ತುಮಕೂರು ಲೈವ್

ಶಿಕ್ಷಕರು ನೈತಿಕತೆಯನ್ನು ಎತ್ತಿಹಿಡಿಯಬೇಕು: ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ

Public story


ತುಮಕೂರು: ನೈತಿಕ ಮೌಲ್ಯಗಳು ಕುಸಿಯುತ್ತಿರುವ ಕಾಲದಲ್ಲಿ ಗುರುವಿನ ಪಾತ್ರ ತುಂಬ ಮಹತ್ವದ್ದು. ಸಮಾಜದಲ್ಲಿ ನೈತಿಕತೆಯನ್ನು ಎತ್ತಿಹಿಡಿಯುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯವು ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನ ಬಾಳನ್ನು ಮೇಣದಂತೆ ಕರಗಿಸಿ ಇನ್ನೊಬ್ಬರಿಗೆ ಬೆಳಕಾಗುವ ಮಹಾನ್ ಕಾಯಕ ಶಿಕ್ಷಕನದ್ದು ಎಂದರು.

ಶಿಕ್ಷಕನ ಜೀವನದ ಮಾರ್ಗವೇ ವಿದ್ಯಾರ್ಥಿಗಳಿಗೆ ಮಾದರಿ. ಆದ್ದರಿಂದ ಶಿಕ್ಷಕ ಮೊದಲು ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ಪರಮಹಂಸ, ವಿವೇಕಾನಂದ, ಠ್ಯಾಗೋರ್, ರಾಧಾಕೃಷ್ಣನ್, ಕುವೆಂಪು ಅವರಂತಹ ಮಹಾನ್ ಗುರುಗಳ ಆದರ್ಶಗಳನ್ನು ಪಾಲಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಪ್ರೊ. ಮೀನಾಕ್ಷಿ ಖಂಡಿಮಠ, ಶಿಕ್ಷಕವೃತ್ತಿ ಕೇವಲ ಕಾಟಾಚಾರದ, ಹೊಟ್ಟೆಪಾಡಿನ ಉದ್ಯೋಗ ಆಗಬಾರದು; ಅದನ್ನೊಂದು ಸೇವೆ ಹಾಗೂ ತಪಸ್ಸು ಎಂದು ಭಾವಿಸಬೇಕು ಎಂದರು.

ಶಿಕ್ಷಕನಿಗೆ ಮೌಲ್ಯಗಳನ್ನು ಬಿತ್ತುವ ಹಾಗೂ ಸಮಾಜ ಕಟ್ಟುವ ಶ್ರೇಷ್ಠ ಅವಕಾಶ ಇದೆ. ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಬೆಳೆಸುವ, ಉನ್ನತ ಬದುಕನ್ನು ಒದಗಿಸುವ ಮಹತ್ತರ ಹೊಣೆಗಾರಿಕೆ ಇದೆ ಎಂದರು.

ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ ಮಾತನಾಡಿ, ಶಿಕ್ಷೆ ಕೊಡುವವನು ಶಿಕ್ಷಕನಲ್ಲ; ಬದುಕಿನ ಶಿಕ್ಷಣ ಕೊಡುವವನೇ ನಿಜವಾದ ಶಿಕ್ಷಕ. ಶಿಕ್ಷಕ ವೃತ್ತಿಗೆ ಗೌರವ ತರುವಂಥ ಗುಣಗಳನ್ನು ಅಧ್ಯಾಪಕರು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಡಾ. ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪ್ರಾಧ್ಯಾಪಕ ಪ್ರೊ. ಪಿ. ಪರಮಶಿವಯ್ಯ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಡಾ. ಸುರೇಶ್ ಡಿ. ವಂದಿಸಿದರು.

Comment here