Wednesday, December 4, 2024
Google search engine
Homeಲೇಖನರಾಜ್ಯ ಕಂಡ ಎಕ್ಸ್ಟ್ರಾಡಿನರಿ ಪೊಲಿಟೀಶನ್ 'ಅರಸು'

ರಾಜ್ಯ ಕಂಡ ಎಕ್ಸ್ಟ್ರಾಡಿನರಿ ಪೊಲಿಟೀಶನ್ ‘ಅರಸು’

Publicstory/prajayoga

ಕಾಂಗ್ರೆಸ್ ಪಕ್ಷದಲ್ಲಿದ್ದ ಹಿರಿಯರು ಅರಸು ಅವರನ್ನು ತೊರೆದು ರೆಡ್ಡಿ ಕಾಂಗ್ರೆಸ್‌ನತ್ತ ಹೋಗಿದ್ದರು. ಆದರೆ ಇದರಿಂದ ಅರಸು ವಿಚಲಿತರಾಗಲಿಲ್ಲ. ಸಮಾಜದ ಕಟ್ಟಕಡೆಯವರನ್ನು, ಎಲ್ಲ ವರ್ಗಗಳ ಯುವಕರನ್ನು ಗುರುತಿಸಿ, ಅವರ ಮೇಲೆ ವಿಶ್ವಾಸವಿರಿಸಿ ಟಿಕೆಟ್ ನೀಡಿ ಚುನಾವಣಾ ಕಣಕ್ಕಿಳಿಸಿದ್ದರು . 224 ಕ್ಷೇತ್ರಗಳ ಪೈಕಿ 149 ಸ್ಥಾನಗಳನ್ನು ಗೆದ್ದರು. ಯುವಶಕ್ತಿಯ ಮೇಲೆ ಅರಸರಿಗೆ ಅಪಾರ ವಿಶ್ವಾಸವಿತ್ತು. ಮತ್ತು ಅವರ ಪ್ರಬುದ್ಧ ರಾಜಕೀಯ ನಡೆ ಗೆದ್ದಿತ್ತು. ಗೆದ್ದ ಪೈಕಿಯಲ್ಲಿ 40 ಕ್ಕೂ ಹೆಚ್ಚು ಉತ್ಸಾಹಿ ತರುಣರಾದ ಎಚ್. ವಿಶ್ವನಾಥ್, ಕೆ ಆರ್ ರಮೇಶ್ ಕುಮಾರ್, ಟಿ ಬಿ ಜಯಚಂದ್ರ ಇನ್ನು ಮುಂತಾದವರನ್ನು ಶಾಸಕರನ್ನಾಗಿ ಮಾಡಿ ವಿಧಾನ ಸೌಧಕ್ಕೆ ಕರೆತಂದಿದ್ದರು.

ಅರಸು ಕಾರ್ಕಳಕ್ಕೆ ಹೋದಾಗ ಸೈಕಲ್ ಹೊಡೆಯುತ್ತಿದ್ದ ಹುಡುಗಾನೊಬ್ಬ ಅರಸುರವರ ಕಣ್ಣಿಗೆ ಬಿದ್ದನು. ಆ ಹುಡುಗನನ್ನು ತಡೆದು ನಿಲ್ಲಿಸಿ ನಿಮ್ಮ ಭಾಗದಲ್ಲಿ ಗೇಣಿದಾರರು ಹೆಚ್ಚಾಗಿದ್ದಾರೆ. ಅವರನ್ನೆಲ್ಲ ಒಟ್ಟಿಗೆ ಸೇರಿಸಿ ಒಂದು ಸಮಾವೇಶ ಏರ್ಪಡಿಸಬಹುದಾ…! ಎಂದು ಕೇಳಿದರು. ಅದಾದ ಸ್ವಲ್ಪ ದಿನದ ನಂತರ ನಾಲ್ಕೈದು ಸಾವಿರ ಜನ ಸೇರಿಸಿ ದೊಡ್ಡ ಸಮಾವೇಶ. ಆ ಸಮಾವೇಶ ಮುಗಿಯುವಷ್ಟರಲ್ಲಿ ಆ ಸಮಾವೇಶವನ್ನು ವ್ಯವಸ್ಥೆ ಮಾಡಿದ ಸೈಕಲ್ ಹುಡುಗನನ್ನು ಅರಸು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿದ್ದರು.

