ಜನಮನ

ಹುಟ್ಟಿದ‌ ದಿನ ಈ ಕಷ್ಟ ಯಾರಿಗೂ‌ ಬಾರದಿರಲಿ…

ಚಿದು


ಆ ದಿನ 6 ಡಿಸೆಂಬರ್ 2017 ಬೆಳಿಗಿನ ಜಾವವೇ ನನ್ನ ಜಂಗಮವಾಣಿ ರಿಂಗಣಿಸಿತ್ತು. ಮೆತ್ತನೆ ಹಾಸಿಗೆಯಲ್ಲಿ ಚಳಿಗೆ ಹೊದ್ದಿ ಮಲಗಿದ್ದ ನನ್ನ‌ನಿದ್ದೆಗೆ ಸ್ನೇಹಿತರ ದಂಡು ಶುಭಾಯಗಳು ಭಂಗ ತರುವಲ್ಲಿ‌ ಯಶಸ್ಸು ಕಂಡಿದ್ದವು.

ಒಬ್ಬೊಬ್ಬರದ್ದು ಒಂದೊಂದು ರೀತಿಯ ಪ್ರೀತಿಯ ಹಾರೈಕೆ ನನ್ನನ್ನು ಮೂಖ‌ ವಿಸ್ಮಿತನಾಗಿಸಿತ್ತು. “ಅಣ್ಣಾ ಸಂಜೆ ನಿನ್ನ ಹುಟ್ಟುಹಬ್ಬಕ್ಕಾಗಿ ಸ್ನೇಹಿತರಿಗೆಲ್ಲ ಸಸ್ಯ ಹಾಗೂ ಮಾಸಹಾರಿ ಭರ್ಜರಿ ಊಟದ ವ್ಯವಸ್ಥೆಯಾಗಿದೆ. ನೀವೆಲ್ಲೂ ಹೋಗುವಾಗಿಲ್ಲ. ಸರಿಯಾದ ಸಮಯಕ್ಕೆ ತಯಾರಾಗಿ ಸ್ಥಳಕ್ಕೆ ಬನ್ನಿ” ಎಂಬ ಆತ್ಮೀಯ ಗೆಳೆಯರ ಮೆದು ಪ್ರೀತಿಯ ಆಹ್ವಾನದ ಆದೇಶ ನನಗೆ ಇನ್ನಷ್ಟು ಮೂಖವಾಗಿಸಿತ್ತು.

ಅದಾವ ಜನ್ಮದ ಪುಣ್ಯವೋ ಇಂಥ ಸ್ನೇಹಿತರು ನನ್ನೊಂದಿಗಿದ್ದಾರಲ್ಲ ಎಂದು ಮನಸು ಬೀಗುತ್ತಿತ್ತು. ಅದಾಗಲೇ ಮನೆಯೊಳಗಿನ ಗಡಿಯಾರದ ಮುಳ್ಳು ಬೆಳಗಿನ ಎಂಟು ಗಂಟೆ ದಾಟಿತ್ತು.

ಅಷ್ಟೊತ್ತಿಗಾಗಲೇ ನೂರಾರು ಸ್ನೇಹಿತರು, ಆತ್ಮೀಯರು, ನನ್ನದೇ ಆದ ವಿದ್ಯಾರ್ಥಿ ಗುಂಪು ನನ್ನ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಎದ್ದಾಗಿನಿಂದ ಬರೀ ಜಂಗಮವಾಣಿ ರಿಂಗಣಿಸಿ‌ ಕರೆಗಳ ಸಂದೇಶ, ಶುಭಾಶಯ ಆಲಿಸಿದ್ದ ನನ್ನ ಮನಸ್ಸು ಹಕ್ಕಿಯಂತೆ ಹಾರಿ ಕುಣಿಯತ್ತಾ ಬೀಗುತ್ತಿತ್ತು.

