governance

ವೇಶ್ಯಾವಾಟಿಕೆ ಮುಂದುವರೆಯಲು ಮಾನವ ಸಾಗಾಣಿಕೆ ಕಾರಣ : ಕೆ.ವಿ. ಸ್ಟ್ಯಾನ್ಲಿ

Publicstory/prajayoga

ತುಮಕೂರು: ಸ್ವಸ್ಥ ಸಮಾಜದಲ್ಲಿ ವೇಶ್ಯಾವಾಟಿಕೆ ಇನ್ನೂ ಮುಂದುವರಿಯಲು ಮಾನವ ಸಾಗಾಣಿಕೆ ಮುಖ್ಯ ಪಾತ್ರ ವಹಿಸಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ಸಹ ಸಂಸ್ಥಾಪಕರಾದ  ಕೆ.ವಿ. ಸ್ಟ್ಯಾನ್ಲಿ ಅಭಿಪ್ರಾಯಪಟ್ಟರು.

ತುಮಕೂರು ವಿವಿಯ ವಿಶ್ವೇಶ್ವರಯ್ಯ ಸಭಾಂಹಣದಲ್ಲಿ ಇತ್ತೀಚೆಗೆ ನಡೆದ ‘ಅಂತರಾಷ್ಟ್ರೀಯ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ’ ಮತ್ತು ‘ಮಾನವ ಕಳ್ಳ ಸಾಗಣೆ ತಡೆ ಕ್ಲಬ್’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಹೆಣ್ಣು ಕೇವಲ ಹಣವನ್ನು ಸಂಪಾದಿಸುವ ಸಾಧನವಾಗಿದ್ದಾಳೆ. ದುರಂತವೆಂದರೆ, ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಕೆಲವರು ಇಂತಹ ಹೀನಾಯ ದಂಧೆಗಳಿಗೆ ತೆರೆಮರೆಯಲ್ಲಿ ಕೈ ಜೋಡಿಸುವ ಮೂಲಕ ಅನಾರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಾರಣರಾಗುತ್ತಿದ್ದಾರೆ. ಇಂತಹ ಗಂಭೀರ ಸಾಮಾಜಿಕ ಸಮಸ್ಯೆಗಳ ಪರಿಹಾರದತ್ತ ಯುವಜನತೆಯು ಚಿತ್ತ ಹರಿಸಬೇಕು. ಮನುಷ್ಯತ್ವದ ನೆಲೆಯಲ್ಲಿ ಎಲ್ಲರೂ ಸಮಾನವಾಗಿ ಬಾಳುವಂತಹ ಸಮಾಜಕ್ಕೆ ಕೈ ಜೋಡಿಸಬೇಕು ಎಂದರು.

ಮಹಿಳಾ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್  ನವೀನ್ ಕುಮಾರ್ ಎಂ ಬಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಜನಸಾಮಾನ್ಯರು ಈ ದಂಧೆಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಹಾಗಾಗಿ, ಇಂತಹ ಅಶಕ್ತ ಜನರ ಸುಗಮ ಜೀವನಕ್ಕೆ ಉಪಯುಕ್ತವಾದ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಅಮಾನವೀಯವಾದ ಮಾನವ ಕಳ್ಳ ಸಾಗಾಣಿಕೆ ಒಳಗೊಂಡಂತೆ ಅನೇಕ ಗಂಭೀರ ಸಾಮಾಜಿಕ ಸಮಸ್ಯೆಗಳಿಗೆ ಅಂತ್ಯಹಾಡಬಹುದು’ ಎಂದರು.

ಬೆಂಗಳೂರಿನ ಐ.ಜೆ.ಎಂ( ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್) ನ ಕಾರ್ಯತಂತ್ರದ ನಿರ್ವಹಣೆ ವಿಭಾಗದ ಮುಖ್ಯಸ್ಥೆ ಪ್ರತಿಮಾ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಮಾಡುವುದು ಘೋರ ಅಪರಾಧ. ಹಾಗಾಗಿ, ಇದರ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಈ ಪಿಡುಗನ್ನು ಹೋಗಲಾಡಿಸುವಲ್ಲಿ ಇಂದಿನ ಯುವಜನತೆಯ ಪಾತ್ರ ಅವಶ್ಯಕ ಎಂದು ತಿಳಿಸಿದರು.

ತುಮಕೂರು ವಿವಿಯ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ಪರಶುರಾಮ ಕೆ.ಜಿ  ಮಾತನಾಡಿ, ಇಂದಿನ ವಿದ್ಯಾರ್ಥಿಗಳು, ಮಾನವ ಕಳ್ಳ ಸಾಗಣೆಯಂತಹ ಅಮಾನುಷ ಸಾಮಾಜಿಕ ಪ್ರಕ್ರಿಯೆಗಳ ವಿರುದ್ಧ ಅರಿವು ಪಡೆದುಕೊಂಡು ಜನಜಾಗೃತಿ ಹಬ್ಬಿಸಬೇಕಾಗಿದೆ. ಈ ದೆಸೆಯಲ್ಲಿ, ವಿದ್ಯಾರ್ಥಿಗಳು ಉತ್ತಮ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಕೈಜೋಡಿಸುವುದಲ್ಲದೆ, ತಾವೇ ನಾಯಕತ್ವ ವಹಿಸಿ ಸಾಮಾಜಿಕ ಪಿಡುಗುಗಳ ವಿರುದ್ಧ ಅರಿವು ಮೂಡಿಸುವ ಜವಾಬ್ದಾರಿ ಹೊರಬೇಕು. ನಮ್ಮ ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಸಾಕಷ್ಟು ಕ್ಷೇತ್ರ ಕಾರ್ಯ ಸಂಶೋಧನೆ ಮಾಡುವುದರೊಂದಿಗೆ, ಜನಜಾಗೃತಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಒಂದು ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ, ಪ್ರತಿ ವಿದ್ಯಾರ್ಥಿಯು ತನ್ನ ಸಾಮಾಜಿಕ ಜವಾಬ್ದಾರಿ ಅರಿತುಕೊಂಡು ಸಕ್ರಿಯವಾಗಿ ಕೆಲಸಮಾಡುವ ಅಗತ್ಯವಿದೆ.’ ಎಂದರು.

ಕಾರ್ಯಕ್ರಮದಲ್ಲಿ ಒಡನಾಡಿ ಸೇವಾ ಸಂಸ್ಥೆಯ ಸಹ ಸಂಸ್ಥಾಪಕ ಪರಶುರಾಮ್ ಎಂ ಎಲ್, ಪ್ರದೀಪ್, ಬೆಂಗಳೂರಿನ ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್ ನ  ಶಬಿನ್, ತುಮಕೂರು ವಿವಿಯ ‘ಮಾನವ ಕಳ್ಳ ಸಾಗಣೆ ತಡೆ ಕ್ಲಬ್’ ನ ನೋಡಲ್ ಅಧಿಕಾರಿ ಡಾ. ಜ್ಯೋತಿ ಉಪಸ್ಥಿತರಿದ್ದರು.

Comment here