ತುಮಕೂರು ಲೈವ್

ತುಮುಲ್ ಗೆ ₹19 ಕೋಟಿ‌ ನಷ್ಟ: ಹಾಲು ಖರೀದಿ ದರ ₹2 ಇಳಿಕೆ- ರೈತರಿಗೆ ಬರೆ

Publicstory


ತುಮಕೂರು: ತುಮಕೂರು ಸಹಕಾರಿ ಹಾಲು ಒಕ್ಕೂಟದ ರೈತರಿಂದ ಹಾಲು ಖರೀದಿಸುವ ದರವನ್ನು ₹ 2 ಕಡಿಮೆ ಮಾಡಿದೆ.‌ಒಕ್ಕೂಟ ನಷ್ಟದಲ್ಲಿರುವ ಕಾರಣ‌ ರೈತರಿಂದ ಖರೀದಿಸುವ ಹಾಲಿನ ದರ ಇಳಿಸಲಾಗುತ್ತಿದೆ ಎಂದು ಹೇಳಿದೆ.

ಕೊರೊನಾದಿಂದ‌ ಬಸವಳಿದಿದ್ದ ರೈತರಿಗೆ ಒಕ್ಕೂಟದ ನಿರ್ಧಾರ ಶಾಕ್ ನೀಡಿದೆ. ಸರ್ಕಾರ ನೆರವಿಗೆ ಧಾವಿಸದಿದ್ದಲ್ಲಿ ಹೈನೋದ್ಯಮಿಗಳಿಗೆ ಸಮಸ್ಯೆಯಾಗಲಿದೆ.

ಹಾಲು ದರ ಇಳಿಕೆ ಬಗ್ಗೆ ಒಕ್ಕೂಟದ ಅಧ್ಯಕ್ಷರ ಮಾತುಗಳು ಹೀಗಿವೆ.


