ಜಸ್ಟ್ ನ್ಯೂಸ್

ಖಾಸಗಿ ಆ್ಯಂಬುಲೆನ್ಸ್ ಗಳಿಗೆ ದರ ನಿಗದಿ

Publicstory


ತುಮಕೂರು: ಕೋವಿಡ್-19 ಕಾರ್ಯಾಚರಣೆ ಹಾಗೂ ಸೋಂಕಿನಿಂದ ಮೃತಪಟ್ಟ ಸೋಂಕಿತರ ಶವ ಸಾಗಣೆ‌ ಮಾಡುವ ಖಾಸಗಿ ಆ್ಯಂಬುಲೆನ್ಸ್ ಗಳಿಗೆ ಸರ್ಕಾರ ದರ ನಿಗಧಿಗೊಳಿಸಿದ್ದು, ಅದರ ಆಧಾರದ ಮೇಲೆಯೇ ಹಣ ಪಡೆಯಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದ್ದಾರೆ.

PTA (Patient Transport Ambulance) ಆ್ಯಂಬುಲೆನ್ಸ್ ಗಳಿಗೆ ಪ್ರಾರಂಭದ 10 ಕಿ.ಮೀ.ಗೆ 1500ರೂ.ಗಳ ದರ ನಿಗದಿಪಡಿಸಲಾಗಿದ್ದು, ಆನಂತರ ಪ್ರಾರಂಭವಾಗುವ ಪ್ರತಿ ಕಿ.ಮೀ.ಗಳಿಗೆ 120 ರೂ. ಹಾಗೂ ಕಾಯುವಿಕೆಯ ಶುಲ್ಕವನ್ನು ಪ್ರತಿ ಗಂಟೆಗೆ 200 ರೂ.ಗಳ ದರವನ್ನು ನಿಗದಿಗೊಳಿಸಲಾಗಿದೆ.

ಅದೇ ರೀತಿ BLS (Basic Life support) ಆ್ಯಂಬುಲೆನ್ಸ್ ಗಳಿಗೆ ಪ್ರಾರಂಭದ 10‌ ಕಿ.ಮೀ.ಗಳಿಗೆ 2000 ರೂ.‌ಗಳ ದರವನ್ನು ನಿಗಧಿ‌ಪಡಿಸಿದ್ದು ಆನಂತರ ಪ್ರಾರಂಭವಾಗುವ ಪ್ರತಿ ಕಿ.ಮೀ.ಗೆ 120 ರೂ.‌ಗಳ ಹಾಗೂ ಪ್ರತಿ ಗಂಟೆಯ ಕಾಯುವಿಕೆಯ ಶುಲ್ಕವನ್ನು 250 ರೂ.‌ಗಳಿಗೆ ನಿಗಧಿ‌ ಮಾಡಲಾಗಿದೆ.

ನಿಗಧಿಗೊಳಿಸಿರುವ ದರವು ಪಿಪಿಇ ಕಿಟ್, ಕೈಗವಸು,ಮಾಸ್ಕ್ ಶೀಲ್ಡ್, ಸ್ಯಾನಿಟೈಜೇಷನ್, ಚಾಲಕ, EMT ಹಾಗೂ ಇಂಧನ ವೆಚ್ಚ ಸೇರಿದಂತೆ ಇತರ ವೆಚ್ಚಗಳನ್ನು ಒಳಗೊಂಡಿರುತ್ತದೆ. ವಾಹನ ಚಾಲಕರಿಗೆ ನೀಡಲಾಗುವ ಪಿಪಿಇ ಕಿಟ್ ಹಾಗೂ ಇನ್ನಿತರೆ ಸೇವೆಗಳನ್ನು ಆಸ್ಪತ್ರೆಯಿಂದ ನೀಡತಕ್ಕದ್ದಲ್ಲ. ನಿಗದಿಗೊಳಿಸಿದ ದರವು ಇಂಧನ ವೆಚ್ಚವನ್ನೊಳಗೊಂಡಿರುತ್ತದೆ.

ಸದರಿ ವಾಹನಗಳಿಗೆ ಸರ್ಕಾರದ ವತಿಯಿಂದ ಯಾವುದೇ ಇಂಧನವನ್ನು ನೀಡಲಾಗುವುದಿಲ್ಲ. ಖಾಸಗಿ ಆ್ಯಂಬುಲೆನ್ಸ್ ನವರು ಕಡ್ಡಾಯವಾಗಿ ನಿಗದಿ ಮಾಡಿದ ದರವನ್ನು ಮಾತ್ರ ಪಡೆಯಬೇಕು. ಹೆಚ್ಚಿನ ಮೊತ್ತವನ್ನು ಪಡೆಯಲು ಬೇಡಿಕೆಯಿಟ್ಟಲ್ಲಿ ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ತುಮಕೂರು ಜಿಲ್ಲೆ (ದೂ: 9742649999) ಇವರಿಗೆ ದೂರು ನೀಡಬಹುದು.

ಆದೇಶ ಉಲ್ಲಂಘಿಸಿದ ಪಕ್ಷದಲ್ಲಿ The Disaster Management Act 2005 ರ ಕಲಂ 65(ಬಿ) ರನ್ವಯ ಕ್ರಮ ಕೈಗೊಳ್ಳಲಾಗುವುದು
ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

Comments (1)

Comment here