ಆ ಹೊತ್ತಿಗೆ ನಮ್ಮಣ್ಣನ ಕರೆಯ ರಿಂಗಣದ ಸದ್ದು ಸ್ನಾನಕ್ಕೆಂದು ಹೋದ ನನ್ನ ಕಿವಿ ತಾಕಿತ್ತು. ಅಡುಗೆ ಮನೆಯಲ್ಲಿ‌ ನನ್ನ ಹುಟ್ಟುಹಬ್ಬದ ಸಲುವಾಗಿ ಸಿಹಿ ಅಡುಗೆ ತಯಾರಿಯಾರಲ್ಲಿದ್ದ ಮಡದಿ “ರೀ ಯಾವುದೋ ಪೋನ್ ಕಾಲ್ ಬಂತು” ಎಂದು ಜಂಗಮವಾಣಿ‌ಸದ್ದಿಗೆ ಧನಿಗೂಡಿಸಿದ್ದಳು.

ಜಳಕಕೆಂದು ಸ್ನಾನಗೃಹಕ್ಕೆ ಹೋದವನು ಅರೆಬರೆಯಾಗಿಯೇ ಮನೆಯ ಪಡಸಾಲೆಗೆ ಬಂದು “ಅರೆ ಅಣ್ಣನ ಕರೆ, ಓ‌ ಅಣ್ಣಂಗೂ ಗೊತ್ತಾಯ್ತಾ ನನ್ನ ಹುಟ್ಟಿದಬ್ಬ ಇವತ್ತು ಅಂತಾ” ಎಂತಲೇ ಖುಷಿಯಿಂದ ಜಂಗಮವಾಣಿ ಕರೆ ತೆಗೆದುಕೊಂಡೆ. “ಹಲೋ.. ಎಲ್ಲಿದ್ದೀಯಾ.. ಎಲ್ರೂ ಊರಿಗೆ ಬಂದುಬಿಡ್ರಿ” ಎಂದು ಅಣ್ಣ ಆ ಕಡೆಯಿಂದ ಅಂದಾಗ “ಅರೆ ನನ್ನ ಹುಟ್ದಬ್ಬಕ್ಕೆ ಅಣ್ಣ ಊರಲ್ಲೇ ಏನಾದ್ರು ಅಡುಗೆ ಮಾಡ್ಸೋಕೆ ಕರಿತಿದಾರೆ” ಅಂತ ಕ್ಷಣಾರ್ಧದಲ್ಲಿ ನನ್ನ ಮನಸ್ಸು ಆಲೋಚಿಸ ತೊಡಗಿತ್ತು. ಆದರೂ ಹೊತ್ತಟ್ಟಿಗೆ ಬಂದ ಖುಷಿಯಲ್ಲಿ ‘ಯಾಕಣ್ಣ..?’ ಅಂತ ಪ್ರಶ್ನಿಸಿದೆ. ಅಣ್ಣ ಅರೆ ಕ್ಷಣ ನಿಶಬ್ದರಾಗಿ “ಅಮ್ಮಾ ಹೋದರು.. ಎಲ್ರೂ ಊರಿಗೆ ಬನ್ನಿ” ಎಂದಾಗ ಒಮ್ಮಲೆ‌ ಮುಗಿಲು ಮೇಲೆ ಕುಸಿದು, ಬರಸಿಡುಲು ಒಮ್ಮೆಲೆ ಬಡಿದಂತಾಯಿತು. ಹುಟ್ಟುಹಬ್ಬದ ಅಮಲಿನಲ್ಲಿ‌ ತೇಲುತ್ತಿದ್ದವನ ನಿಶೆಯನ್ನು ದುಃಖ ಆವರಿಸಿತ್ತು. ಅಮ್ಮ ನನ್ನ ಹುಟ್ಟುಹಬ್ಬದ ದಿನವೇ ಕೊನೆಯ ಉಸಿರು ಎಳೆದಿದ್ದರು. ಅಂದೇ ಮಣ್ಣಲ್ಲಿ ಮಣ್ಣಾಗಿ ಹೋದರು.

