ಅಂಗನವಾಡಿಗಳಲ್ಲೇ ಶಾಲಾ ಪೂರ್ವ ಶಿಕ್ಷಣವನ್ನು ಆರಂಭಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಪೊಲೀಸರು ತಡೆಯೊಡ್ಡಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತುಮಕೂರಿನ ಗಾಜಿನ ಮನೆಯಲ್ಲೇ ಠಿಕಾಣಿ ಹೂಡಿದ್ದಾರೆ.
ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಅಂಗನವಾಡಿ ನಾಯಕಿಯರ ನಿಯೋಗವೊಂದನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಬೆಳಗಿನಿಂದಲೂ ಪೊಲೀಸರು ಮತ್ತು ಅಂಗನವಾಡಿ ನೌಕರರ ಸಂಘದ ಪ್ರಮುಖರು ಮತ್ತು ಸಿಐಟಿಯು ಮುಖಂಡರ ಜೊತೆ ಪೊಲೀಸರು ಸತತ ಮಾತುಕತೆ ನಡೆಸಿದರು. ಸರ್ಕಾರದ ಮುಖ್ಯಸ್ಥರಿಂದ ಒಪ್ಪಿಗೆ ಪತ್ರ ತಂದರೆ ಮಾತ್ರ ಸರ್ಕಾರದ ಜೊತೆ ಮಾತುಕತೆಗೆ ಸಿದ್ದ ಎಂದು ಹೋರಾಟಗಾರರು ಖಚಿತಪಡಿಸಿದರು.
ಗಾಜಿನಮನೆಯ ಆವರಣಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನಂ ವಂಶಿಕೃಷ್ಣ ಅಂಗನವಾಡಿ ನಾಯಕರೊಂದಿಗೆ ಅರ್ಧ ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದರು. ಸರ್ಕಾರದಿಂದ ಅಧಿಕೃತ ಪತ್ರ ಬಂದರೆ ಮಾತ್ರ ನಾವು ಮಾತುಕತೆ ನಡೆಸುತ್ತೇವೆ ಎಂದು ಪಟ್ಟು ಹಿಡಿದರು. ಹೀಗಾಗಿ ಪೊಲೀಸರು ಅಲ್ಲಿಂದ ಮರಳಿದರು.
ಪೊಲೀಸರು ಮತ್ತೆ ಧರಣಿ ಸ್ಥಳಕ್ಕೆ ಆಗಮಿಸಿ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಂಧೂ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದ, ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು, ಶಾಂತಾಘಂಟಿ, ನಾಗರತ್ನ ಅವರನ್ನೊಳಗೊಂಡ ನಿಯೋಗ ಶಿಕ್ಷಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ತೆರಳಿದೆ.
ಗಾಜಿನ ಅರಮನೆಯಲ್ಲಿ ಸಮಾವೇಶಗೊಂಡ ಸಹಸ್ರ ಸಹಸ್ರ ಮಂದಿ ಕಾರ್ಯಕರ್ತೆಯರು ಸುಡು ಬಿಸಿಲಲ್ಲೇ ತಮ್ಮ ನಾಯಕರ ಭಾಷಣವನ್ನು ಆಲಿಸಿದರು. ಬೇಡಿಕೆಗಳು ಈಡೇರುವವರೆಗೂ ಇಲ್ಲಿಂದ ಕದಲುವುದಿಲ್ಲ. ಜಿಂದಾಬಾದ್ ಜಿಂದಾಬಾದ್ ಸಿಐಟಿಯು ಜಿಂದಾಬಾದ್, ಅಂಗನವಾಡಿ ಸಂಘಟನೆಗೆ ಜಯವಾಗಲಿ ಎಂಬ ಘೋಷಣೆಗಳು ಕ್ಷಣಕ್ಷಣಕ್ಕೂ ಮೊಳಗಿದವು.
ಇದಕ್ಕೂ ಮೊದಲು ತುಮಕೂರಿನ ಟೌನ್ ಹಾಲ್ ನಿಂದ ಗಾಜಿನ ಮನೆಯವರೆಗೂ ಅಂಗನವಾಡಿ ಕಾರ್ಯಕರ್ತೆಯರು ಮೆರವಣಿಗೆ ನಡೆಸಿದರು. ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತೆಯರು ಆಗಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ವೇದಿಕೆಯ ಮೇಲೆ ಎಸ್. ವರಲಕ್ಷ್ಮಿ, ಸುನಂದ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಂಧೂ, ಪ್ರಾಂತ ರೈತ ಸಂಘದ ಯು. ಬಸವರಾಜು, ನವೀನ್ ಕುಮಾರ್, ಗುರುರಾಜ್ ದೇಸಾಯಿ, ಹೀಗೆ ಹಲವು ಮುಖಂಡರು ಹಾಜರಿದ್ದು ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರ ಜನಸಾಗರ ಹರಿದುಬರುತ್ತಿರುವುದನ್ನು ಕಂಡ ಪೊಲೀಸರು ರಾಜ್ಯದ ವಿವಿಧ ಭಾಗಗಳಲ್ಲಿ ತಡೆಯೊಡ್ಡಿದರು. ಕೆಲವರನ್ನು ಗೃಹಬಂಧನದಲ್ಲಿಟ್ಟು ಬಿಡುಗಡೆ ಮಾಡಿದರು. ಬೆಂಗಳೂರು ಮತ್ತು ತುಮಕೂರಿನಲ್ಲಿ 144ನೇ ಸೆಕ್ಷನ್ ಹಾಕಲಾಗಿದೆ ಎಂದು ಕಾರ್ಯಕರ್ತೆಯರು ಒಂದೆಡೆ ಸೇರದಂತೆ ಪೊಲೀಸರು ಅಡ್ಡಿಪಡಿಸಿದರು. ಆದರೂ ಇದ್ಯಾವುದನ್ನೂ ಲೆಕ್ಕಿಸದೆ ಕಾರ್ಯಕರ್ತೆಯರು ಆಗಮಿಸಿದ್ದಾರೆ. ನಾವು ಶಾಂತಿಯುತವಾಗಿ ಧರಣಿ ಮಾಡುತ್ತೇವೆ. ಪಾದಯಾತ್ರೆ ನಡೆಸುತ್ತೇವೆ. ಆದರೆ ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಮುಖಂಡರು ಸಿಡಿಮಿಡಿ ವ್ಯಕ್ತಪಡಿಸಿದರು.