ಕವನ

ಸುಟ್ಟ ಹೆಣಗಳ ಕಪ್ಪು ಹೊಗೆ

ತಿಪಟೂರುಕೃಷ್ಣ.

ಭುವಿಯಿಂದ ಮುಗಿಲೆತ್ತರಕ್ಕೆ
ನರಳಿ ನರಳಿ ಹಾರುತ್ತಿದೆ
ಸುಟ್ಟ ಹೆಣಗಳ ಕಪ್ಪು ಹೊಗೆ

ಗಗನದುದ್ದಕ್ಕೂ ಹರಡುತ್ತಿದೆ
ಬಂಧನಗಳ ಕಳೆದುಕೊಂಡ
ಸತ್ತಾತ್ಮಗಳ ಕರಿ ನೆರಳು
ಕೊಂದವರ ನಿಂದಿಸುತಾ

ಅಮಾಯಕ ಜೀವಗಳ ಬಲಿಗೈದು
ಮುಟ್ಟಿ ಮುಟ್ಟಿ ನೋಡುತ್ತಿದೆ
ದುಷ್ಟತನದ ಕೆನ್ನಾಲಿಗೆ

ಅಮ್ಮನೋ, ಅಕ್ಕನೋ, ಅಣ್ಣನೋ
ತಮ್ಮನೋ, ಗಂಡನೋ
ಉಸಿರು ನಿಂತ ಮುಗಿದ ಜೀವ
ಕಮರುತ್ತಿದೆ ಬೆಂಕಿಯೊಳಗೆ

ಬತ್ತಿದ ಕಣ್ಣೊಳಗೆ ಬಿಟ್ಟನಿಟ್ಟುಸಿರು
ಗೊಗರೆಯುತ್ತಿದೆ ಅಂಗಲಾಚಿ
ಬಯಲಾದವರ ನೆನೆನೆನೆದು
ನೀಲಿ ಕಣ್ಣೊಳಗೆ ಕೆಂಪು

ಒಂದಲ್ಲ, ಎರಡಲ್ಲ, ನೂರಲ್ಲ
ಸಾವಿರ, ಲಕ್ಷ ಉಸಿರುಗಳ ಚೀರಾಟ
ಕಣ್ಣುಕಾಣದ ಎದೆಯೊಳಗೆ
ಕಿತ್ತಳೆ ಬಣ್ಣದ ಕೊರೋನಾ

ಅತ್ತು ಕರೆದರೂ ಸಿಗದ ಮುಖ
ಗೊತ್ತಿಲ್ಲದೇ ಹೊತ್ತೊಯ್ದ ಕಟುಕ
ನಾನು ಅನ್ನುವರಿಲ್ಲದ ಈ ಲೋಕ
ಬರಸಿಡಿಲಿನಂತೆ ಬಂದ ಆಗಂತುಕ

Comment here