ಬಹುಶಃ ನಾನು ಇಂತದೊಂದು ಪ್ರಸಂಗ ನನ್ನ‌ ನಿಜ ಜೀವನದಲ್ಲಿ ಬರುತ್ತದೆಂದು ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಅನಿರೀಕ್ಷಿತವಾದ ಆ ಸಂದರ್ಭ ನನ್ನ ಮನಸಿನಲ್ಲಿ ಅಗಾಧವಾದ ನೆನಪಿನ ನೋವುಗಳನ್ನು ಉಳಿಸಿಬಿಟ್ಟಿತು.

ನನ್ನ ಕೊನೆ ಉಸಿರು ಇರುವ ತನಕ ಹೆತ್ತವ್ವಳನ ಮಮತೆ, ವಾತ್ಸಲ್ಯ ನೆನಪಿನಂಗಳದಲ್ಲಿ ನೆನಪಾಗಿಯೇ ಉಳಿದುಹೋದವು. ಎಸ್ಸೆಸ್ಸೆಲ್ಸಿ ಯಲ್ಲಿ ನಾಲ್ಕು ವರ್ಷ ನಪಾಸಾಗಿ ವಿದ್ಯಾಭ್ಯಾಸ ಮೊಟುಕುಗೊಳಿಸಿ ಹುಟ್ಟಿದ ದಿನ, ದಿನಾಂಕದ ಅರಿವೇ ಇರದ‌ ನನಗೆ ಈಚೆಗಷ್ಟೆ ಸ್ನೇಹಿತರ ಒತ್ತಾಸೆಯಿಂದಾಗಿ ಹುಟ್ಟು ಆಚರಣೆ ಅರಿವಾಗಿತ್ತು. ಅದೇ ದಿನ ಅಮ್ಮನ ಅಗಲಿಕೆಯ‌ ನೋವು ಇವೆಲ್ಲಾ ಮಜಲುಗಳನ್ನು ಮೀರಿಸುವಷ್ಟು ಮೈಮನ ಹೊಕ್ಕಿದೆ.

ಈಗ ಪ್ರತಿ ವರ್ಷ ಡಿಸೆಂಬರ್ 6 ದಿನ ಅದ್ಯಾಕಾದರೂ ಬರುತ್ತೊ ಎನ್ನುವಷ್ಟು ಮನಸ್ಸು ಮೊಂಡಾಗಿಹೋಯ್ತು. ನನ್ನ ಹುಟ್ಟಿದಬ್ಬ ಇವತ್ತು ಅಂತ ಬೀಗಲೇ..? ಇಲ್ಲಾ ಅಮ್ಮನ ಕಳೆದುಕೊಂಡು ಅನಾಥನಾದಲ್ಲ ಅಂತ ಮರುಗಲೇ..? ಛೇ.. ಹುಟ್ಟಿದ ದಿನದಂದೆ ಅಮ್ಮನ ಕಳೆದುಕೊಂಡ ಇಂತ ಸ್ಥಿತಿ ಅದಾವ ಮಗನಿಗೂ ಬಾರದಿರಲಿ.

ಪ್ರತಿ ದಿನ ಕಾಡುವ ಅಮ್ಮನ ಅಗಲಿಕೆ ನೋವು‌ ನನ್ನ ಹಟ್ಟಿದ ದಿನ‌ ಎಂದಾಗ ಇನ್ನಷ್ಟು ಇಮ್ಮಡಿಸುತ್ತದೆ. ಇದಕ್ಕೆ ಅಳಲೋ… ಇಲ್ಲಾ ನಗಲೋ… ಉಳಿದವರಿಗಿಂತ ಕಳೆದು ಹೋದವರ ನೆನಪು ಅನುದಿನ ಕಾಡುತ್ತೆ. ಮನಸು ಭಾರ ಅನಿಸುತ್ತೆ. ಕಣ್ಣಾಲಿಗಳು ನೀರದುಂಬಿ ಮಾತು ಮೌನಕ್ಕೆ ಶರಣಾಗಿ, ಮನಸು ದುಃಖದಡವಿಯಲ್ಲಿ ಸಿಲುಕುತ್ತೆ.

Comment here