ಪೊಲಿಟಿಕಲ್

ಬಿಜೆಪಿ‌ ವಿರುದ್ಧ ಸಿದ್ದರಾಮಯ್ಯ ಕಠೋರ ವಾಗ್ದಾಳಿ

Publicstory/prajayoga

ಬೆಂಗಳೂರು : ಕೊಡಗು ಜಿಲ್ಲೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೇರಿರುವುದರಿಂದ ಕಾನೂನಿಗೆ ಮನ್ನಣೆ ನೀಡಿ ಆಗಸ್ಟ್ 26ರ ಪ್ರತಿಭಟನೆಯನ್ನು ಮುಂದೂಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಪಕ್ಷದ ನಾಯಕರ ಜೊತೆ ಚರ್ಚಿಸಿ ಪ್ರತಿಭಟನೆಯ ಮುಂದಿನ ದಿನವನ್ನು ನಿರ್ಧಾರ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೊಡಗಿನಲ್ಲಿ ನಡೆದ ಮೊಟ್ಟೆ ಎಸೆತಕ್ಕೆ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದ ಮುಖಾಂತರ ಪ್ರತಿಕ್ರಿಯಿಸಿರುವ ಅವರು,  ರಾಜ್ಯ ಸರ್ಕಾರದ ನಿಷ್ಕ್ರಿಯತೆ, ಭದ್ರತಾ ವೈಫಲ್ಯ ಮತ್ತು ಅತಿವೃಷ್ಟಿ ಪರಿಹಾರದಲ್ಲಿ ಸ್ಥಳೀಯ ಶಾಸಕರ ಭ್ರಷ್ಟಾಚಾರದ ವಿರುದ್ಧ ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೆವು. ಲಕ್ಷಾಂತರ ಮಂದಿ ಭಾಗವಹಿಸುವ ಈ ಸಮಾವೇಶದಲ್ಲಿ ಸರ್ಕಾರದ ವೈಫಲ್ಯ ಬಯಲಾಗುತ್ತದೆ ಎಂಬ ಭೀತಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನಮ್ಮ ಪ್ರತಿಭಟನೆಗೆ ಹೆದರಿ ಅದನ್ನು ರದ್ದುಪಡಿಸಬೇಕೆಂಬ ಉದ್ದೇಶದಿಂದಲೇ ಬಿಜೆಪಿ ಅದೇ ದಿನ ಜನಜಾಗೃತಿ ಸಮಾವೇಶ ನಡೆಸಲು ಹೊರಟಿದೆ. ಪೊಲೀಸರ ನಿಷ್ಕ್ರಿಯತೆಯನ್ನು ಮುಚ್ಚಿಹಾಕುವ ದುರುದ್ದೇಶದಿಂದಲೇ ಪಕ್ಷದಿಂದ ಸಮಾವೇಶ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ಜನ ಸುಲಭದಲ್ಲಿ ಅರ್ಥಮಾಡಿಕೊಳ್ಳುತ್ತಾರೆ.

