Friday, September 13, 2024
Google search engine
Homeಜನಮನಅಮ್ಮನ ವಾರವೂ, ಗಿಣ್ಣಿನ ಸೊಬಗೂ...

ಅಮ್ಮನ ವಾರವೂ, ಗಿಣ್ಣಿನ ಸೊಬಗೂ…

Photo: ವಾಟ್ಸಾಪ್ ನಲ್ಲಿ ಬಂದಿದ್ದು.

ಉಜ್ಜಜ್ಜಿ ರಾಜಣ್ಣ


ಬೆಳೆ ಕೊಯ್ಲು ಮುಗಿದು ಕಣಗಾಲ ಶುರುವಾಗಿರುತಿತ್ತು. ಬಾವಿ ದಿಣ್ಣೆ, ಹಳ್ಳಸಾಲು, ಗುಂಡುಗಟ್ಟೆ, ಕೆರೆ ಏರಿ ತನುವಾದ ಜಾಗದಲ್ಲಿ ಇರಬಹುದಾದ ಹೂವಿನ ಗಿಡಗಳು ಮಳೆಗಾಲಕ್ಕಿಂತಲೂ ಹೇಳೆಚ್ಚಾಗಿ ಬಿಸಿಲುಂಡು ಕಣಗಿಲೆ, ಸುತ್ತು ಕಣಗಿಲೆ, ಧೂಪ ಕಣಗಿಲೆ ಹೂವುಗಳು ಅರಳಿರುತಿದ್ದವು.

ಮುತ್ತುಗದ ಹೂವೋ ಅರಳಿ ಶಿವರಾತ್ರಿ ಕರೆಯುತ್ತಿರುತ್ತವೆ. ಖೂಳೆ ಹೊಲಗಳಲ್ಲಿ ತುಂಬೆ ಗಿಡಗಳಂತೂ ಮೈ ತುಂಬಾ ಹೂವಾಗಿ ರಾಶಿ ಪೂಜೆಗೆ ಅಣಿಯಾಗಿರುತಿದ್ದವು.


ನಿಮ್ಮೂರಿನ ವರದಿಗಾರರು ನೀವೆ ಯಾಕಾಗಬಾರದು. ನಿಮ್ಮೂರಿನ ಸಮಸ್ಯೆ, ವರದಿಗಳನ್ನು ಇಲ್ಲಿಗೆ‌ ವಾಟ್ಸಾಪ್ ಮಾಡಿ: 9844817737


ಅವಗಳ ಮೈ ಸಿರಿ ನೋಡುವಾಗ ಯಾರಾದರೂ ತುಂಡನೆ ಆಳು ಎದುರುಗೋಳ ಬಂದರೆ ತುಂಬೆ ಗಿಡುಕೆ ಏಣಿ ಹಾಕೋ ಹೂವಾಡಿಗ ಎನ್ನುತಿದ್ದರು. ಬ್ರಹ್ಮದಂಡೆ ಹೂವುಗಳೂ ಕಣಗಾಲದಲ್ಲೇ ಹೆಚ್ಚಾಗಿ ಅರಳುತ್ತವೆ. ಹಳ್ಳಕಾಯಿ ಮುರಿಯಲು ಬಂದಿರುತಿದ್ದವು. ಹುಚ್ಚಳ್ಳು ಸಜ್ಜೆ ತೆನೆ ಅಕ್ಕಡಿ ಜೋಳ ಒಣಗಿ ಹೊರೆ ಕಟ್ಟಲ್ಪಟ್ಟಿರುತಿದ್ದವು.

