ಜನಮನ

ವನ್ಯಜೀವಿ ಬಾಧಿತರಿಗೆ ಸಿಕ್ಕಿಲ್ಲ ಪರಿಹಾರ

ಸಂತ್ರಸ್ಥರ ಪರಿಹಾರ ಬಾಕಿ ಬೆಟ್ಟದಷ್ಟು

17.15 ಲಕ್ಷ ಬಿಡುಗಡೆಗೆ ಕೋರಿ ಪತ್ರ ಬರೆದ ಅರಣ್ಯ ಇಲಾಖೆ

ವರದಿಗಾರ: ಲಕ್ಷ್ಮೀಕಾಂತರಾಜು ಎಂ ಜಿ
lakshmikantharajumg@gmail.com


ತುಮಕೂರು:: ಕಳೆದ ಮುಂಗಾರು ಹಂಗಾಮಿನಲ್ಲಿ ಅರಣ್ಯದಂಚಿನ ಹಾಗೂ ಇತರೆ ಜಮೀನುಗಳಲ್ಲಿ ವನ್ಯ ಜೀವಿಗಳಿಂದ ಹಾನಿ ಗೊಳಗಾದ ರೈತರ ಬೆಳೆ ಹಾನಿ ಪರಿಹಾರವ ಮೊತ್ತವು ತುಮಕೂರು ವಿಭಾಗದ ಅರಣ್ಯ ಇಲಾಖೆಯಿಂದ ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿನ ಪರಿಹಾರ ಮೊತ್ತ 17.15 ಲಕ್ಷ ರೂಗಳು ಬಾಕಿ ಇದ್ದು , ಸಕಾಲಕ್ಕೆ ಪರಿಹಾರ ದೊರಕದೇ ಬಾಧಿತ ಸಂತ್ರಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ವನ್ಯಜೀವಿ ದಾಳಿಯಿಂದ ಸಾಕುಪ್ರಾಣಿ ಹತ್ಯೆ,ಬೆಳೆ ನಷ್ಟ,ಮಾನವ ಹತ್ಯೆ ಹಾಗು ಗಾಯಗೊಂಡ ಪ್ರಕರಣಗಳ ವೈದ್ಯಕೀಯ ವೆಚ್ಚ ಸೇರಿದಂತೆ ಪರಿಹಾರ ಮೊತ್ತವಾಗಿ ಪಾವತಿಸಲು 17.15 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಹಾಸನ ವೃತ್ತವರಿಗೆ ತುಮಕೂರು ವಿಭಾಗದ ಡಿಸಿಎಫ್ ಅಕ್ಟೋಬರ್ ಒಂದರಂದು ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ಅರಣ್ಯದಂಚಿನ ಗ್ರಾಮಗಳ ರೈತರ ಭೂಮಿಯಲ್ಲಿ ವನ್ಯಜೀವಿಗಳಿಂದ ಬೆಳೆ ಹಾನಿ, ಹಾಗೂ ಸಾಕುಪ್ರಾಣಿ ಹತ್ಯೆಗಳು ಪ್ರಕರಣಗಳು ಸಾಕಷ್ಟು ನಡೆಯುತ್ತಲೇ ಇರುತ್ತವೆ. ಕ್ರೂರ ಮೃಗಗಳು ಮಾನವನ ಮೇಲೂ ದಾಳಿ ಮಾಡಿದ ಪ್ರಕರಣಗಳಲ್ಲಿ ಮನುಷ್ಯರು ಗಾಯಗೊಂಡ ಪ್ರಕರಣಗಳು ಸಹ ಇದ್ದು ಈ ಬಾಧಿತ ಸಂತ್ರಸ್ಥರಿಗೆ ಸಕಾಲದಲ್ಲಿ ಪರಿಹಾರ ಹಣ ಪಾವತಿಸಲು ಪ್ರಾಕೃತಿಕ ವನ್ಯಜೀವಿ ಸಂರಕ್ಷಣೆ ಸಂರಕ್ಷಣೆ -015 ರ ಪೂರಕ ವೆಚ್ಚಗಳು ಅಡಿಯಲ್ಲಿ ಧಯಾತ್ಮಕ ಧನ ಅನುದಾನ ಕೋರಿ ತುಮಕೂರು ಅರಣ್ಯ ಇಲಾಖೆಯಿಂದ ತಮ್ಮ ಮೇಲಧಿಕಾರಿಗೆ ಪತ್ರ ಬರೆಯಲಾಗಿದೆ.