ಕೊಡಗಿನ ಜನರು ನೇರ ನಡೆ-ನುಡಿಯ ನ್ಯಾಯದ ಪರವಾಗಿರುವ ಜನ. ನಮ್ಮ ಪ್ರತಿಭಟನೆ ಪೊಲೀಸ್ ಇಲಾಖೆ ಮತ್ತು ರಾಜ್ಯ ಸರ್ಕಾರದ ವಿರುದ್ಧವಾಗಿತ್ತೇ ಹೊರತು ಕೊಡಗಿನ ಜನರ ವಿರುದ್ಧವಾಗಿರಲಿಲ್ಲ. ಅಲ್ಲಿನ ಜನ ಬಿಜೆಪಿ ಶಾಸಕರ ವಿರುದ್ಧ ತಿರುಗಿಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರುಬಿಜೆಪಿಗೆ ಬುದ್ಧಿ ಕಲಿಸಲಿದ್ದಾರೆ.
ಪ್ರತಿಭಟನೆ ವಿರೋಧ ಪಕ್ಷದ ಹಕ್ಕು. ಆಡಳಿತ ಪಕ್ಷ ಪ್ರತಿಭಟನೆಗೆ ಕಾರಣ ತಿಳಿದುಕೊಂಡು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಆದರೆ ಶಾಸಕ ಬೋಪಯ್ಯ ಅವರು ಕೊಡಗಿಗೆ ಬರಲಿ ನೋಡ್ಕೋತಿವಿ ಎಂದು ನನಗೆ ಸವಾಲು ಹಾಕುತ್ತಾರೆ. ಇದೇ ರೀತಿ ಸವಾಲು ಹಾಕಿದ್ದ ಬಳ್ಳಾರಿ ರೆಡ್ಡಿಗಳು ಏನಾದರೂ ಎನ್ನುವುದು ಇವರ ನೆನಪಲ್ಲಿರಲಿ.
ನನ್ನ ಮೇಲೆ ಮೊಟ್ಟೆ ಒಡೆದದ್ದು ತಪ್ಪು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಈಗ ಇವರಿಬ್ಬರು ಅದೇ ಘಟನೆಯ ವಿರುದ್ಧ ನಾವು ಮಾಡುವ ಪ್ರತಿಭಟನೆಯನ್ನೂ ತಪ್ಪು ಎಂದು ಹೇಳುತ್ತಿದ್ದಾರೆ. ಯಾಕಿಂತಹ ದ್ವಂದ್ವ?

ವಾಸ್ತವದಲ್ಲಿ ನಾನು ಕೊಡಗಿನಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ನಾನು ಆ ದಿನ ಕಳಲೆಪಲ್ಯ ಮತ್ತು ಅಕ್ಕಿರೊಟ್ಟಿ ತಿಂದಿದ್ದೆ. ಇದನ್ನು ಮಾಜಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರೂ ಹೇಳಿದ್ದಾರೆ. ವಾದಕ್ಕಾಗಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂದು ಎಲ್ಲಿ ಹೇಳಿದೆ? ಎಂದು ಪ್ರಶ್ನಿಸಿದ್ದೆ.
ಮಾಂಸ ತಿಂದು ದೇವಸ್ಥಾನಕ್ಕೆ ಹೋದರೂ ತಪ್ಪಲ್ಲ ಎಂದು ಹಿಂದೂ ಸಂಘಟನೆಯ ಪ್ರಮೋದ್ ಮುತಾಲಿಕ್ ಹೇಳಿದ್ದಾರಂತೆ. ಅದೇ ರೀತಿ ಜ್ಯೋತಿಷಿ ದೈವಜ್ಞ ಸೋಮಯಾಜಿಯವರು ಹೇಳಿದ್ದಾರೆ. ಬಿಜೆಪಿ ಪಕ್ಷದ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡರೂ ಇಂತಹ ವಿಷಯಗಳನ್ನೆಲ್ಲ ವಿವಾದ ಮಾಡಬಾರದು ಎಂದು ಹೇಳಿದ್ದಾರೆ.