ಕಣಗಾಲ ಬಂದರೂ ಅವರೆ ಕಾಯಿ ಬಳ್ಳಿ ಒಳಗೆ ಅಂಕುಲ ಅಂಕುಲ ಅವರೆ ಗಿಡಕ್ಕೆ ಬುಡದಿಂದ ಬಳ್ಳಿಗುಂಟಲೂವೆ ಕಿರು ಗೆಜ್ಜೆ ಕಟ್ಟಿದಂತಿರುತಿದ್ದವು ಅವು ಬಲಿತು ಮೂಗೊಣಗುವ ಸೊಗಡವರೆ ಕಾಲ ಇನ್ನೇನು ಮುಗಿಯೋದರ ಅವದಿಯಲ್ಲಿ ಕಣಗಾಲವೂ. ತೊಳಕೆ ಹುರುಳಿ ಬಿದ್ದ ಇಬ್ಬನಿ ಕುಡಿದು ಬಲಿಯುತ್ತಿರುತ್ತಿತ್ತು.

ಹುರುಳಿ ಬೋಟು ಹೊಲದಲ್ಲಿ ಗೆಜ್ಜೆ ಕಟ್ಟಿ ಬೆಳೆಸಿದಂತೆ ಇರುತ್ತಿತ್ತು. ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಹಿಸುಕಿದ ಅವರೆ ತೊಕ್ಕು ಆಂಮ್ರ ಬರಾಗಿ ಮುದ್ದೆ ದೊಡ್ಡಿ ಭತ್ತದ ಅಕ್ಕಿ ಅನ್ನ. ಅಷ್ಟೊತ್ತಿಗಾಗಲೇ ಹೊಲ ಭತ್ತದ ಕೊಯ್ಲು ಮುಗಿಸಿ ಭತ್ತ ಸರುಗಂತೆ ಹೊಡೆದು ಒಣಗಿಸಿ ತುಂಬಿಕೊಂಡಿರುತಿದ್ದರು.

ಹೊತ್ತಿಗೆ ಸರಿಯಾಗಿ ಗ್ಯಾನ ಮಾಡಿ ಗೊಂತಿ ಸೇರುವ ರಾಸುಗಳಂತೆ ಹಟ್ಟಿ ಒಳಗೆ ಈವಳ್ಳಿ ರಾಸುಗಳಾದ ಎಮ್ಮೆ, ಹಸಗಳು ಕರು ಹಾಕಿರಿತಿದ್ದವು.‌ ಕಾಲಕ್ಕೆ ಸರಿಯಾಗಿ ಅಪರೂಪಕ್ಕೊಮ್ಮೆ ತಪ್ಪವೂ ಗಿಣ್ಣದಾಲು ದೊರೆಯುತಿತ್ತು.

ಗಿಣ್ಣು ಹಾಲು ಕಾಯಿಸಿ ಪಾಯಸ ಮಾಡುದಕ್ಕೆ ಗಿಣ್ಣ ಕಾಯಿಸೋದು ಎನ್ನುತಿದ್ದರು. ಸಾಮಾನ್ಯವಾಗಿ ಅಮ್ಮನ ವಾರವೇ ಗಿಣ್ಣ ಕಾಯಿಸುತಿದ್ದರು. ಅಮ್ಮನ ವಾರ ಎಂದರೆ ಗೊತ್ತಲ್ಲ; ಬ್ರೇಸ್ತುವಾರದು ಮುಂದ್ಲು ದಿನ ಸುಕ್ರುವಾರ. ಸನಿವಾರ ಮುಗುದು ಸ್ವಾಮಾರ ಆಗಿ ಬಳಿಗ್ಗೇ ಮಂಗಳುವಾರ ಬರುತ್ತಲ್ಲ ಅದೂವೆ ಅಮ್ಮನ ವಾರ. ಅಬ್ಬಬ್ಬಾ! ಅದೆಂತಹ ಸೊಬಗಿನ ಕಾಲ ನೋಡಿದೆವು. ಮನೆತನ ತಿಂಗಳ ಮಟ್ಟಿಗೆ ಕಣದತ್ತಿರವೇ ಸ್ಥಳಾಂತರಗೊಂಡಿರುತಿತ್ತು.

