ತುಮಕೂರು ಲೈವ್

TUMKUR: ಇಲ್ಲಿ ಮದುವೆಯಾದರೆ 8 ಗ್ರಾಂ ಚಿನ್ನದ ತಾಳಿ ಉಚಿತ ಕೊಡುಗೆ

Publicstory. in


Tumkur: ಇನ್ನು ಮುಂದೆ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಸಪ್ತಪದಿ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಎ ದರ್ಜೆಯ ದೇವಾಲಯಗಳಲ್ಲಿ ವಿವಾಹ ಮಾಡಿಕೊಳ್ಳಬಹುದು.

ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯ, ದೇವರಾಯನದುರ್ಗದ ಲಕ್ಷ್ಮಿನರಸಿಂಹ ದೇವಸ್ಥಾನ ಹಾಗೂ ಕುಣಿಗಲ್ ತಾಲ್ಲೂಕಿನ ಹಳೇಊರು ಹುಲಿಯೂರಮ್ಮ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿಸಲು ಸರ್ಕಾರ ಆಯ್ಕೆ ಮಾಡಿದೆ.

ಸರಳ ವಿವಾಹ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಧು-ವರರು ಆಗಮಿಸಿ, ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಜಿಲ್ಲೆಯ ಮೂರು ದೇವಾಲಯಗಳಲ್ಲಿ ಮೇ 24ರಂದು ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಬಗ್ಗೆ ವಿಸ್ತೃತವಾಗಿ ಚರ್ಚಿಸಿದೆ. ಮೇ 24 ದಿನಾಂಕವನ್ನು ತಾತ್ಕಾಲಿಕವಾಗಿ ನಿಗಧಿಪಡಿಸಿ, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

ವಿವಾಹ ನಡೆಯುವ ದಿನಾಂಕಕ್ಕೆ 30 ದಿನ ಮುಂಚಿತವಾಗಿ ವಧು-ವರರು ಸಂಬಂಧಿಸಿದ ದೇವಸ್ಥಾನಗಳಲ್ಲಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಗಂಡಿಗೆ ಕನಿಷ್ಠ 21 ವರ್ಷ ಹಾಗೂ ಹೆಣ್ಣಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ವಧುವರರ ಫೋಟೋ, ಜನನ ಪ್ರಮಾಣಪತ್ರ/ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಆಧಾರ್ ಕಾರ್ಡ್ ಹಾಗೂ ಅವಿವಾಹಿತ ದೃಢೀಕರಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧು-ವರರ ಅಂತಿಮ ಪಟ್ಟಿಯನ್ನು ವಿವಾಹ ದಿನದ 15 ದಿನ ಮುಂಚಿತವಾಗಿ ಪ್ರಕಟಿಸಬೇಕು ಎಂಬ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.

ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವರನಿಗೆ ವಿವಾಹಕ್ಕೆ ಅವಶ್ಯವಿರುವ ವಸ್ತುಗಳನ್ನು ಖರೀದಿಸಲು ಹಾಗೂ ಪ್ರೋತ್ಸಾಹಧನವನ್ನಾಗಿ 5ಸಾವಿರ ರೂಪಾಯಿ ಹಾಗೂ ಅದೇರೀತಿ ವಧುವಿಗೆ 10 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಮಧುವಿಗೆ ಅಂದಾಜು 8ಗ್ರಾಂ ತೂಕದ ಚಿನ್ನದ ತಾಳಿ, ಎರಡು ಗುಂಡುಗಳನ್ನು ನೀಡಲಾಗುವುದು.

ನೋಂದಣಿಯ ಸಂದರ್ಭದಲ್ಲಿಯೇ ವಧು-ವರರಿಂದ ವಿವಾಹ ನೋಂದಣಿಗೆ ಅಗತ್ಯವಿರುವ ಮಾಹಿತಿಯನ್ನು ಪಡೆದು ಇಟ್ಟುಕೊಂಡು ವಿವಾಹ ದಿನದಂದು ಸ್ಥಳದಲ್ಲಿಯೇ ವಿವಾಹ ನೋಂದಣಾಧಿಕಾರಿಗಳು ವಿವಾಹ ಪ್ರಮಾಣಪತ್ರ ನೀಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುವಂತೆ ನೋಂದಣಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸಾಮೂಹಿಕ ವಿವಾಹಗಳ ಬಗ್ಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ಮಾಡಬೇಕು. ಜಿಲ್ಲೆಯ ಗ್ರಾಮಪಂಚಾಯತಿ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ತಹಶೀಲ್ದಾರ್ ಅವರ ಕಛೇರಿ ಹಾಗೂ ಕೆಸ್ಸಾರ್ಟಿಸಿ ಬಸ್ಸುಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಪ್ರಚಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದರು.

Comment here