ಮೇ-೨೦೨೧ರ ಮಾಹೆಯ ದಿನವಹಿ ಹಾಲು ಶೇಖರಣೆ ಸರಾಸರಿ ೮.೧೯ ಲಕ್ಷ ಲೀಟರ್ ಇದ್ದು, ಪ್ರಸ್ತುತ ಒಕ್ಕೂಟದ ದಿನವಹಿ ಹಾಲು ಶೇಖರಣೆ ೮.೬೫ ಲಕ್ಷ ಕೆ.ಜಿ.ಗಳಷ್ಟಾಗಿರುತ್ತದೆ. ಪ್ರತಿನಿತ್ಯ ೪.೪೬ ಲಕ್ಷ ಕೆ.ಜಿ ಹಾಲನ್ನು ನೇರವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಾಗಿ ಮಾರಾಟ ಮಾಡಲಾಗುತ್ತಿದ್ದು, ಹೆಚ್ಚುವರಿಯಾದ ೪.೧೯ ಲಕ್ಷ ಕೆ.ಜಿ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆಯಾಗಿ ಪರಿವರ್ತಿಸಲಾಗುತ್ತಿದೆ. ಕೋವಿಡ್-೧೯ ಸಾಂಕ್ರಾಮಿಕ ಕಾಯಿಲೆಯ ೨ನೇ ಅಲೆಯ ಹಿನ್ನೆಲೆಯಲ್ಲಿ ದಿನಾಂಕ ೨೪.೦೪.೨೦೨೧ ರಿಂದ ೧೪.೦೬.೨೦೨೧ರವರೆಗೂ ಸರ್ಕಾರವು ಲಾಕ್‌ಡೌನ್ ಘೋಷಿಸಿದ್ದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕುಂಠಿತಗೊಂಡು ಪ್ರಸ್ತುತ ೮೦ ರೂ. ಕೋಟಿ ಮೌಲ್ಯದ ೨೨೦೦ ಮೆಟ್ರಿಕ್ ಟನ್ ಹಾಲಿನಪುಡಿ ಹಾಗೂ ೧೫೦೦ ಮೆಟ್ರಿಕ್ ಟನ್ ಬೆಣ್ಣೆ ಮಾರಾಟವಾಗದೇ ಉಳಿದುಕೊಂಡಿದ್ದು, ಏಪ್ರಿಲ್-೨೦೨೧ ಹಾಗೂ ಮೇ-೨೦೨೧ ರ ಮಾಹೆಯಲ್ಲಿ ಸಂಸ್ಥೆಗೆ‌ ೧೯ ಕೋಟಿ ರೂ. ನಷ್ಠವುಂಟಾಗಿರುವುರಿಂದ ಹೆಚ್ಚುವರಿ ಹಾಲನ್ನು ಪುಡಿಯಾಗಿ ಪರಿವರ್ತಿಸಲು ತಗಲುವ ಸಾಗಾಣಿಕೆ, ಪರಿವರ್ತನಾ ಮತ್ತು ದಾಸ್ತಾನು ವೆಚ್ಚ ಒಕ್ಕೂಟಕ್ಕೆ ಹೊರೆಯಾಗುತ್ತಿರುವುದನ್ನು ಪರಿಗಣಿಸಿ ದಿನಾಂಕ ೦೭.೦೬.೨೦೨೧ ರಂದು ನಡೆದ ಆಡಳಿತ ಮಂಡಲಿ ಸಭೆಯಲ್ಲಿ ಈ ಬಗ್ಗೆ ವಿವರವಾಗಿ ಚರ್ಚಿಸಿ ದಿನಾಂಕ ೦೮.೦೬.೨೦೨೧ ರಿಂದ ಅನ್ವಯವಾಗುವಂತೆ ಹಾಲಿನ ಖರೀದಿ ದರವನ್ನು ಲೀಟರ್ ಒಂದಕ್ಕೆ ೨/- ರೂ. ಕಡಿಮೆ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.
ಆದ್ದರಿಂದ ದಿನಾಂಕ ೦೮.೦೬.೨೦೨೧ ರಿಂದ ಅನ್ವಯಿಸುವಂತೆ ಸಂಘಗಳಿಂದ ಖರೀದಿಸುವ ಶೇ ೩.೫ ಜಿಡ್ಡಿನಾಂಶ ಹಾಗೂ ಶೇ ೮.೫೦ ಎಸ್.ಎನ್.ಎಫ್. ಗುಣಮಟ್ಟದ ಪ್ರತಿ ಕೆ.ಜಿ. ಹಾಲಿಗೆ ರೂ.೨೫.೯೩ ಮತ್ತು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ರೂ.೨೫/- ಗಳಂತೆ ನಿಗದಿಪಡಿಸಲಾಗಿದೆ. ಪ್ರಸ್ತುತ ಒಕ್ಕೂಟದಲ್ಲಿ ಶೇಖರಣೆಯಾಗುತ್ತಿರುವ ಶೇ ೮.೫೦ ಎಸ್.ಎನ್.ಎಫ್ ಗುಣಮಟ್ಟ ಇರುವ ಹಾಲಿನ ಪ್ರಮಾಣ ಶೇ ೯೦ ಇದ್ದು ದಿನಾಂಕ ೦೮.೦೬.೨೦೨೧ ರಿಂದ ಸಂಘಗಳಿಂದ ಒಕ್ಕೂಟ ಖರೀದಿಸುವ ಶೇ ೪.೧ ಜಿಡ್ಡಿನ ಪ್ರತಿ ಕೆಜಿ ಹಾಲಿಗೆ ರೂ.೨೭.೨೨ ಹಾಗೂ ಉತ್ಪಾದಕರಿಂದ ಸಂಘಕ್ಕೆ ಖರೀದಿಸುವ ಶೇ ೪.೧ ಜಿಡ್ಡಿನ ಪ್ರತಿ ಲೀಟರ್ ಹಾಲಿಗೆ ರೂ.೨೬.೯೯ ದರ ನಿಗದಿಪಡಿಸಿದೆ.
ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ನಿಂದ ಸಂಘದ ಸದಸ್ಯರು / ಸಿಬ್ಬಂದಿ ಸಹಜ ಮರಣ ಹೊಂದಿದಲ್ಲಿ ೫೦೦೦೦/- ರೂ. ಮರಣ ಪರಿಹಾರ ಧನ ನೀಡುತ್ತಿದ್ದು, ಕೋವಿಡ್-೧೯ ರ ಕಾಯಿಲೆಯಿಂದಾಗಿ ಮರಣ ಹೊಂದಿದ ಸಂಘದ ಸದಸ್ಯರು / ಸಿಬ್ಬಂದಿಗೆ ೧ ಲಕ್ಷ ರೂ. ಮರಣ ಪರಿಹಾರ ಧನ ನೀಡಲು ತೀರ್ಮಾನಿಸಲಾಗಿದೆ.
ಒಕ್ಕೂಟದ 2770 ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮಾಸ್ಕ್, face shields ಹಾಗೂ ಸ್ಯಾನಿಟೈಸರ್ ಗಳನ್ನು ಉಚಿತವಾಗಿ ನೀಡಲಾಗಿದೆ.

ಜಿಲ್ಲೆಯ ಹಾಲು ಉತ್ಪಾದಕರು ಎಂದಿನಂತೆ ಸರ್ಕಾರ ಸೂಚಿಸಿರುವ ಕೋವಿಡ್ ನಿಯಮ / ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸಂಘಗಳಿಗೆ ಹಾಲು ಹಾಕಲು ಒಕ್ಕೂಟದ ಅಧ್ಯಕ್ಷ‌ ಸಿ.ವಿ.ಮಹಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Comment here