ಕೊಯ್ಲು ಕಾಲಕ್ಕೆ ಸರಿಯಾಗಿ ಕುರಿ ಭಂಡ ಕಟಾವು ಮಾಡೊ ಕಾಲ. ಚಿಕ್ಕನಾಯಕನಹಳ್ಳಿ ಕುರುಬುರು ರಾಮಣ್ಣ ಅವರೆಲ್ಲರೂ ಬರುತಿದ್ದರು.

ಭಂಡ ಕಟಾವು ಮಾಡಲು ಕುರುಬುರು ಬರುತ್ತಾರೆ ಎಂದರೆ ವಾರಕ್ಕೆ ಮುಂಚೆಯೇ ಕುರಿಯೋರು ಮನೆಗಳಲ್ಲಿ ತಯಾರಿಗಳಾಗತಿದ್ದವು. ಅವರನ್ನು ನೆಂಟರನ್ನು ಕಂಡ ಹಾಗೆ ಕಾಣೋರು. ಅವರಿಗೆ ಸುಖುವಾದ ಊಟ ಬಾಯಿ ತಂಬಾ ಎಲಡಿಕೆ. ಕಂಬಳಿ ಗದಿಗೆ ಹಾಕಿ ಇಳ್ಳೇವು ದಕ್ಷಿಣೆ ಇಟ್ಟು ಜಾಡಿ ಪೂಜೆ ಮಾಡಿ ಹಾಲು ಅರಿವಾಣದಲ್ಲಿ ಅವರನ್ನು ಒಳಗೊಂಡು ನಂತರದಲ್ಲಿ ಭಂಡದ ಕಟಾವು ಮಾಡಲಾಗುತ್ತಿತ್ತು.

ಅವರು ಬಂದರೆ ಐದಾರು ದಿನ ಅವರಿಗೆ ಮಾಡಿದ್ದೇ ನಮುಗೂವೆ ಹಬ್ಬ. ಕಡಗಣ ಆಗೋದು ಅಗೋ ಇಗೋ ಅನ್ನೋದುರೊಳಿಗೆ ಕೆರೆ ಆಶ್ರಯದ ಬೇಸುಗೆ ಬೆಳೆ ಗದ್ದೆ ನಾಟಿ ಕೆಲಸಗಳು ಕೈ ನೆರವಿಗೆ ಬರುತಿದ್ದವು.

ಕಣಗಾಲದಲ್ಲೇ ಮಾಯಿನು ಮರದು ಸಾಬರು ಹುಣಸೆ ಮರದ ಸಾಬರು ಮಾಯಿನು ಕಾಯಿ ಇಳುವೋಕೆ, ಹುಣಸೆ ಮರ ಬಡಿಯಾಕೆ ಬರುತಿದ್ದರು. ಅವರು ಹುಣಸೆ ಮರ ಬಡಿಯಕೋದೋರಿಗೆ, ಹಣ್ಣಾಯಕೋಗೋರಿಗೆ ಕೂಲಿನೂ ಕೊಡೋರು.

ಮರ ಫಸಲು ಗುತ್ತಿಗೆ ಮೊದಲೇ ಮಾತನಾಡಿಕೊಂಡಿರುತಿದ್ದರು. ಮುಂಗಡ ಹಣ ಪಡೆದವರು ಫಸಲು ದುಡ್ಡು ಕೊಟ್ಟವರ ಕೈ ಸೇರುವವರೆವಿಗೂ ಬೆಳೆಯನ್ನು ನಿಗುವಾಗಿ ನೋಡಿಕೊಳ್ಳುವುದು ವಾಡಿಕೆ. ಕೈ ವೊಡ್ಡಿ ಇಸ್ಕಂಡೀವಿ ಅವುರಿಗೆ ಮೋಸ ಆಗಬಾರದೆಂಬ ಕಾರಣದಿಂದಾಗಿ ವಾರಸುದಾರರೇ ಮರ ಕಾಯೋರು. ಹೀಗೆ ಫಸಲು ಕಾಯ್ದ ಕೊಟ್ಟದ್ದಕ್ಕೆ ಉಳಿಕೆ ಹಣದ ಜೊತೆಯಲ್ಲಿ ಉಬ್ಬಲುತಟ್ಟಿ ತಂಬಾ ಹುಣಸೆಹಣ್ಣು ಕೊಡಲಾಗುತ್ತಿತ್ತು.

