ಕ್ರೈಂ

ಕಳ್ಳತನ ಮಾಡಲು ಬಂದ ಮನೆಯಲ್ಲೇ ಸತ್ತ ಕಳ್ಳ!?

ಕಳ್ಳತನ ಮಾಡಲು ಬಂದವ ಅದೇ ಮನೆಯಲ್ಲಿಯೇ ಸತ್ತಿರುವ ಘಟ‌ನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಇಂದಿರಾನಗರದ ಸಾಪ್ಟವೇರ್ ಎಂಜಿನಿಯರ್ ಒಬ್ಬರ ಮನೆಯಲ್ಲಿ ಈ ಅಚ್ಚರಿ ನಡೆದಿದೆ.

ಮನೆಯ ಒಡೆಯ ಮತ್ತು ಆತನ ಪತ್ನಿ ಇಬ್ಬರೂ ಯೂರೋಪ್ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಿಂದ ಬಂದವರು ಮನೆಯ ಬಾಗಿಲು ತೆಗೆಯಲು ಹೋದರೆ ಬಂದಿಲ್ಲ. ಆನಂತರ ಬೀಗ ಹೊಡೆಯುವವರನ್ನು ಕರೆ ತಂದು ಬಾಗಿಲು ತೆಗೆದು ಒಳ ಹೋದರೆ ಅಡುಗೆ ಮನೆಯಲ್ಲಿ ಅಡುಗೆ ಮಾಡಿರುವುದು ಕಂಡು ಅಚ್ಚರಿಗೆ ಒಳಗಾಗಿದ್ದಾರೆ.

ಆನಂತರ ಮನೆಯಲ್ಲಿ ಯಾರೋ ಓಡಾಡಿರುವುದು ಕಂಡು ಬಂದಿದೆ. ಹಿಂಬಾಗಿಲು ಮುರಿದಿರುವುದು ನೋಡಿದ ನಂತರ ಕಳ್ಳತನ ಆಗಿರುವ ಅನುಮಾನ ಬಂದಿದೆ.

ಕೂಡಲೇ ಪೋಲಿಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಮನೆಗೆ ನುಗ್ಗಿರುವ ಕಳ್ಳ, ಇಡೀ ದಿನ ಮನೆಯಲ್ಲಿಯೇ ಇದ್ದು, ಸ್ನಾನ ಕೂಡ ಮಾಡಿದ್ದಾನೆ. ಅಲ್ಲದೇ ಅವನೇ ತಂದಿದ್ದ ಹೊಸ ಬಟ್ಟೆಗಳನ್ನು ಹಾಕಿಕೊಂಡಿದ್ದಾನೆ.

ಪೊಲೀಸರು ಬಂದ ಬಂತರ ಮನೆಯಲ್ಲ ಹುಡುಕಿದಾಗ ದೇವರ ಮನೆಯಲ್ಲಿ ಕಳ್ಳನು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮನೆಗೆ ನುಗ್ಗಿರುವ ಈತ ಕಳ್ಳತ‌ನ ಮಾಡುವ ಪ್ರಯತ್ನ ಮಾಡಿಲ್ಲ. ಯಾವುದೇ ವಸ್ತುವನ್ನು ಚೆಲ್ಲಾಪಿಲ್ಲಿ ಮಾಡಿಲ್ಲ, ಕದ್ದಿಲ್ಲ. ಮನೆಯಿಂದ ಆಚೆ ಹೋಗಲು ವಿಫುಲ ಅವಕಾಶ ಇದ್ದರೂ ದೇವರ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿವುದು ನಮಗೂ ವಿಸ್ಮಯ ತಂದಿದೆ ಎಂದು ಪೊಲೀಸರು ತಿಳಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

ಕಳ್ಳನನ್ನು ಅಸ್ಸಾಂ ರಾಜ್ಯದವನು ಎಂದು ಗುರುತಿಸಲಾಗಿದ್ದು, ಈ ಹಿಂದೆ ಮನೆಗಳ್ಳತ‌ನದ ಆರೋಪದಲ್ಲಿ ಬಂಧಿತ‌ನಾಗಿದ್ದ ಎಂದು ಪೋಲಿಸರು ತಿಳಿಸಿದ್ದಾರೆ.

Comment here