ಕವನಸಾಹಿತ್ಯ ಸಂವಾದ

ಹೋಗದಿರಿ ದೇವಳಕ್ಕೆ


ಶಶಿಕುಮಾರ ವೈ ಬಿ


ಹೋಗದಿರಿ ದೇವಳಕ್ಕೆ,
ದೇವರ ಪಾದಗಳ ಮೇಲೆ ಹೂಗಳನ್ನಿಡಲು.
ಮೊದಲು ತುಂಬಿಕೊಳ್ಳಿ ನಿಮ್ಮ ಮನೆಯ,
ಪ್ರೀತಿ, ಕರುಣೆಗಳ ಸುಗಂಧದಿಂದ.

ಹೋಗದಿರಿ ದೇವಳಕ್ಕೆ,
ದೇವನ ಪೀಠದ ಮುಂದೆ ಮೋಂಬತ್ತಿಗಳ ಉರಿಸಲು.
ಮೊದಲು ತೊಲಗಿಸಿ ನಿಮ್ಮ ಹೃದಯದಿಂದ,
ಪಾಪ, ಹಮ್ಮು, ಅಹಮ್ಮಿನ ಅಂಧಕಾರವ.


ಹೋಗದಿರಿ ದೇವಳಕ್ಕೆ,
ಪ್ರಾರ್ಥನೆಯಲ್ಲಿ ನಿಮ್ಮ ಶಿರವ ಬಾಗಿಸಲು.
ಮೊದಲು ಕಲಿಯಿರಿ, ಸಹವ್ಯಕ್ತಿಗಳ ಮುಂದೆ ನಮ್ರತೆಯಲ್ಲಿ ಬಾಗಲು,
ಹಾಗೆಯೇ ನಿಮಗೆ ಕೇಡೆಣಿಸಿದವರಿಗೂ ಲೇಸೆಣಿಸಲು.

ಹೋಗದಿರಿ ದೇವಳಕ್ಕೆ,
ಮೊಣಕಾಲೂರಿ ಪ್ರಾರ್ಥಿಸಲು.
ಮೊದಲು ಬಾಗಿರಿ, ಕೆಳಬಿದ್ದವನ ಮೇಲೆತ್ತಲು,
ಹಾಗೆಯೇ ನವ ಸಂತತಿಯ ಹೊಸಕದೆ ಬಲಪಡಿಸಲು.

ಹೋಗದಿರಿ ದೇವಳಕ್ಕೆ,
ಮಾಡಿದ ಪಾಪಕ್ಕೆ ಕ್ಷಮೆ ಬೇಡಲು.
ಮೊದಲು ಮನಸಾರೆ ಕ್ಷಮೆ ನೀಡಿ, ನಿಮಗೆ ನೋವುಣಿಸಿದವರಿಗೂ.


ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಠಾಗೂರರ ಆಂಗ್ಲ ಕವಿತೆ ‘Go not to the Temple’ನ ಕನ್ನಡ ಅನುವಾದ.
ಅನುವಾದಕರು : ಶಶಿಕುಮಾರ ವೈ. ಬಿ.

ಆಂಗ್ಲಭಾಷಾ ಉಪನ್ಯಾಸಕರು,
ಶೇಷಾದ್ರಿಪುರಂ ಪದವಿಪೂರ್ವ ಕಾಲೇಜು,
ತುಮಕೂರು.

Comments (1)

  1. 🙏🏼🙏🏼

Comment here