ಮಾವು ಹುಣಸೆಯನ್ನು ಕೊಂಡು ಮೌಲ್ಯವರ್ಧನೆ ಮಾಡಿ ಕೊಡುತಿದ್ದರು. ಇದರಿಂದ ಜನ ಬಂಗ ನೀಸೋದು ತಪ್ಪೋದು. ವರ್ಷದಲ್ಲಿ ಎರಡೂ ಮೂರು ಬಾರಿಗೆ ಬಂದು ಗೇಯೋ ಎತ್ತುಗಳಿಗೆ ಲಾಳ ಕಟ್ಟಿ ಮತ್ತೆ ಐದಾರು‌ ದಿನಗಳ ನಂತರ ಬಂದು ಲಾಳ ಕಟ್ಟಿಸಿಕೊಂಡ ರಾಸು ಅವುಗಳು ಸರಿಯಾಗಿ ಕಾಲು ತುಳಿದುಕೊಂಡಿವೆಯೆ ಎಂದು ತಿಳಿದುಕೊಳ್ಳಲು ಹೋಗಿ ಬಂದು ಮಾಡುತಿದ್ದರು. ಹೊಸ ಬಟ್ಟೆ ಅಸನಾಗಿ ಅಳತೆಗೆ ಸರಿಯಾಗಿ ಬುಸುಕೋಟು, ತಂಬುದೋಳಿನು ಅಂಗಿ ಹೊಲಿದು ಸಿದ್ಧಪಡಿಸಿ ಕೊಡುತಿದ್ದರಲ್ಲ ಬಟ್ಟೆ ಹೊಲಿಯೊ ಸಾಬರು.

ಅದುಕೂ ಮೊದಲು ನಾವೆಲ್ಲರೂ ತೊಡುತಿದ್ದ ಅಳತೆಗೆ ಸಾಲದ ಅಥವಾ ದೊಗಲೆ ಆಗಿರುತಿದ್ದ ಸಂತೆ ಮೇಲಿನ ಮಾರಿಗೆ ಅಂಗಿಗಳು. ಹಳ್ಳಿಗಳಲ್ಲಿ ಮಷಿನ್ ಸಾಬರ ಮನೆಗಳು. ಅವರು ಸಾಮಾನ್ಯವಾಗಿ ಮೊದಲು ಹಳ್ಳಿಗಳಿಗೆ ಹಿಟ್ಟಿನ ಗಿರಣಿಗಳನ್ನು ತಂದವರು.

ಇದರಿಂದಾಗಿ ಗ್ರಾಮೀಣ ಭಾರತದಲ್ಲಿ ಬಾರೀ ಬದಲಾವಣೆಯೇ ಆಯಿತು. ಅವಗೆಲ್ಲಾ, ಅವಿಭಕ್ತ ಕುಟುಂಬಗಳ ಹಳ್ಳಿ ಭಾರತಕ್ಕೆ ಇವರು ಹಿಟ್ಟಿನ ಗಿರಣಿಗಳನ್ನು ತಂದದ್ದು ಮಹಿಳಾ ಭಾರತಕ್ಕೆ ಬಹುತೇಕ ಬಹು ದೊಡ್ಡ ಬಿಡುಗಡೆಯಾಯಿತು.