ಆಗ ಚುನಾವಣೆ ಗೆಲ್ಲಲು ಎರಡು ಮುಖ್ಯ ಅಂಶಗಳಿದ್ದವು. ಒಂದು  ಅತ್ಯಂತ ಹಿಂದುಳಿದ ಜಾತಿಗಳನ್ನು ಗುರುತಿಸುವುದು. ಮತ್ತೊಂದು ಗೆಲುವು. ಇವೆರಡರ ತಾಕಲಾಟಕ್ಕೆ ಬಿದ್ದ ಆ ಸೈಕಲ್ ಹುಡುಗ ನಿಜಕ್ಕೂ ಶಾಕ್‌ಗೊಳಗಾಗಿದ್ದ. ದುಡ್ಡಿಲ್ಲ, ಜಾತಿಯಿಲ್ಲ, ಪೂರ್ವಸಿದ್ಧತೆಗಳಿಲ್ಲ. ಆದರೆ ಅರಸು ಮಾತ್ರ  ಅದೃಶ್ಯ ಮತದಾರರಿದ್ದಾರೆ  ನಮ್ಮನ್ನು ಗೆಲ್ಲಿಸುತ್ತಾರೆ ಎಂದು ನಂಬಿದ್ದರು. ಅರಸು ನಂಬಿಕೆಯನ್ನು ಹುಸಿಗೊಳಿಸದ ಕಾರ್ಕಳದ ಜನ ಆಶ್ಚರ್ಯದಾಯಕ ಫಲಿತಾಂಶವನ್ನು ನೀಡಿ ಆ ಸೈಕಲ್ ಹುಡುಗನನ್ನು ಗೆಲ್ಲಿಸಿದ್ದರು. ಆ ಹುಡುಗ ಮುಂದೆ ಕಾರ್ಕಳದಲ್ಲಿ ಸೋಲರಿಯದ ಸರದಾರ ಎನಿಸಿಕೊಂಡ. ಈ ರಾಜ್ಯದ ಮುಖ್ಯಮಂತ್ರಿಯಾದ, ಕೇಂದ್ರದಲ್ಲಿ ಹಲವು ಖಾತೆಗಳ ಮಂತ್ರಿಯಾದ ಪಕ್ಷದ ಪ್ರಭಾವಿ ನಾಯಕನಾಗಿ ಬೆಳೆದು ನಿಂತ . ಅವರೇ ಎಂ ವೀರಪ್ಪಮೊಯ್ಲಿ.

         ಅಧಿಕಾರದಿಂದ ವಂಚಿತರಗಿದ್ದ ದಲಿತರಿಗೆ ಅಧಿಕಾರವನ್ನು ಕಲ್ಪಿಸಿದ್ದರು. ಎಸ್ ನಿಜಲಿಂಗಪ್ಪರವರ ಕಾಲದಲ್ಲಿ ಒಬ್ಬ ದಲಿತ ಮಂತ್ರಿ ಮಾಡಲಾಗಿತ್ತು. ಅದನ್ನು ಬಿಟ್ಟರೆ ಚೆನ್ನಿಗರಾಯ ಸ್ಪೀಕರ್ ಆಗಿದ್ದರು. ಕರ್ನಾಟಕದ ರಾಜಕಾರಣದಲ್ಲಿ ಇತಿಹಾಸದಲ್ಲಿ ದಲಿತರಿಗೆ ಸ್ಥಾನಮಾನ ಅವಕಾಶವನ್ನು ಅನುಭವಿಸುವ ಸರ್ಕಾರ ಮಾಡಿಕೊಟ್ಟಿರಲಿಲ್ಲ ಇದನ್ನ ಹತ್ತಿರದಿಂದ ಕಂಡಂತಹ ದೇವರಾಜು ಅರಸು ಕಾಲದಲ್ಲಿ ಐವರು ದಲಿತ ನಾಯಕರನ್ನು ಮಂತ್ರಿ ಮಾಡಿದ್ದರು. ಇದು ಸಾಮಾನ್ಯ ಸಂಗತಿಯಲ್ಲ. ಕರ್ನಾಟಕದ ರಾಜಕಾರಣವನ್ನು ಗಮನಿಸಿದರೆ ಲಿಂಗಾಯಿತರು,ಬ್ರಾಹ್ಮಣರು ಮತ್ತು ಒಕ್ಕಲಿಗರುಗಳೇ ಪ್ಯೂಡಲ್  ದರ್ಬಾರು. ಅವರಿಗೆ ದಲಿತರು ಎಂದರೆ ಅಷ್ಟಕ್ಕಷ್ಟೇ. ಅದನ್ನು ಹತ್ತಿರದಿಂದ ಕಂಡಿದ್ದ  ಅರಸು 1972ರಲ್ಲಿ ವಿದ್ಯಾವಂತ ದಲಿತರನ್ನು ಹುಡುಕಿ  ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿ ಮಂತ್ರಿ ಮಾಡಿದ್ದರು.
