ಜಸ್ಟ್ ನ್ಯೂಸ್

ವಕೀಲರೊಬ್ಬರ ಹಲ್ಲು ಮುರಿದ ಪೊಲೀಸರು…

Banavara : ದೂರು ನೀಡಲು ಹೋದ ಯುವ ವಕೀಲರೊಬ್ಬರಿಗೆ ಪೊಲೀಸರು ಹಲ್ಲು ಮುರಿದು ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರಿನ ಬಾಣಾವರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಕಳೆದ ರಾತ್ರಿ 9.30 ರಲ್ಲಿ ಬಾಣಾವರ ಠಾಣೆಗೆ ಹೋದ ಯುವ ವಕೀಲರು ತಮ್ಮ ತಂದೆ-ತಾಯಿಯನ್ನು ಅತ್ತೆಯ ಮನೆಯಲ್ಲಿ ಕಾನೂನುಬಾಹಿರವಾಗಿ ಇಟ್ಟುಕೊಂಡಿದ್ದಾರೆ ಎಂದು ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕೂಡಲೇ ಪೊಲೀಸರು ಆ ಯುವ ವಕೀಲರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರ ಥಳಿತದಿಂದ ವಕೀಲನ ಮೇಲ್ಭಾಗದ ಅರ್ಧದಷ್ಟು ಹಲ್ಲುಗಳು ಮುರಿದು ಹೋಗಿವೆ. 13 ಮಂದಿ ಪೊಲೀಸರು ಒಬ್ಬರಾದ ಮೇಲೆ ಒಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವಕೀಲ ತಿಳಿಸಿದ್ದಾರೆ.

ಸಬ್ ಇನ್ಸ್ ಪೆಕ್ಟರ್ ಮುರುಳಿ ಸಮ್ಮುಖದಲ್ಲಿ ಎಲ್ಲಾ ಪೊಲೀಸರು ಅಮಾನವೀಯವಾಗಿ ಕ್ರೌರ್ಯದಿಂದ ನನ್ನ ತೊಡೆ, ತಲೆ, ಕತ್ತು, ಬೆನ್ನು, ಕಾಲು ಹೀಗೆ ಎಲ್ಲೆಂದರಲ್ಲಿ ಹೊಡೆದರು. ಒಂದು ಗಂಟೆ ಕಾಲ ಬಟ್ಟೆ ಬಿಚ್ಚಿಸಿ ಅಪರಾಧಿಯಂತೆ ನಿಲ್ಲಿಸಿದ್ದರು ಎಂದು ನೊಂದ ವಕೀಲ ಹೇಳಿದ್ದಾರೆ.

ನನ್ನ ಮೇಲೆ ರಾಕ್ಷಸರಂತೆ ಹಲ್ಲೆ ನಡೆಸಿದ ಪೊಲೀಸರು ಒಂದು ಗಂಟೆಯ ನಂತರ ಅಂಬೇಡ್ಕರ್ ಕಾಲೇಜಿಗೆ ಕರೆದುಕೊಂಡು ಹೋದರು. ತಡರಾತ್ರಿಯಾಧರೂ ಒಂದು ಅಗುಳು ಅನ್ನವನ್ನು ನೀಡಲಿಲ್ಲ. ನೀರು ಕೇಳಿದರೂ ಕೊಡಲಿಲ್ಲ ಎಂದು ದೂರಲಾಗಿದೆ.

ಅಂಬೇಡ್ಕರ್ ಕಾಲೇಜಿನಿಂದ ಬೌರಿಂಗ್ ಆಸ್ಪತ್ರೆಗೆ ಕೇವಲ 20 ನಿಮಿಷದಲ್ಲಿ ಹೋಗಬಹುದು. ಆದರೆ ಜೀಪಿನಲ್ಲಿ ನನ್ನನ್ನು ಕುಳ್ಳರಿಸಿಕೊಂಡ ಪೊಲೀಸರು ದಾರಿ ಮಧ್ಯೆ ಚಹಾ ಕುಡಿದು, ಜೀಪಿನ್ನು ಅಲ್ಲಲ್ಲಿ ನಿಲ್ಲಿಸಿಕೊಂಡು ಬೌರಿಂಗ್ ಆಸ್ಪತ್ರೆ ಹೋಗಲು ಸುಮಾರು 40 ನಿಮಿಷ ತೆಗೆದುಕೊಂಡರು. ಪೊಲೀಸರು ಬೇಕಂತಲೇ ವಿಳಂಬ ಮಾಡಿದರು ಎಂದು ವಕೀಲ ಹೇಳಿದ್ದಾರೆ.

ಠಾಣೆಯಲ್ಲಿ ನನ್ನ ಮೇಲೆ 13 ಮಂದಿ ಪೊಲೀಸರು ಮನಬಂದಂತೆ ಥಳಿಸಿ ಹಲ್ಲೆ ನಡೆಸಿ ಹಿಂಸೆ ನೀಡಿದ್ದು ಠಾಣೆಯಲ್ಲಿದ್ದ ಸಿಸಿಟಿವಿಯಲ್ಲಿ ಇದೆಲ್ಲವೂ ರೆಕಾರ್ಡ್ ಆಗಿತ್ತು. ಇದೆಲ್ಲವನ್ನು ಪೊಲೀಸರು ಡಿಲೀಟ್ ಮಾಡಿದ್ದಾರೆ ಎಂದು ನೊಂದ ವಕೀಲ ಆರೋಪಿಸಿದ್ದಾರೆ.

ಪೊಲೀಸರಿಂದ ಹಲ್ಲೆಗೊಳಗಾದ ಯುವ ವಕೀಲರನ್ನು ಬೌರಿಂಗ್ ಆಸ್ಪತ್ರೆಗೆ ಕರೆತಂದಾಗ ಅತನಿಂದ ಮಾಹಿತಿ ಪಡೆಯಲು ಮೊಬೈಲ್ ನಲ್ಲಿ ವಿಡಿಯೋ ಮಾಡಲು ಹೋದಾಗ ಪೊಲೀಸರು ಅಡ್ಡಿಪಡಿಸಿದ್ದಾರೆ. ವಿಡಿಯೋ ಮಾಡುವ ವಕೀಲರು ನಾವು ಮಾಹಿತಿಯಷ್ಟೇ ಪಡೆಯುತ್ತಿದ್ದೇವೆ. ನಾವು ಯಾವುದೇ ಪ್ರಚೋದನೆ ನೀಡಿಲ್ಲ ಎಂದು ಹೇಳಿದರೂ ಪೊಲೀಸರು ವಕೀಲನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದು ಪೂರ್ತಿ ವಿಡಿಯೋ ಮಾಡಲು ಬಿಡಲಿಲ್ಲ ಎಂದು ಆರೋಪಿಸಲಾಗಿದೆ.

ವಿಡಿಯೋ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ.

Comment here