ಪೊಲಿಟಿಕಲ್

ರಾಜಾಸ್ಥಾನದಲ್ಲಿ ದಲಿತ ಬಾಲಕನ ಕೊಲೆ ; ತುಟಿ ಬಿಚ್ಚದ ಕಾಂಗ್ರೆಸ್ ನಾಯಕರು

Publicstory/prajayoga

ತುಮಕೂರು: ರಾಜ್ಯಸ್ಥಾನದ ಸುರಾನ ಗ್ರಾಮದ ಶಾಲೆಯೊಂದರಲ್ಲಿ ದಲಿತ ಸಮುದಾಯದಕ್ಕೆ ಸೇರಿದ ಬಾಲಕನು ಕುಡಿಯುವ ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ಶಾಲೆಯ ಶಿಕ್ಷಕನೇ ಹಲ್ಲೆ ನಡೆಸಿ ಕೊಂದಿರುವ ಘಟನೆಯನ್ನು ಖಂಡಿಸಿ ತುಮಕೂರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಶುಕ್ರವಾರ ಟೌನ್ ಹಾಲ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ ಮಾತನಾಡಿ, ರಾಜ್ಯಸ್ಥಾನದ ಸುರಾನ ಗ್ರಾಮದ ಶಾಲೆಯಲ್ಲಿ ಓದುತ್ತಿದ್ದ ದಲಿತ ಬಾಲಕ ನೀರು ಕುಡಿಯುವ ನೀರಿನ ಮಡಿಕೆ ಮುಟ್ಟಿದನೆಂಬ ಕಾರಣಕ್ಕೆ ಶಿಕ್ಷಕ ಚಹೀಲ್ ಸಿಂಗ್ ಹಲ್ಲೆ ನಡೆಸಿದ್ದು, ಬಾಲಕ ಸಾವನ್ನಪ್ಪಿದ್ದಾನೆ. ಇದನ್ನು ಖಂಡಿಸಿ, ಅಲ್ಲಿನ ಕಾಂಗ್ರೆಸ್ ಪಕ್ಷದ ಶಾಸಕರು, ಸ್ಥಳೀಯ ಕಾರ್ಪೋರೇಟ್ಗಳು ಸಹ ರಾಜೀನಾಮೆ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ ಅವರಾಗಲಿ ಕನಿಷ್ಠ ಖಂಡನೀಯ ಹೇಳಿಕೆ ನೀಡಿಲ್ಲ. ತಮ್ಮದೇ ಪಕ್ಷವಿರುವ ರಾಜಸ್ಥಾನದಲ್ಲಿ ನಡೆದ ದಲಿತ ಬಾಲಕನ ಹತ್ಯೆಯ ಬಗ್ಗೆ ತುಟಿ ಬಿಚ್ಚದಿರುವುದು ಇವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ರಾಜಸ್ಥಾನದಲ್ಲಿ ನಡೆದಿರುವ ಘಟನೆ ಮನುಷ್ಯನ ಅಸ್ಪೃಷ್ಯತೆ ಎಷ್ಟು ಅಡಗಿದೆ ಎಂಬುದು ತೋರಿಸುತ್ತದೆ. ಈಗಲಾದರೂ ಸದರಿ ಘಟನೆ ಕುರಿತು ಧ್ವನಿ ಎತ್ತಬೇಕಿದೆ.ಅಂಬೇಡ್ಕರ್ ಹಿಂದೆ ಚೌದರ್ ಕೆರೆಯ ನೀರು ಮುಟ್ಟಿದಾಗ ಅವರ ತಲೆಯನ್ನು ಒಡೆಯಲಾಗಿತ್ತು. ಇಂದಿಗೂ ಅದು ಮುಂದುವರೆದಿದೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್,
ಪದಾಧಿಕಾರಿಗಳಾದ ನವೀನ್, ವರದರಾಜು, ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್, ಮಾಜಿ ಸದಸ್ಯ ಪ್ರತಾಪ್,ಮುಖಂಡರಾದ ಕೊಪ್ಪಲ್ ನಾಗರಾಜು, ಶಂಕರ್, ಅಂಜನಮೂರ್ತಿ,ಮನೋಹರಗೌಡ, ಶಬ್ಬೀರ್, ಯುವಮೋರ್ಚಾ ಅಧ್ಯಕ್ಷ ನಾಗೇಂದ್ರ, ರಾಜಣ್ಣ,ಜಿಲ್ಲಾ ವಕ್ತಾರ ಕೆ.ಪಿ.ಮಹೇಶ್, ರಕ್ಷಿತ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

Comment here