ತುಮಕೂರು ಲೈವ್

ಮಕ್ಕಳನ್ನು ಕರೆತಂದ ಶಿಕ್ಷಕರ ಕೊರಳಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಗರಿ

ತುರುವೇಕೆರೆ: ಮಕ್ಕಳ ಕಲಿಕೆಯಲ್ಲಿ ಗುಣಾತ್ಮಕ ಶಿಕ್ಷಣ, ವ್ಯಕ್ತಿ ವಿಕಸನ ಹಾಗು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ತಾಲ್ಲೂಕಿನ ಮೂವರು ಶಿಕ್ಷಕರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ತಾಲ್ಲೂಕಿನ ಶಿಕ್ಷಕ ಸಮುದಾಯ ಅಭಿನಂಧಿಸಿದೆ.

ತಾಲ್ಲೂಕಿನ ಬಾಣಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕ ಸತ್ಯನಾರಾಯಣ ಅವರು ಶಾಲೆಯಲ್ಲಿ ಮಕ್ಕಳ ಗೈರು ಹಾಜರಿಯನ್ನು ತಪ್ಪಿಸಿ ಮಕ್ಕಳ ದಾಖಲಾತಿ ಸಂಖ್ಯೆ ದ್ವಿಗುಣಗೊಳಿಸಿದರು.

ಪೋಷಕರ ಮನವೊಲಿಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದರು. ಖಾಸಗಿ ಶಾಲೆಗೆ ಹೋಗದಂತೆ ಸರ್ಕಾರಿ ಶಾಲೆಯಲ್ಲೇ ಆಂಗ್ಲಭಾಷೆ ಶಾಲೆ ತೆರೆದರು.

50 ಸಾವಿರ ವೆಚ್ಚದಲ್ಲಿ ಗ್ರಂಥಾಲಯ ತೆರೆದು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದ್ದಾರೆ. ಗ್ರಾಮಸ್ಥರ ನೆರವಿನಿಂದ ಮಕ್ಕಳಿಗೆ ಪ್ರಾರ್ಥನಾ ಮಂದಿರ, ಊಟದ ಹಾಲು, ಶಾಲಾ ಆವರಣದಲ್ಲಿ ಗಿಡ ನೆಡುವುದು ಹೀಗೆ ಅನೇಕ ಸಾಧನ ಮಾಡಿದ್ದಾರೆ.

ತಾಲ್ಲೂಕಿನ ದೇವಿಹಳ್ಳಿಯ ಕಿರಿಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಮುಖ್ಯ ಶಿಕ್ಷಕಿ ವೈ.ಜಿ.ವನಜಾಕ್ಷಿ ಕಳೆದ ಮೂವತ್ತು ವರ್ಷಗಳಿಂದ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಾ ಗ್ರಾಮಸ್ಥರು, ಪೋಷಕರು, ವಿದ್ಯಾರ್ಥಿಗಳ ಕಣ್ಮಣಿಯಾಗಿದ್ದಾರೆ.

ವರ್ಣಮಯ ಪ್ಲಾಶ್ ಕಾರ್ಡ್, ಟಿ.ಎಲ್.ಎಂ, ದೂರದರ್ಶನ, ಮೊಬೈಲ್ ಆಡಿಯೋ, ವಿಡಿಯೋ ಬಳಸಿ ಬೋಧನೆ, ಕಂಪ್ಯೂಟರ್ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ. ಪ್ರತಿಭಾ ಕಾರಂಜಿ, ಕ್ರೀಡಾಕೂಟ ಮತ್ತು ಯೋಗಾಭ್ಯಾಸಗಳ ಪಠ್ಯೇತರ ಚಟುವಟಿಕೆ ಮೂಲಕ ಕಲಿಕಾ ಮಾಡುತ್ತಿದ್ದಾರೆ.

ಶಾಲಾ ಆವರಣದಲ್ಲಿ ಕೈತೋಟ, ತಾಲ್ಲೂಕಿನ ಉತ್ತಮ ನಲಿಕಲಿ ಶಾಲೆ ಎಂಬ ಹೆಸರು ಪಡೆದುಕೊಂಡಿದ್ದು ವಿವಿಧ ಸಂಘ ಸಂಸ್ಥೆಗಳಿಂದ ಪುರಸ್ಕಾರ ಸಹ ಪಡೆದಿದ್ದಾರೆ.

ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆ ಮುಗಳೂರಿನ ಹಿಂದಿ ಶಿಕ್ಷಕಿ ಕಮಲಾಕ್ಷಿ ಆರಂಭದಲ್ಲಿ ಪ್ರಾಥಮಿಕ ಶಿಕ್ಷಕಿಯಾಗಿ ಆನಂತರ ಕ್ಷೇತ್ರ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಇಸಿಒ ಆಗಿ ಕಾರ್ಯ ನಿರ್ವಹಿಸಿ 2009ರಲ್ಲಿ ಪ್ರೌಢ ಶಾಲಾ ಶಿಕ್ಷಕಿಯಾಗಿ ಬಡ್ತಿ ಹೊಂದಿದರು.

ಮಕ್ಕಳಲ್ಲಿ ಪರಿಣಾಮಕಾರಿ ಕಲಿಕೆಯನ್ನು ಉಂಟು ಮಾಡಲು ತಮ್ಮ ಬೋಧನೆಯಲ್ಲಿನ ವಿನೂತ ಬೋಧನಾ ತಂತ್ರಗಳನ್ನುಅಳವಡಿಸಿಕೊಂಡು ಹಿಂದಿ ವಿಷಯದಲ್ಲಿ ಶೇ ನೂರಷ್ಟು ಫಲಿತಾಂಶ ತರಲು ಶ್ರಮಿಸಿದ್ದಾರೆ.
ತಮ್ಮ ಮಕ್ಕಳಿಗೆ ‘ಸಿರಿಗನ್ನಡ’ ಪರೀಕ್ಷೆ ತರಬೇತಿ ನೀಡಿದ್ದರಿಂದ 2006ರಲ್ಲಿ ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನದಿಂದ ಅಭಿನಂಧನಾ ಪತ್ರ ಪಡೆದಿದ್ದಾರೆ. ತುಮಕೂರು ಸಾಕ್ಷರ ಮಿತ್ರಾ ವತಿಯಿಂದ ಆರೋಗ್ಯ ಸೇವಾ ಕಾರ್ಯಕ್ರಮದಡಿ ತಾಲ್ಲೂಕಿನ ಪ್ರೌಢ ಶಾಲಾ ಹೆಣ್ಣು ಮಕ್ಕಳಿಗೆ ಆರೋಗ್ಯ ಜಾಗೃತಿ ಮೂಡಿಸಲಾಗಿದೆ. ಕುವೆಂಪು ಸಮುದಾಯ ಪ್ರಗತಿ ಟ್ರಸ್ಟ್ ಬೆಂಗಳೂರು ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಿಯಾತ್ಮಕ ಕೆಲಸ ಮಾಡಿದ್ದಾರೆ. ಉತ್ತಮ ಶಿಕ್ಷಣ ಸಂಯೋಜಕರ ಪ್ರಶಸ್ತಿ ಪಡೆದಿದ್ದಾರೆ. ಹಿಂದಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರದಲ್ಲಿ ಕೆಲಸ ಮಾಡಿದ್ದಾರೆ. ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರ ಸಾಧನೆಗೆ ಮೆರುಗು ತಂದಿವೆ.

Comment here