ಮಾಂಸಾಹಾರ ಮನುಷ್ಯನ ವೈಯಕ್ತಿಕ ವಿಚಾರ. ಯಾವುದಾದರೂ ಧಾರ್ಮಿಕ ಕೇಂದ್ರಗಳಲ್ಲಿ ಅಂತಹ ನಿರ್ಬಂಧಗಳಿದ್ದರೆ ಖಂಡಿತ ನಾವು ಅದನ್ನು ಪಾಲಿಸಬೇಕು. ನನಗೆ ತಿಳಿದಂತೆ ಎಲ್ಲಿಯೂ ಮೀನು-ಮಾಂಸ ತಿಂದು ದೇವಸ್ಥಾನಕ್ಕೆ ಬರಬಾರದು ಎಂಬ ನಿರ್ಬಂಧ ಇಲ್ಲ. ಹೀಗಿದ್ದಾಗ ಯಾಕೆ ಈ ವಿವಾದ?
ಹಂದಿ ಮಾಂಸ ತಿಂದು ಮಸೀದಿಗೆ ಹೋಗ್ತಿರಾ? ಎಂದು ಸಂಸದ ಪ್ರತಾಪ ಸಿಂಹ ಕೇಳಿದ್ದಾರೆ. ನಾನು ನನ್ನ ಜೀವನದಲ್ಲಿ ಹಂದಿ ಮಾಂಸ ತಿಂದಿಲ್ಲ, ತಿನ್ನುವವರನ್ನು ಬೇಡ ಎನ್ನುವುದಿಲ್ಲ. ನನಗೆ ತಿಳಿದ ಹಾಗೆ ಮಸೀದಿಯಲ್ಲಿ ಅಂತಹ ನಿರ್ಬಂಧ ಇಲ್ಲ. “ಬೇಕಾದರೆ ಪ್ರತಾಪಸಿಂಹನೇ ಹಂದಿ ತಿಂದು ಹೋಗಲಿ”.
ರಾಜ್ಯ ಸರ್ಕಾರದ ವಿರುದ್ಧ ಜನ ಈಗಾಗಲೇ ರೊಚ್ಚಿಗೆದ್ದಿದ್ದಾರೆ. ಜನಾಕ್ರೋಶವನ್ನು ಬೇರೆ ಕಡೆ ತಿರುಗಿಸುವ ಉದ್ದೇಶದಿಂದಲೇ ಇಂತಹ ಧರ್ಮ-ದೇವರಿಗೆ ಸಂಬಂಧಿಸಿದ ವಿವಾದವನ್ನು ಸೃಷ್ಟಿಸಿ ನನ್ನನ್ನು ಹಿಂದುವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.  ಪ್ರಜ್ಞಾವಂತ ಮತದಾರರಿಗೆ ಈ ಕಳ್ಳಾಟವೆಲ್ಲ ಗೊತ್ತಾಗಿದೆ. 

ಕೊಡಗು ಜಿಲ್ಲೆ 2019, 2020, 2021 ಮತ್ತು ಈ ವರ್ಷ ನಿರಂತರವಾಗಿ ಅತಿವೃಷ್ಟಿಗೆ ಈಡಾಗಿದೆ. ನಮ್ಮ ಸರ್ಕಾರ 750 ಮನೆಗಳನ್ನು ಕಟ್ಟಿಸಿಕೊಟ್ಟಿದ್ದನ್ನು ಬಿಟ್ಟರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವ ಹೊಸ ಮನೆ ಕಟ್ಟಿಕೊಟ್ಟಿಲ್ಲ, ಪರಿಹಾರವನ್ನೂ ಸರಿಯಾಗಿ ವಿತರಿಸಿಲ್ಲ, ಕುಸಿದುಬಿದ್ದಿರುವ ಸೇತುವೆ-ರಸ್ತೆಗಳು ದುರಸ್ತಿಯಾಗಿಲ್ಲ.
ಮಳೆಯಿಂದ ಮಣ್ಣು ಕುಸಿದ ಜಾಗಗಳಲ್ಲಿ  ಸೇತುವೆಯ ಬದಲಿಗೆ ವೆಂಟೆಡ್ ಡ್ಯಾಮ್ ಕಟ್ಟಿದ್ದಾರೆ. ಇದರಿಂದ ಕಸ-ಕಲ್ಲು, ಮರದ ತುಂಡುಗಳು ಹರಿವ ನೀರಿಗೆ ಅಡ್ಡವಾಗಿ, ಮನೆ-ಶಾಲೆಗಳಿಗೆ ನೀರು ನುಗ್ಗಿದೆ. ಕೆಲವುಸಂತ್ರಸ್ತರಿಗೆ ಹತ್ತು ಸಾವಿರ ರೂಪಾಯಿ ಪರಿಹಾರದ ಚೆಕ್ ಕೊಟ್ಟು ಸುಮ್ಮನಾಗಿದ್ದಾರೆ. 

