ಜಸ್ಟ್ ನ್ಯೂಸ್

ಅತ್ಯಾಚಾರ ಆರೋಪಿಗಳ ಎನ್ ಕೌಂಟರ್

 ಹೈದರಾಬಾದ್: ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸೈಬರಾಬಾದ್ ಪೊಲೀಸರು ಗುಂಡು ಹಾರಿಸಿದ್ದಾರೆ.

  ಪಶುವೈದ್ಯೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಘಟನಾ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಆರೋಪಿಗಳಿಂದ ಮಾಹಿತಿ ಪಡೆಯುತ್ತಿದ್ದ ವೇಳೆ,  ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಗುಂಡು ಹಾರಿಸಬೇಕಾಯಿತು ಎಂದು ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ್ ಸಜ್ಜನರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆರೋಪಿಗಳು ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿಯೂ ಅಪರಾಧ ಕೃತ್ಯಗಳನ್ನು ಎಸಗಿರುವ ಸಾಧ್ಯತೆಗಳಿವೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಪಶು ವೈದ್ಯೆಯ ಮೇಲೆ ನಾಲ್ವರು ದುಷ್ಕರ್ಮಿಗಳು ನವೆಂಬರ್ 27ರಂದು ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದರು.

ಪ್ರಕರಣ ಸಂಬಂಧ ಸೂಕ್ತ ಸಾಕ್ಷ್ಯಧಾರಗಳನ್ನು ಕಲೆ ಹಾಕಿ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ ಆರೋಪಿಗಳನ್ನು 10 ದಿನಗಳ ಪೊಲೀಸ್‌ ವಶಕ್ಕೆ ನೀಡಿತ್ತು.

ಚರ್ಲಪಲ್ಲಿ ಜೈಲಿನಲ್ಲಿ ಆರೋಪಿಗಳನ್ನು ಇರಿಸಲಾಗಿತ್ತು. ಕೃತ್ಯ ನಡೆದ ಸ್ಥಳದಲ್ಲಿ ಮಹಜರು ಮಾಡಲು ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲು ಶಿವಾ, ಜೊಲ್ಲು ನವೀನ್ ಕುಮಾರ್ ಮತ್ತು ಚಿನಟಕುಂಟ ಚೆನ್ನ ಕೇಶವುಲು ಅವರನ್ನು  ಅಗತ್ಯ ಭದ್ರತೆಯೊಂದಿಗೆ ಕರೆದುಕೊಂಡು ಹೋಗಲಾಗಿತ್ತು.

ವಿಚಾರಣೆ ವೇಳೆ ಆರೋಪಿಗಳು ಪೊಲೀಸರ ಮೇಲೆ ಕಟ್ಟಿಗೆಗಳಿಂದ ಹೊಡೆದು ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದರು. ಆಗ   ಪೊಲೀಸರ ತಂಡ ಆರೋಪಿಗಳ ಮೇಲೆ ಫೈರಿಂಗ್‌ ನಡೆಸಿದೆ ಎಂದು ಮಾಹಿತಿ ನೀಡಿದರು.

ಮುಂಜಾನೆ 6 ರಿಂದ 6.15ರ ಸುಮಾರಿಗೆ ಎನ್‌ಕೌಂಟರ್‌ ನಡೆದಿದೆ. ಸ್ಥಳದಲ್ಲಿದ್ದ ಎಸ್‌ಐ ಸೇರಿದಂತೆ ಇಬ್ಬರು ಪೋಲಿಸರು ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.

ಆರೋಪಿಗಳು ಸಂತ್ರಸ್ತೆಯ ಮೊಬೈಲ್‌ ಸೇರಿ ಆಕೆಯ ವಸ್ತುಗಳನ್ನು ಅಡಗಿಸಿಟ್ಟಿದ್ದರು. ಅವುಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣ ಸಂಬಂಧ  ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಎನ್ ಕೌಂಟರ್ ನಡೆದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ಮಂದಿ ಪೊಲೀಸರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

 

Comment here