ವನ್ಯ ಜೀವಿಗಳಿಂದ ಬೆಳೆ ಹಾನಿಗೊಂಡ ರೈತರುಗಳು ತಮ್ಮ ‌ವ್ಯಾಪ್ತಿಯ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ಬೆಳೆ ಹಾನಿಗೆ ವರದಿ ಮಾಡಿಸಿದ್ದು , ಮೂರ್ನಾಲ್ಕು ತಿಂಗಳು ಕಳೆದರೂ ಪರಿಹಾರ ದೊರಕದೇ ,ಅತ್ತ ಬೆಳೆಯೂ ಇಲ್ಲ, ಇತ್ತ ಪರಿಹಾರವೂ ಇಲ್ಲದಂತಾಗಿ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದು , ಶೀಘ್ರವಾಗಿ ಪರಿಹಾರ ಮೊತ್ತ ಪಾವತಿಸುವಂತೆ ಬಾಧಿತ ರೈತರುಗಳು ಅರಣ್ಯ ಇಲಾಖೆಗೆ ಆಗ್ರಹಿಸುತ್ತಿದ್ದಾರೆ.

ಕಳೆದ ಸೆಪ್ಟಂಬರ್ ಗೆ ಕೊನೆಗೊಂಡಂತೆ ಇಲಾಖೆಯಲ್ಲಿನ ಧಯಾತ್ಮಕ ಧನ ಯೋಜನೆಯಡಿ 13.93 ಲಕ್ಷ ರೂಗಳನ್ನ ಸಂತ್ರಸ್ಥರಿಗೆ ಪಾವತಿಸಿ ಉಳಿದ ಪರಿಹಾರ ನೀಡಲು ಅನುದಾನ ಕೋರಿ ತುಮಕೂರು ಅರಣ್ಯ ವಿಭಾಗದ ಡಿಸಿಎಫ್ ಪತ್ರ ಬರೆದಿದ್ಧಾರೆ.

………………………………

ತಾಲ್ಲೂಕುವಾರು ಪರಿಹಾರ ಬಾಕಿ ಮೊತ್ತ

(ಲಕ್ಷ ರೂಗಳಲ್ಲಿ)

ತುಮಕೂರು 1,50 ಲಕ್ಷ
ಗುಬ್ಬಿ 2 ಲಕ್ಷ
ಕುಣಿಗಲ್ 4 ಲಕ್ಷ
ತಿಪಟೂರು 1.50 ಲಕ್ಷ
ಚಿಕ್ಕನಾಯಕನಹಳ್ಳಿ 30 ಸಾವಿರ
ಮಧುಗಿರಿ 3.50 ಲಕ್ಷ
ಶಿರಾ 1 ಲಕ್ಷ
ಕೊರಟಗೆರೆ 5 ಲಕ್ಷ
ಪಾವಗಡ 2,80 ಲಕ್ಷ‌
……………………………..


ಕಳೆದ ಆಗಸ್ಟ್ ನಲ್ಲಿ ನಮ್ಮ ಜಮೀನಿನಲ್ಲಿದ್ದ ಶೇಂಗಾ ಬೆಳೆಯನ್ನ ಕಾಡು ಹಂದಿಗಳು ತಿಂದುಹಾಕಿದ್ದವು. ಇಲಾಖೆಯ ಅಧಿಕಾರಿಗಳಿಂ ವರದಿ ಮಾಡಿಸಲಾಗಿದೆ. ಪರಿಹಾರ ಮಾತ್ರ ಇನ್ನೂ ಬಂದಿಲ್ಲ.

ದಯಾನಂದ
ರೈತ, ಗುಬ್ಬಿ ತಾಲ್ಲೂಕು
………………………………..

ನಾವು ಬೆಳೆದಿದ್ದ ಟೊಮೋಟೋ ಬೆಳೆಯನ್ನ ಕಾಡುಹಂದಿಗಳು ಹಾಳು ಮಾಡಿದ್ದವು.ಆ ಸಮಯದಲ್ಲಿ ಟೊಮೋಟೋ ಬೆಲೆ ಹೆಚ್ಚಾಗಿತ್ತು.ಆದರೆ, ಕಾಡು ಹಂದಿಗಳ ನಾಶದಿಂದ ಹಣ್ಣುಗಳು ಮಾರಾಟಕ್ಕೆ ಸಿಗಲಿಲ್ಲ. ಇತ್ತ ಪರಿಹಾರವು ಸಿಗುತ್ತಿಲ್ಲ.

ಜಯರಂಗಪ್ಪ
ಹೂವಿನಕಟ್ಟೆ
………………………..

ಪರಿಹಾರ ಹಣ ಬಾಕಿಯನ್ನ ಪಾವತಿಸಲು ಅನುದಾನ ಕೋರಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.ಅನುದಾ‌ನ ಬಿಡುಗಡೆಯಾದ ಕೂಡಲೇ ಸಂತ್ರಸ್ಥರುಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು

ಅನುಪಮಾ
ಡಿಸಿಎಫ್
………………………..

Comment here