ಕವನ

ಕವನ: ಮೌನಿ ಮಾತನಾಡಿದಾಗ…

ಬಾಲ್ಯದ ನೋವುಗಳು ಎಂದೂ ಅಳಿಸಲಾಗದ ಗೆರೆಗಳಾಗಿ ಉಳಿದು ಬಿಡುತ್ತವೆ. ನೆರವಿ‌ನ ಕೈಗಳು ಸಿಗದೇ ತಪ್ಪಿಸಿಕೊಂಡಾಗಿನ ಚಟಪಟಿಕೆ, ಒಳ ರೋಷಾಗ್ನಿಯನ್ನು ಕೆ.ಎಸ್.ಗಿರಿಜಾ ಅವರು ತಮ್ಮ‌ ಕವನದಲ್ಲಿ ಹೇಳಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿಯಾಗಿದ್ದಾರೆ.


ಬಾಲ್ಯದ ಆ ದಿನಗಳು
ಮನದಲ್ಲಿ ಅಚ್ಚಳಿಯದೆ
ಉಳಿದು ಬಿಟ್ಟಿದೆ

ಬೇಡವೆಂದರೂ ಮತ್ತೆ ಮತ್ತೆ
ಮೂಡುವ, ಕಾಡುವ
ನೋವಿನ ದಿನಗಳು
ಅಚ್ಚಳಿಯದೇ ಹಾಗೆ
ಉಳಿದುಬಿಟ್ಟಿದೆ ಮನದಾಳದಲ್ಲಿ…..

ಮುಗ್ದ ಮನಸ್ಸುಗಳಲ್ಲಿ
ಬಿತ್ತಬೇಕಿದ್ದ ಸ್ನೇಹ ಪ್ರೀತಿಯ
ಮರೆಮಾಚಿತು
ಕ್ರೌರ್ಯ

ಎಲ್ಲರನ್ನು ಒಂದೆಂದು ನೋಡದ
ದಡ್ಡಿ ಎಂಬ ಹಣೆಪಟ್ಟಿ
ಹಚ್ಚಿ
ದೂರವಿಡುತ್ತಿದ್ದ
ಸ್ನೇಹಿತರು ಗೊರಿಲ್ಲಾ
ಎಂದು ಹಾಸ್ಯ ಮಾಡಿ
ನಗುತ್ತಿದ್ದ
ನೆನಪುಗಳು ಮಾಸದೇ
ಅಚ್ಚಳಿಯದೆ ಉಳಿದುಬಿಟ್ಟಿದೆ ಮನದಾಳದಲ್ಲಿ
ಇಂದಿಗೂ

ಮಾತುಬರದ ಮೌನ ಗೌರಿ,
ಅವಮಾನಿ, ಮುಖಕೆ ನೀರೆರಚಿದರೂ
ಅತ್ತುಬಿಟ್ಟು ಸುಮ್ಮನ್ನಾಗುತ್ತಿದ್ದ
ನೆಚ್ಚಿನ ಶಿಕ್ಷಕರ ಬಳಿ
ಹೋಗಿ ಅಳಲು ತೋಡಿಕೊಂಡರೂ
ಸಿಗದ ಸಾಂತ್ವನ
ಅವಳನ್ನು ಮತ್ತಷ್ಟು ಕುಬ್ಜಳಾಗಿಸಿತು
ಅಚ್ಚಳಿಯದೆ ಉಳಿದು ಬಿಟ್ಟಿದೆ ಮನದಾಳದಲ್ಲಿ
ಇಂದಿಗೂ

ವರುಷಗಳುರುಳಿವೆ…
ಮೌನಗೌರಿ ಮಾತನಾಡುವಳು
ದನಿಯಿಲ್ಲದವರಿಗಾಗಿ
ತನಗಾದ ನೋವು
ಮಕ್ಕಳಿಗಾಗದಿರಲಿ ಎಂದು
ಭೇದಭಾವ ತೊರೆದು
ಪ್ರೀತಿಸುವಳು
ಎಲ್ಲರನ್ನೂ
ಆದರೂ
ಮನದ ಮೂಲೆಯಲ್ಲಿ
ಅಚ್ಚಳಿಯದೆ ಉಳಿದುಬಿಟ್ಟಿದೆ
ಕನಸುಗಳು
ಗರಿಗೆದರಬೇಕಾದಲ್ಲಿ
ಬಾಲ್ಯದ ಆ ಕಹಿ
ನೆನೆಪುಗಳು…


ಗಿರಿಜಾ ಕೆ.ಎಸ್

Comment here