕ್ಕಿಂತ ಮಿಗಿಲಾದ ಆಶೀರ್ವಾದ ಮತ್ತಾವುದಿದೆ. ಆ ಕಾರಣಕ್ಕಾಗಿಯೇ ನಾವು ಸಂಭ್ರಮದ ಸಂಸಾರ ನಡೆಸಿದೆವು ಎಂದರು.

ಲೋಕೇಶ್ ಅವರ ಖಡಕ್ ವ್ಯಕ್ತಿತ್ವ, ಸ್ನೇಹಕ್ಕೆ ಸೋಲುವ ಗುಣ, ಅಭಿನಯದಲ್ಲಿನ ತಾದ್ಯಾತ್ಮತೆ, ಊಟದಲ್ಲಿನ ಅಭಿರುಚಿ ಎಲ್ಲವನ್ನೂ ಗಿರಿಜಾ ಲೋಕೇಶ್ ಮಾತುಕತೆಯಲ್ಲಿ ಕಟ್ಟಿಕೊಟ್ಟರು.

‘ಅವಧಿ’ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಸಂವಾದ ನಡೆಸಿದರು.

Comment here