ಭಾನುವಾರದ ಕವಿತೆ

ಭಾನುವಾರದ ಕವಿತೆ: ಸುಂಯ್ ಗಾಳಿ

ಡಾ. ರಜನಿ ಅವರ ಕವನಗಳೆಂದರೆ ಪ್ರಕೃತಿ ಮತ್ತು ಬದುಕಿನ ಮಿಳಿತದ ಅನುಭೂತಿ. ಈಗ ನವಜೋಡಿಗಳಿಗೆ ವಿರಹ ವೇದನೆ. ಬೇರೆಯವರಿಗೆ ತಣ್ಣನೆಯ ಮಳೆಯ ಆಹ್ಲಾದನೆ. ಎರಡರ ಮಿಶ್ರಣವೇ ಈ ಕವನ. ಬದುಕು ಹೀಗೆ ಅಲ್ಲವೇ? ಆಷಾಢದ ಜಡಿ ಮಳೆ, ಸುಟ್ಟ ಮುಸುಕಿನ ಜೋಳ, ದಿನನಿತ್ಯ ಕಾಣುವುದರಲ್ಲಿ ಹೆಂಡತಿಯ ನೆನಪು,
ತಣ್ಣನೆ ಮಳೆಯಲ್ಲೂ ಮಧುರ ನೆನಹು ಬೆಚ್ಚಗೆ .


ಸುಂಯ್ ಗಾಳಿ

ತೀಡಿ ತಿಕ್ಕುವ ತಣ್ಣನೆ
ಗಾಳಿ..
ತವರಿಗೋದ ನೀನು

ಒಳಗೊಳಗೆ ಗುದುಗುಟ್ಟಿ
ಮೆತ್ತನೆ ..
ಚಾದರ ನಿನ್ನ ಕೆನ್ನೆ

ಮದ್ಯಾಹ್ನ ದ ನೀಲಿ ಬಿಳೀ
ಮೋಡ..
ನಿನ್ನ ಮುಂಗುರುಳು

ಗಾಳಿಪಟ ನಲಿದು ಹಾರಿ
ಬರೆದ..
ನಿನ್ನ ಹೆಸರು

ಕೆರೆಯ ಮೇಲೆ ಬೀಸಿ
ತಂದ..
ನಿನ್ನ ಬಿಸಿ

ಕಿಟಕಿಯ ಸಂದಿಯಲಿ ತೂರಿ
ಪಿಸುಗರೆದ..
ನಿನ್ನ ಉಸಿರು

ಪಟ ಪಟನೆ ಬಡಿದ ರೆಕ್ಕೆಯ
ಪಕ್ಷಿ..
ನಿನ್ನ ನಗು

ಸುಟ್ಟ ಜೋಳದಲ್ಲಿ
ನಿನ್ನ ..
ಸುವಾಸನೆ

ಕಪ್ಪು ಜಮ್ಮು ನೇರಳೆ
ಹಣ್ಣು..
ನಿನ್ನ ಕಣ್ಣು

ತುಟಿ ಮೇಲಿನ
ಬೆವರು..
ಬೀಳುತ್ತಿರುವ ಸೋನೆ

ಸುಂಯ್ ಗುಡುವ
ಗಾಳಿ..
ನೀಲಿ ಆಷಾಡ

ಎದೆಗೂಡ ಬಳಸಿದ್ದ
ಮುಂಗೈ..
ಬಾಳೆ ದಿಂಡು

ತಣ್ಣನೆ ತಂಪು ಮಳೆ
ಹಿಂಗಿ..
ಭೂಮಿ ಬೆಚ್ಚಗೆ

ಡಾ II ರಜನಿ

Comments (3)

  1. ರೋಮ್ಯಾಂಟಿಕ್ ಸಂಪರ್ಕದಲ್ಲಿ ಬರೆದ ಕವನ ಗೀತ ಗುಣಕ್ಕಿಂತ ಶಬ್ದಸಂಪತ್ತು ತುಂಬಾ ಚೆನ್ನಾಗಿದೆ ಪ್ರಕೃತಿ ಮತ್ತು ಪತ್ನಿಯಲ್ಲಿ ಹೋಲಿಕೆ ಅನನ್ಯ

  2. Wow super madam 😍

Comment here