ಮಡಿಕೇರಿಯಲ್ಲಿ ಮಿನಿವಿಧಾನಸೌಧ ನಿರ್ಮಿಸಲಾಗಿದ್ದು ಅದಕ್ಕೆ ತಡೆಗೋಡೆ ಕಟ್ಟಿದ್ದಾರೆ. ಏಳುವರೆ ಕೋಟಿ ರೂಪಾಯಿ ವೆಚ್ಚದ ಈ ತಡೆಗೋಡೆ ಆಗಲೇ ಬಿದ್ದುಹೋಗಿದೆ. ಮುಖ್ಯಮಂತ್ರಿಯವರ ಭೇಟಿಯ ವೇಳೆಯೂ ಅದನ್ನು ಮುಚ್ಚಿಟ್ಟಿದ್ದಾರೆ. ನಾನು ಕೂಡಾ ಅಲ್ಲಿಗೆ ಹೋಗಬಾರದೆಂದು ಶಾಸಕರು ಮತ್ತು ಗುತ್ತಿಗೆದಾರರು ಸೇರಿ ನನ್ನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಅತಿವೃಷ್ಟಿ ಪರಿಹಾರ ಕಾರ್ಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪರಿಹಾರ ಕಾಮಗಾರಿಗಳನ್ನು ನೋಡಿದರೆ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿರುವುದು ಗೊತ್ತಾಗುತ್ತದೆ. ಕಳೆದ ಮೂರು ವರ್ಷಗಳ ಅತಿವೃಷ್ಟಿ ಕಾಮಗಾರಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ರಾಜ್ಯ ಸರ್ಕಾರ ಸಮಗ್ರವಾಗಿ ತನಿಖೆ ಮಾಡಬೇಕೆಂದು ಒತ್ತಾಯಿಸುತ್ತಿದ್ದೇನೆ.

ಕೊಡಗಿನಲ್ಲಿ ನನ್ನ ವಿರುದ್ದ ನಡೆದ ಪ್ರತಿಭಟನೆ ಪೂರ್ವಯೋಜಿತವೆನ್ನುವುದು ಪೊಲೀಸರ ನಿಷ್ಕ್ರಿಯತೆಯಿಂದ ಸ್ಪಷ್ಟವಾಗಿದೆ. ಮೊದಲ ಸಲ ಪ್ರತಿಭಟನೆ ನಡೆದಾಗಲೇ ಪೊಲೀಸರು ಎಚ್ಚರಿಕೆ ವಹಿಸಬೇಕಾಗಿತ್ತು. ಆದರೆ ಅವರು ಕಣ್ಣುಮುಚ್ಚಿಕೊಂಡು ಷಾಮೀಲಾಗಿದ್ದ ಕಾರಣದಿಂದಲೇ ನಂತರ 3-4 ಕಡೆ ಪ್ರತಿಭಟನೆ ನಡೆದವು.
ಬಿಜೆಪಿ ನಾಯಕರು ಹುಟ್ಟು ಸುಳ್ಳುಕೋರರು. ಮೊಟ್ಟೆ ಎಸೆದವನು ಕಾಂಗ್ರೆಸ್ ಕಾರ್ಯಕರ್ತನೆಂದು ಈಗ ಸುಳ್ಳು ಹೇಳುತ್ತಿದ್ದಾರೆ. ಮಾಜಿ ಸಚಿವ ಜಿವಿಜಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರೂ ಮೊಟ್ಟೆ ಎಸೆದ ಸಂಪತ್ ನಮ್ಮ ಪಕ್ಷದವನಲ್ಲ, ಬಿಜೆಪಿಯವನು ಎಂದು ಹೇಳಿ ಬಿಜೆಪಿ ಸುಳ್ಳನ್ನು ಬಯಲು ಮಾಡಿದ್ದಾರೆ ಎಂದು  ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Comment here