ತುಮಕೂರ್ ಲೈವ್

ಅಂಗನವಾಡಿ ತಾಯಂದಿರ ಬೇಡಿಕೆಗಳು ವೈಜ್ಞಾನಿಕವಾಗಿದೆ; ಗಾಂಧಿವಾದಿ ಪ್ರಸನ್ನ

ಅಂಗನವಾಡಿ ತಾಯಂದಿರ ಬೇಡಿಕೆಗಳು ವೈಜ್ಞಾನಿಕವಾಗಿದೆ. ಅವುಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಗಾಂಧೀವಾದಿ ಪ್ರಸನ್ನ ಹೇಳಿದರು.
ತುಮಕೂರಿನ ಅಮಾನಿಕೆರೆಯಲ್ಲಿರುವ ಗಾಜಿನ ಮನೆಯಲ್ಲಿ ಸೇರಿದ್ದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ನೀವು ಹೋರಾಟ ಕೈಗೊಳ್ಳಿ. ನಮ್ಮ ಸಂಘಟನೆಯೂ ಸೇರಿದಂತೆ ಎಲ್ಲಾ ಜನಪರ ಸಂಘಟನೆಗಳು ಬೆಂಬಲಿಸಿ ನಿಮ್ಮ ಜೊತೆಗೆ ನಿಲ್ಲಲಿದ್ದೇವೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು. ಕಳೆದ 40 ವರ್ಷಗಳಿಂದ ಮಕ್ಕಳ ಲಾಲನೆ ಮತ್ತು ಕಲಿಕೆ ಎರಡನ್ನೂ ಮಾಡಿಕೊಂಡು ಬಂದಿದ್ದಾರೆ.  ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ನಿಮ್ಮ ಸರ್ಕಾರವನ್ನು ಕೆಳಗಿಳಿಸುತ್ತಾರೆ. ರಾಜ್ಯಾದ್ಯಂತ ಹರಡಿಕೊಂಡಿರುವ ತಾಯಂದಿರು ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನಿಡಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಹತ್ತಿಕ್ಕಲು ಹೊರಟಿದೆ. ಎಲ್ಲೆಡೆ ಪಾದಯಾತ್ರೆಗೆ ಬರುತ್ತಿರುವ ಕಾರ್ಯಕರ್ತೆಯರನ್ನು ಪೊಲೀಸರು ತಡೆಯುತ್ತಿದ್ದಾರೆ. ಇದು ನಿಲ್ಲಬೇಕು. ಯಾವುದೇ ಕಾರಣಕ್ಕೂ ನಮ್ಮ ಪಾದಯಾತ್ರೆಯನ್ನು ಕೈಬಿಡುವುದಿಲ್ಲ ಎಂದು ಹೇಳಿದರು.

ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು. ಬರೀ ಮನವಿ ಕೊಟ್ಟು ಹೋಗಲು ನಾವು ಇಲ್ಲಿಗೆ ಬಂದಿಲ್ಲ. ಮನವಿ ಕೊಡುವುದಾಗಿದ್ದರೆ ಆಯಾ ಜಿಲ್ಲೆಗಳಲ್ಲೇ ಕೊಡುತ್ತಿದ್ದೆವು. ನಾವು ಹಲವು ಷರ್ಷಗಳಿಂದ ಹೇಳಿಕೊಂಡು ಬಂದಿದ್ದೇವೆ. ಶಾಲಾಪೂರ್ವ ಶಿಕ್ಷಣವನ್ನು ಅಂಗನವಾಡಿಗಳಲ್ಲೇ ಆರಂಭಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಭಾಗ್ಯಲಕ್ಷ್ಮಿ, ಪಲ್ಸ್ ಪೊಲೀಯೊ ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಸರ್ಕಾರ ಅಂಗನವಾಡಿ ನೌಕರರಿಂದ ಬೇರೆ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದೆ. ಅವರಿಗೆ ಸೂಕ್ತ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡುತ್ತಿಲ್ಲ ಎಂದು ದೂರಿದರು.

Comment here