ನೆಲೆಯಿಲ್ಲದ “ಹೇಳವರು” ಎಂಬ ಅಲೆಮಾರಿ ಜನಾಂಗಕ್ಕೆ ನೆಲೆಯನ್ನು ಕಲ್ಪಿಸಲು ಮುಂದಾದರು, ಕಾರ್ಯಕ್ರಮ ರೂಪಿಸಿದರು. ಅವರನ್ನು ಭೂಮಾಲೀಕರನ್ನಾಗಿಸಿದರು. ಇಂದು ಆ ಹಟ್ಟಿಗೆ “ದೇವರಾಜು ಅರಸು ಹೆಳವರ ಹಟ್ಟಿ” ಎಂದು ನಾಮಕರಣ ಮಾಡಲಾಗಿದೆ.
     ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದ ಅರಸು. ಜನರು ಅರಣ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿ ಕಡಿದು ಹಾಳು ಮಾಡುತ್ತಿದ್ದರು. ಇದನ್ನು ಮನಗಂಡು ಮೈಸೂರಿನಲ್ಲಿ “ಟ್ರೀ ಪ್ರೊಟೆಕ್ಷನ್ ಆಕ್ಟ್ ” ಘೋಷಿಸಿದರು. ಅದು 1976ರಲ್ಲಿ ಕಾಯ್ದೆಯಾಗಿ ರೂಪುಗೊಂಡಿತು.
ಭೂಸುಧಾರಣೆಗಳು ವಿಶೇಷವಾಗಿ ಶ್ಲಾಘಿಸಲ್ಪಟ್ಟವು ಏಕೆಂದರೆ ಅವು ಜಮೀನ್ದಾರ ವ್ಯವಸ್ಥೆಯನ್ನು ಅಳಿಸುವಲ್ಲಿ ಪ್ರಮುಖ ಪಾತ್ರವಹಿಸಿದವು. ಇಲ್ಲಿಯವರೆಗೆ ಬಂಧಿತ ಕಾರ್ಮಿಕರೆಂದು ಪರಿಗಣಿಸಲ್ಪಟ್ಟ ರೈತರಿಗೆ ಅವರು ಸ್ವಾಭಿಮಾನ ಮತ್ತು ಘನತೆಯ ಭಾವವನ್ನು ನೀಡಿದರು. ದೇವರಾಜು ಅರಸು ಅವರು ಮಾಡಿದ ಪ್ರಯತ್ನಗಳು ಮತ್ತು ಬದಲಾವಣೆಗಳಿಂದಾಗಿ ಸಾಮಾಜಿಕ ನ್ಯಾಯದ ಪ್ರಶ್ನೆಯು ದಿನದ ಬೆಳಕನ್ನು ಕಂಡಿತು.
