ಜಸ್ಟ್ ನ್ಯೂಸ್

ಮಕ್ಕಳ ಭವಿಷ್ಯಕ್ಕೆ ಕ್ರೀಡೆ ಸಹಕಾರಿ

ಪಾವಗಡ :  ಆಸ್ಪತ್ರೆಗಳನ್ನು ಆರಂಭಿಸುವ ಬದಲಾಗಿ  ಶಾಲೆಯನ್ನು ತೆರೆದು ಮಕ್ಕಳಿಗೆ ಮೌಲ್ಯಗಳನ್ನು ಕಲಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕರಾದ ಆರ್.ಬಸವರಾಜು ತಿಳಿಸಿದರು.
 ಪಟ್ಟಣದ ಶೃಂಗೇರಿ ಶ್ರೀ ಸರಸ್ವತಿ ವಿದ್ಯಾಪೀಠ ಶಾಲೆಯಲ್ಲಿ ಆಯೋಜಿಸಿದ್ದ 20 ನೇ ವಾರ್ಷಿಕ ಕ್ರೀಡಾ ದಿನಾಚರಣೆಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
 ಕಲಿಕಾ ಹಂತದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡಾ ಮನೋಭಾವನೆಯನ್ನು ಬೆಳೆಸಿ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಇದು ಅವರ‌ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗುವುದಲ್ಲದೆ ಕ್ರೀಯಾಶೀಲತೆ ಹಾಗೂ ಸೃಜನಾತ್ಮಕತೆಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
 ಮೈಸ್ ಕಂಪ್ಯೂಟರ್ ನ ವ್ಯವಸ್ಥಾಪಕರಾದ ಜಿ.ಟಿ.ಗಿರೀಶ್ ಮಾತನಾಡಿ, ಮಕ್ಕಳ ‌ಮಾನಸಿಕ ಮತ್ತು ದೈಹಿಕ ಸದೃಡತೆಗಾಗಿ ಕ್ರೀಡೆಗಳು ಸಹಕಾರಿಯಾಗುತ್ತವೆ. ಇದರಲ್ಲಿ ಭಾಗವಹಿಸುವ ಎಲ್ಲಾ  ಮಕ್ಕಳಿಗೂ ಗೆಲುವು ಸಿಗದಿದ್ದರೂ ದೊರೆತ ಸೋಲನ್ನು ಮುಂದಿನ ಗೆಲುವಿಗೆ ಸೋಪಾನವನ್ನಾಗಿಸಿಕೊಳ್ಳೊಣ. ಪೋಷಕರು ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ದೃಷ್ಟಿಯಿಂದ ಮೊಬೈಲ್ ಚಟುವಟಿಕೆಗಳನ್ನು ಕಡಿಮೆ ಮಾಡಿ ನಿತ್ಯ ಕನಿಷ್ಟ ಒಂದು‌ ಗಂಟೆಯಾದರೂ ಆಟವಾಡುವಂತೆ ಪ್ರೇರೇಪಿಸಿ. ಇದು ಮಕ್ಕಳ ಮುಂದಿನ ಭವಿಷ್ಯಕ್ಕೆ ಆಧಾರಸ್ತಂಭವಾಗುತ್ತದೆ ಎಂದು ಹೇಳಿದರು.
 ಇದೇ ಸಂದರ್ಭದಲ್ಲಿ ಅತಿಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
 ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ವಿವಿಧ ಕ್ರೀಡಾಚಟುವಟಿಕೆಗಳನ್ನು ಆಯೋಜಿಸಿ, ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ‌ಮಂಡಳಿಯ ಮುಖ್ಯಸ್ಥರಾದ  ಶ್ರೀರಾಮ್, ಕಾರ್ಯದರ್ಶಿ ಪಿ.ಎಲ್.ಮಂಜುಳಾ, ಉಪನ್ಯಾಸಕರಾದ ಎ.ಎಸ್.ಜಗನ್ನಾಥ್, ಮುಖ್ಯ ಶಿಕ್ಷಕ ದಯಾನಂದ್ ಉಪಸ್ಥಿತರಿದ್ದರು.

Comment here