ಕವನ

ಇನ್ನೇನೇನೋ, ಗೊತ್ತಾಗಲೇ ಇಲ್ಲ…


ಗಮಣಿಕ


ಅಲ್ಲಿ ಅದೇನೋ ಹೀಗಿತ್ತು… ಆಗಿತ್ತು…

ಎಲ್ಲೆಲ್ಲಿ ನೋಡಿದರೂ ಸುತ್ತಸುತ್ತ ಗುಂಪುಗೂಡುತ್ತಾ

ಎದೆಯೊಳಗೆ ಅವುಚಿಕೊಂಡಿದ್ದ ನನ್ನ ತಂಗಿಗಂತೂ

ಏನೇನು ಗೊತ್ತಿಲ್ಲ,…ಅವರೋ ಎಲ್ಲಿಲ್ಲಿ ನೋಡಿದರೂ ಅವರೇ

ಕಣ್ಣು ತಪ್ಪಿಸಿ ಓಡುತ್ತಾ-ಗೀಡುತ್ತಾ

ಗಿಜಿಗುಡುವ ಬಸ್ಸಿನಲ್ಲಿ ಅತ್ತಿತ್ತ ನೋಡದೇ ಬಿಗಿಯಾಗಿ ನಿಂತು

ಮತ್ತೂ ಅಲ್ಲಿಂದ ಓಡಿ ರೈಲು ಹತ್ತಿ

ಅಲ್ಲಿ ಅದೇನೋ….. ಮತ್ತೇ ಗುಂಪೇ ಗುಂಪು

ಅದೇಕೋ ಅದೇನೋ ಅವೇನೋ ಕಣ್ಣುಗಳೋ

ಬಟ್ಟೆಯನ್ನು ನಾನು ಹಾಕಿಯೇ ಇಲ್ಲದಂತೆ…

ಚೋಟು ಚೋಟು ಬೆರಳುಗಳಿಂದ ಮುಟ್ಟಿಮುಟ್ಟಿ

ಮತ್ತೇ ಫೇಜಾಮವನ್ನು ಮತ್ತಷ್ಟು ಕೆಳಕೆಳಗಿಕೊಂಡು

ಮೇಲ್ ಮೇಲೆ ಸರಿಪಡಿಸಿಕೊಂಡು

ಓಡುತ್ತಾ ನಿಟ್ಟುಸಿರು ಬಿಡುತ್ತಾ…

ಧಗ… ಧಗ ಬೆಂಕಿ ಮತ್ತೇ ಅದೇ ಗುಂಪು

ಅವೇ ಕಣ್ಣುಗಳು….ಇಂಚಿಂಚು ಬಿಡದೇ

ಗಂಟಲಲ್ಲೇ ನೋವು

ಮಾತೇ ಬರುತ್ತಿಲ್ಲ… ಸ್ವರವೇ ಸಿಗುತ್ತಿಲ್ಲ

ಅಮ್ಮನ ಮಡಿಲಲ್ಲಿದ್ದ ತಂಗಿ…

ಯಾಕೋ ಅಳುತ್ತಿಲ್ಲ… ಏನೇನೂ ಕಾಣುತ್ತಿಲ್ಲ

ಆ ಗುಂಪು ಕರಗಿದಂತಾಯಿತು… ನಿಧಾನವಾಗಿ…

ಇನ್ನೇನೇನೋ ನನಗೇನೋ ಗೊತ್ತಾಗಲೇ ಇಲ್ಲ…..

Comment here