ಹೂಳುವುದಕ್ಕೂ ಜಾಗವಿಲ್ಲದ ಜನಕ್ಕೆ,  ಅಳಿಯ ಬಂದರೆ ಅತ್ತೆ – ಮಾವ ಮನೆಯಿಂದ ಹೊರಗೆ ಮಲಗುವ ಸ್ಥಿತಿಯಿದ್ದ ಮನೆ ಇಲ್ಲದ ಬಡವರಿಗೆ,  ಹೆಂಡತಿಯ ತಾಳಿಯನ್ನು ಅಡವಿಟ್ಟಿದ್ದ ರೈತನಿಗೆ,  ದನಿ ಕಳೆದುಕೊಂಡಿದ್ದ ಅಸಹಾಯಕರಿಗೆ, ಶೋಷಣೆಗೊಳಗಾಗಿದ್ದ ಮಹಿಳೆಯರಿಗೆ, ಪುಡಿ ಸಾಲಕ್ಕೆ ಭೂಮಾಲೀಕರ ಮನೆಯಲ್ಲಿ ಜೀತಕ್ಕಿದ್ದವರಿಗೆ ಸ್ವಾಭಿಮಾನದಿಂದ ಬದುಕುವಂತಹ ಸ್ಥಿತಿ ನಿರ್ಮಿಸಿ ಕೊಟ್ಟವರು ದೇವರಾಜ ಅರಸು. ಇಂತಹ ಕಾಂಕ್ರೀಟ್ ಕಾರ್ಯಕ್ರಮಗಳನ್ನು ಕೊಟ್ಟ ದೇವರಾಜ ಅರಸು ಈ ದೇಶ ಕಂಡ ಮಹಾನ್ ರಾಜಕಾರಣಿ. ಭಾರತದ ರಾಜಕೀಯ ಇತಿಹಾಸದಲ್ಲಿ ಸದಾ ಸ್ಮರಣೀಯರಾಗಿದ್ದಾರೆ.

      ದೇವರಾಜು ಅರಸು ಎಂದಾಕ್ಷಣ ನಮಗೆ ಹಳ್ಳಿ ನೆನಪಾಗುತ್ತದೆ. ಅರಸು ಹಳ್ಳಿಯಿಂದ ಬಂದವರು ಕೃಷಿ ಕುಟುಂಬದ ಕಷ್ಟ-ಸುಖ ಉಂಡವರು. ಆ ಕಾಲಕ್ಕೆ ಪದವಿ ಪಡೆದಿದ್ದರೂ ಸರ್ಕಾರಿ ಕೆಲಸಕ್ಕೆ ಹೋಗದೆ ಹಳ್ಳಿಗೆ ಮರಳಿ ಮಣ್ಣಿನೊಂದಿಗೆ ಬೆರೆತು ಬದುಕಿದ್ದವರು. ಯಾವುದೇ ಕಾರ್ಯಕ್ರಮಕ್ಕೆ ಹೋದರು ಸಹ ಹಳ್ಳಿಜನರ ಬಗ್ಗೆ ಅನುಕಂಪ ಇರುವುದಾಗಿ ಒತ್ತಿ ಒತ್ತಿ ಹೇಳುತ್ತಿದ್ದರು. ಹಳ್ಳಿ ಜನಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದರು.
     ದೇವರಾಜು ಅರಸುರವರು ಊಟಕ್ಕೆ ಬಹಳ ಬೆಲೆ ಕೊಡುತ್ತಿದ್ದರು. ರುಚಿಕಟ್ಟಾದ ಊಟವನ್ನು ಇಷ್ಟಪಟ್ಟು ಮಾಡುತ್ತಿದ್ದರು. ಉತ್ತರ ಕರ್ನಾಟಕದ ಕಡೆ ಬಂದರೆ ಅಲ್ಲಿನ ಸ್ಥಳೀಯ ಆಹಾರವನ್ನು ಸೇವಿಸಿದ್ದರು. ಅರಸುರವರು ಜೈನ ಸಮುದಾಯಕ್ಕೆ ಸೇರಿದವರಾಗಿದ್ದರೂ ಸಹ
ನಾನ್ ವೆಜ್ ಪ್ರಿಯರಾಗಿದ್ದರು. ನಾಟಿ ಕೋಳಿ ಸಾರು ರಾಗಿ ಮುದ್ದೆಯು ಅಚ್ಚುಮೆಚ್ಚಿನ ಊಟವಾಗಿತ್ತು.
