ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವ ಮಹಿಳೆಯರು ಸೌಲಭ್ಯ, ಕನಿಷ್ಠಕೂಲಿ ಇಲ್ಲದೇ 18 ವರ್ಷಗಳಿಂದ ದುಡಿಯುತ್ತಾ ಬರುತ್ತಿದ್ದು ಅವರ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಗಮನಹರಿಸಿಲ್ಲ. ವೇತನ ಹೆಚ್ಚಳ, ನಿವೃತ್ತಿ ವೇತನ ಇನ್ನಿತರ ಬೇಡಿಕೆಗಳ ಬಗ್ಗೆ ನೀಡಿದ್ದ ಭರವಸೆಗಳು ಈಡೇರಿಲ್ಲ. ಸರ್ಕಾರದ ಧೋರಣೆ ಖಂಡಿಸಿ ಹಾಗೂ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಸೆಂಬರ್ 26, 2019ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತ ತಿಳಿಸಿದ್ದಾರೆ.
ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಯಾವುದೇ ಮಾಹಿತಿ ನೀಡದೇ ಏಕಾಏಕಿ ಇಸ್ಕಾನ್ ಅಕ್ಷಯ ಪಾತ್ರೆಗೆ ಬಿಸಿಯೂಟ ಯೋಜನೆ ವಹಿಸಲು ಮುಂದಾಗಿರುವುದು ಖಂಡನೀಯ.
ಸರ್ಕಾರದ ಈ ಕ್ರಮದಿಂದ ಬಡ ಮಹಿಳೆಯರ ಹೊಟ್ಟೆಯ ಮೇಲೆ ಹೊಡೆದಂತೆ ಆಗುತ್ತದೆ. ಇದು ಖಂಡನೀಯ ಎಂದರು.
ಬಿಸಿಯೂಟ ನೌಕರರಿಗೆ ಕನಿಷ್ಟ ವೇತನ ಹೆಚ್ಚಳ ಮಾಡಬೇಕು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಶಾಲೆಯಲ್ಲಿ ದಿನಕ್ಕೆ 6 ಗಂಟೆಗಿಂತಲೂ ಹೆಚ್ಚು ಕೆಲಸ ಮಾಡಿದರೂ ಆದೇಶದಲ್ಲಿ ಕೇವಲ 4 ಗಂಟೆ ಎಂದು ನಮೂದಿಸಿರುವುದನ್ನು 6 ಗಂಟೆ ಎಂದೂ ನಮೂದಿಸಬೇಕು. ಅಡುಗೆ ಕೆಲಸದೊಟ್ಟಿಗೆ ಶಾಲೆಗಳಲ್ಲಿ ‘ಡಿ’ ಗ್ರೂಪ್ ನೌಕರರು ಇಲ್ಲದಿರುವುದರಿಂದ ಇವರಿಗೆ ‘ಡಿ’ ಗ್ರೂಪ್ ಕೆಲಸಗಳನ್ನು ಅಧಿಕೃತವಾಗಿ ವಹಿಸಬೇಕು ಎಂದು ಒತ್ತಾಯಿಸಿದರು.
ಸಂಘಟನಾ ಕಾರ್ಯದರ್ಶಿ ಕೆಂಚಮ್ಮ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕೈದೋಟ ಮಾಡಲು ಅವಕಾಶವಿದ್ದು ಇದಕ್ಕೆ ಅನುಮತಿ ನೀಡಬೇಕು. 2001-02 ದುಡಿಯುತ್ತಿರುವ ಮಹಿಳೆಯರು ನಿವೃತ್ತಿ ಅಂಚಿನಲ್ಲಿದ್ದಾರೆ. ಅವರಿಗೆ ನಿವೃತ್ತಿ ಸೌಲಭ್ಯ ನೀಡಬೇಕು. ಬಿಸಿಯೂಟ ನೌಕರರಿಂದ 100 ರೂ, ಸರ್ಕಾರ 100 ಕೊಟ್ಟು ಎಲ್‍ಐಸಿ ಯಲ್ಲಿ ಇಟ್ಟು ನಿವೃತ್ತಿಯಾದಾಗ ಕೂಡಿಟ್ಟ ಹಣ ಇಡಗಂಟು ಕೊಡಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿ ಮೇಲ್ವಿಚಾರಣೆ ಇರಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ಕೈಬಿಡುವ ಕ್ರಮ ನಿಲ್ಲಬೇಕು. ಅಡುಗೆ ಸಿಬ್ಬಂದಿ ಮೇಲೆ ಆರೋಪ ಹೊರಿಸಿ ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಿಲ್ಲಬೇಕು. ಬಿಸಿಯೂಟ ಯೋಜನೆ 12ನೇ ತರಗತಿವರೆಗೆ ವಿಸ್ತರಿಸಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ 2 ಅಡುಗೆಯವರು ಇರಲೇಬೇಕು. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಭತ್ಯೆ ನೀಡಬೇಕು ಎಂದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ, ಅಡುಗೆ ಗುಣಮಟ್ಟ, ಸ್ವಚ್ಚತೆ, ಅಡುಗೆ ಸಿಬ್ಬಂದಿ ಬದ್ದತೆಯನ್ನು ಹೆಚ್ಚಿಸಲು ಮತ್ತು ಹಾಗೆಯೇ ಸರ್ಕಾರದಿಂದ ತಂದಿರುವ ಸುಧಾರಣೆಗಳನ್ನು ಅಡುಗೆ ಸಿಬ್ಬಂದಿಗೆ ತಿಳಿಸುವುದು ಅತ್ಯಂತ ಪ್ರಮುಖವಾಗಿದೆ. ಹೀಗಾಗಿ ತಿಂಗಳಿಗೊಮ್ಮೆ ಕ್ಷಸ್ಟರ್ ಮಟ್ಟದಲ್ಲಿ ಕನಿಷ್ಟ ಮುಖ್ಯ ಅಡುಗೆದಾರರಿಗೆ ಮಾಸಿಕ ಸಭೆ ನಡೆಸಬೇಕು ದಲಿತ ಮಹಿಳೆಯರಿಂದ ಅಡುಗೆ ಮಾಡಿಸಬೇಕು. ಅಡುಗೆಯ ಸಂಪೂರ್ಣ ಜವಾಬ್ದಾರಿ ಮುಖ್ಯ ಅಡುಗೆಯವರ ಕೈಯಲ್ಲೇ ಇರಬೇಕು. ಶಿಕ್ಷಕರಿಗೆ ಮತ್ತು ಇತರ ಸಿಬ್ಬಂದಿಗಳಿಗೆ ಬೇಸಿಗೆ ಮತ್ತು ದಸರಾ ರಜಾ ನೀಡುವಂತೆ ಅಕ್ಷರ ದಾಸೋಹ ಸಿಬ್ಬಂದಿಗೂ ಭತ್ಯೆಯನ್ನು ನೀಡಬೇಕು. ಹೇರಿಗೆ ರಜಾ, ಹೇರಿಗೆ ಭತ್ಯೆ ನಿಡಬೇಕು. ರಾಷ್ಟ್ರೀಯ ಸ್ವಾಸ್ಥ ಭೀಮಾಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಜಾ, ಕೊರಟಗೆರೆ ತಾಲೂಕು ಆಧ್ಯಕ್ಷೆ ನಾಗರತ್ನ, ಪಾವಗಡ ತಾಲೂಕು ಅಧ್ಯಕ್ಷೆ ಸಿದ್ದಮ್ಮ, ಖಜಾಂಚಿ ಸುನೀತ ಉಪಸ್ಥಿತರಿದ್ದರು.