Uncategorized

8,48,192 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ…

ಬೆಂಗಳೂರು:

ಈ ಬಾರಿ ರಾಜ್ಯಾದ್ಯಂತ ಒಟ್ಟು 2,879 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 8,48,192 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದರು. 

ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ಕುರಿತು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಮಾತನಾಡಿ, ಈಗಾಗಲೇ ನೀಡಲಾಗಿರುವ ಕರಡು ಪ್ರವೇಶ ಪತ್ರಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಇದುವರೆಗೆ ಮುಖ್ಯ ಶಿಕ್ಷಕರು ಒಟ್ಟು 1,01,208 ಅಭ್ಯರ್ಥಿಗಳ ವಿವರಗಳನ್ನು ಶಾಲಾ ಹಂತದಲ್ಲೇ ತಿದ್ದುಪಡಿ ಮಾಡಿದ್ದಾರೆ. ಅಂತಿಮ ಪ್ರವೇಶ ಪತ್ರಗಳನ್ನು ಫೆಬ್ರವರಿ 2ನೇ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು. 

ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಏ.19ರಿಂದ 34 ಶೈಕ್ಷಣಿಕ ಜಿಲ್ಲೆಗಳ ಒಟ್ಟು 228 ಮೌಲ್ಯಮಾನಪ ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 79,670 ಮೌಲ್ಯಮಾಪಕರು ನೋಂದಣಿ ಮಾಡಿಕೊಂಡಿದ್ದಾರೆ. ಈ ಬಾರಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಕೋರ್‌ ವಿಷಯಗಳಿಗೆ 15 ನಿಮಿಷ ಮತ್ತು ಪ್ರಥಮ ಹಾಗೂ ದ್ವಿತೀಯ ಭಾಷಾ ಪತ್ರಿಕೆಗಳಿಗೆ 30 ನಿಮಿಷ ಹೆಚ್ಚುವರಿ ಸಮಯ ನೀಡಲಾಗಿದೆ. ಹಾಗಾಗಿ, ಮೌಲ್ಯಮಾಪಕರು ಸಹ ಮೌಲ್ಯಮಾಪನ ಕಾರ್ಯಕ್ಕೆ ಹೆಚ್ಚುವರಿ ಸಮಯ ಕೇಳಿದ್ದಾರೆ. ಈಗ ಪ್ರತಿನಿತ್ಯ ಮೌಲ್ಯಮಾಪನಕ್ಕೆ ನೀಡುತ್ತಿರುವ 20 ಉತ್ತರ ಪತ್ರಿಕೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ನೀಡಿದ ಮನವಿಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ವರ್ಷಾರಂಭದಲ್ಲೇ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಚೇಂಜ್‌

ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿಡಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಆನ್‌ಲೈನ್‌ನಲ್ಲಿ ನಮೂದಿಸಲು ಫೆಬ್ರವರಿ 3ನೇ ವಾರದಿಂದ ಅವಕಾಶ ನೀಡಲಾಗುವುದು. ಆ ಮೂಲಕ ಈ ಬಾರಿ ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿದರು. 

‘2003ರಿಂದ 2019ರ ವರೆಗೆ ಉತ್ತೀರ್ಣರಾದ ಒಟ್ಟು 1,12,51,565 ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿ ಲಾಕರ್‌ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಹಾಗಾಗಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಡಿಜಿಲಾಕರ್‌ ಮೂಲಕ ತಮ್ಮ ಅಂಕಪಟ್ಟಿಗಳನ್ನು ಪಡೆದುಕೊಳ್ಳಬಹುದಾಗಿದೆ. ವಲಸೆ ಪ್ರಮಾಣ ಪತ್ರಗಳ ವಿತರಣಾ ವ್ಯವಸ್ಥೆಗೂ ಆನ್‌ಲೈನ್‌ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು. 

Comment here