            ದೇವರಾಜು ಅರಸು ಮುಖ್ಯಮಂತ್ರಿ ಆಗಿದ್ದಾಗ ವಿರೋಧ ಪಕ್ಷ ಪ್ರಬಲವಾಗಿತ್ತು. ಎಚ್ ಡಿ ದೇವೇಗೌಡ, ರಾಮಕೃಷ್ಣ ಹೆಗ್ಗಡೆ, ಎ ಕೆ ಸುಬ್ಬಯ್ಯರವರಂತಹ ಘಟಾನುಘಟಿಗಳು ವಿರೋಧ ಪಕ್ಷದಲ್ಲಿದ್ದರು.  ಅಷ್ಟೇ ಅಲ್ಲದೆ, ದೇವರಾಜ ಅರಸು ರವರಿಗೆ ತಮ್ಮದೇಯಾದ ಪಕ್ಷದವರಾದ ಕಾಂಗ್ರೆಸ್ ನಲ್ಲಿ ವಿರೋಧ ಇತ್ತು. ಅರಸು ರವರಿಗೆ ಒಳಗೆ ಮತ್ತು ಹೊರಗೆ ಎರಡು ಕಡೆಯಿಂದ ವಿರೋಧ ವಿದ್ದರೂ ಶಾಸನಸಭೆಯನ್ನು ಅರಸರು ಜಾಣ್ಮೆಯಿಂದ ಬುದ್ಧಿವಂತಿಕೆ ಮತ್ತು ಮತ್ಸದಿತನದಿಂದ ಸಮರ್ಥವಾಗಿ ನಿರ್ವಹಿಸುತ್ತಿದ್ದರು.
        ಉಪಚುನಾವಣೆಯಲ್ಲು ಇಂದಿರಾಗಾಂಧಿಯನ್ನು ಗೆಲ್ಲಿಸಿದ್ದೇ ಅರಸು ರವರಿಗೆ  ಮುಳುವಾಯಿತೇನೋ…? 1978 ರಲ್ಲಿ ಚಿಕ್ಕಮಗಳೂರಿನ ಲೋಕಸಭೆಯ ಉಪಚುನಾವಣೆಯಲ್ಲಿ ಇಂದಿರಾಗಾಂಧಿಯವರನ್ನು 16,000 ಮತಗಳ ಅಂತರದಿಂದ ಭರ್ಜರಿ ವಿಜಯದ ನಂತರ ದೇವರಾಜ ಅರಸು ರವರ ದುರಂತದ ದಿನಗಳು ಆರಂಭವಾದವು. ದೇಶಾದ್ಯಂತ ಅರಸುರವರ ಜನಪ್ರಿಯತೆ ಕಂಡು ಅಸೂಯೆ ಪಡುವ ಕೆಲವರು ಕಾಂಗ್ರೆಸ್ ನಲ್ಲಿ ಇದ್ದರು. ನಿರಂತರವಾಗಿ ಅರಸು ವಿರುದ್ಧ ಪಿತೂರಿ ಮಾಡುತ್ತಿದ್ದರು. ಜೊತೆಗೆ ಚಿಕ್ಕಮಗಳೂರು ಚುನಾವಣೆಯ ವಿಜಯದ ನಂತರ ಅವರನ್ನು ರಾಷ್ಟ್ರ ಗಮನಿಸುತ್ತಿದ್ದು. ಈ ಕೆಲವು ಮಾಧ್ಯಮಗಳು ಅರಸರನ್ನು ಹೊಗಳಿ ಅಟ್ಟಕ್ಕೇರಿಸಿದ್ದವು ಇದೇ ಅವರ ಕಣ್ಣುರಿಗೆ ಕಾರಣವಾಗಿತ್ತು.

        ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗ್ರಾಮದಲ್ಲಿ ಪುರಾತನ ತಾಳೆಗರಿ ಬರಹ ಓದಿ ಭವಿಷ್ಯ ನುಡಿಯುವ ಕೋಡಿಮಠದ ಸ್ವಾಮೀಜಿಯೊಬ್ಬರಿದ್ದರು. “ಅರಸು ರವರಿಗೆ ಭಾರತ ಪ್ರಧಾನಿಯಾಗುವ ಯೋಗವಿದೆ” ಎಂದು ಸ್ವಾಮೀಜಿ ಭವಿಷ್ಯವಾಣಿ ನುಡಿದಿದ್ದು ಎಲ್ಲಾ ಕಡೆ ಪ್ರಚಾರವಾಗಿತ್ತು. ಕಾಕತಾಳಿಯ ಏನೋ ಇದೆ ಸ್ವಾಮೀಜಿ ಇಂದಿರಾ ಗಾಂಧಿಗೂ ಭವಿಷ್ಯ ನುಡಿದಿದ್ದರು. ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಅವರನ್ನು ದೆಹಲಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದರು ಹಾಗಾಗಿ ಆ ಸ್ವಾಮೀಜಿಯ ಮಾತಿನ ಬಗ್ಗೆ ಭವಿಷ್ಯಕ್ಕೆ ರಾಜಕೀಯ ವಲಯದಲ್ಲಿ ಬೆಲೆ ಇತ್ತು.
ಅರಸು ತಮ್ಮ ಅಧಿಕಾರ ಕಳೆದುಕೊಳ್ಳಲು ಮೂರು ಮುಖ್ಯ ತಪ್ಪು ಹೆಜ್ಜೆಗಳನ್ನಿಟ್ಟರು ಎಂದು ಭಾಸವಾಗುತ್ತದೆ. ಮೊದಲನೆಯದು ಇಂದಿರಾ ಗಾಂಧಿಯವರನ್ನು ಎದುರು ಹಾಕಿಕೊಂಡಿದ್ದು, ಎರಡನೆಯದು ಸ್ವಂತ ಪಕ್ಷ ಕಟ್ಟಿದ್ದು, ಮೂರನೆಯದು ಜ್ಯೋತಿಷಿಗಳ ಮಾತು ಕೇಳಿದ್ದು.
ಇಂದಿರಾ ಗಾಂಧಿಯವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿದ ನಂತರ ಅರಸುರವರ ಅಹಂ ಹೆಚ್ಚಾಯಿತು. ಅದಕ್ಕೆ ಸರಿಯಾಗಿ ಮಾಧ್ಯಮಗಳು ಗಾಳಿಯಲ್ಲಿ ಕಲ್ಲು ಹೊಡೆದು ಉಬ್ಬಿಸಿ ಹಾಳು ಮಾಡಿದವು.
ರಾಷ್ಟ್ರೀಯ ನಾಯಕನೆಂದು ಭ್ರಮಿಸಿ ಸ್ವಂತ ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸಿದರು. ಸೋತು ಮನೆಗೆ ಬಂದರು. ಇವುಗಳಿಗೆಲ್ಲ ಕಾರಣ ಅವರನ್ನು ದಾರಿ ತಪ್ಪಿದ ಚಿಲ್ಲರೆ ಜ್ಯೋತಿಷಿಗಳು. ಅವರ ಮಾತು ಕೇಳಿ ದೇವರಿಗೆ, ದೆವ್ವಕ್ತಿ, ಕಲ್ಲಿಗೆ, ಮರಕ್ಕೆ ಕೈ ಮುಗಿದರು. ಅವರ ವ್ಯಕ್ತಿತ್ವಕ್ಕೆ ಮುಖಕ್ಕೆ ಮಸಿ ಬಳಿದುಕೊಂಡರು.

ಸಿದ್ದು ಬಿಎಸ್ ಸೂರನಹಳ್ಳಿ, ತಿಪಟೂರು

ಬರಹ ಲೇಖಕರ ಅಭಿಪ್ರಾಯ, ವೆಬ್‌ಸೈಟ್‌ನ ಅಭಿಪ್ರಾಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?