ಬೇಸಾಯ ಮಾಡಿ ಇಡೀ ಕುಟುಂಬವೇ ಬೆಳೆದ ದವಸ ದಿನಸಿಗಳನ್ನು ಮನೆಯ ಒಬ್ಬರೋ ಇಬ್ಬರೋ ಮಹಿಳೆಯರು ಅವುಗಳನ್ನು ವರ್ಷವಿಡೀ ಕುಟ್ಟಿ ಬೀಸಿ ಅಡಿಗೆ ಮಾಡಬೇಕಾಗಿತ್ತು. ಮಹಿಳೆಯರಿಗೆ ಇದು ರಾತ್ರಿ ಹಗಲಿನ ಕೆಲಸವಾಗಿತ್ತು. ಯಾ ನಮಪ್ಪನೋ ಸಾಬರು ಅವರನ್ನು ತಣ್ಣನೆಯ ಹೊತ್ತಿನಲ್ಲಿ ನೆನೆಯ ಬೇಕು, ಎಲ್ಲಿ ಹುಡುಕಿಕೊಂಡು ತಂದರೋ ರಾಗಿ ಮಷಿನ್ ಎಂದು ಮಷಿನ್ ಮನೆ ಸಾಬರನ್ನು ಬಾಯಿ ತಂಬಾ ಹೊಗಳಿದ್ದು ಹೊಗಳಿದ್ದೆ.

ಕಡುಗೋಲು ಕೈ ಬಾಚಿ ಹಾರೆಕೋಲು ಕುಳ ಜಿಗುಣೆ ಮಂತಾಗಿ ಅಣಿಸಿ ಅಣಸಾಕಿಸಲು ಅವುಗಳನ್ನು ಹೊತ್ತು ಕುಲುಮೆ ಮನೆಗೇ ಹೋಗಬೇಕಾಗಿತ್ತು. ಕಂಚುಮುಟ್ಟು ಇತ್ತಾಳೆ ಪಾರರ್ತೆ ಪಡಗು ಕಲಾಯಿ ಮಾಡಿ ತಳಕಟ್ಟಿ ತೂತು ಮುಚ್ಚಿ ಬೆಲೆ ಬಾಳುವ ಅವುಗಳನ್ನು ಮರುಬಳಕೆ ಮಾಡಬಹುದಾದ ರೀತಿಮಾರ್ಗ ಮಾಡಿಕೊಟ್ಟವರು ಕಲಾಯಿ ಸಾಬರು. ಅವರು ಇಲ್ದುದ್ದುರೆ ಕಂಚು ಮುಟ್ಟಿನ ಸಾಮಾನುಗಳೆಲ್ಲಾ ಹಾಳು ಬಿದ್ದು ಅಟ್ಟನೋ ತಿಪ್ಪೆನೋ ಸೇರಿರವು. ಅವುಗಳು ಗುಜುರಿಯಾಗಿ ಗುರುತಿಸಲ್ಪಟ್ಟು ಬೆಲೆ ಕಳೆದು ಕೊಳ್ಳುತಿದ್ದವು.

ಸಬ್ಬನು ಸಾವುರ ಕುರಿ ಹಾಳಿದ ಜನರು ಅನೇಕ ಪಶುಪಾಲನಾ ಸಮುದಾಯಗಳು. ಮುಖ್ಯವಾಗಿ ಕಾಯೋರರು ತಿನ್ನೋರು ಎಲ್ಲಾ ನಾವು ಕಾಣೋ ಹಾಗೆ ಮಾಂಸ ತಿನ್ನೋರು ಚರ್ಮ ಬಿಸಾಡೋರು. ಹಳ್ಳಿಗಳಲ್ಲಿ ಚರ್ಮೋದ್ಯಮ ಬೆಳಸಿ ಚರ್ಮದ ಮೌಲ್ಯ ವರ್ಧನೆಯನ್ನು ಪಶುಪಾಲನಾ ಸಮುದಾಯಗಳಿಗೆ ಕಲಿಸಿ ಹಣಗಳಿಕೆಯ ಅತ್ಯುನ್ನತ ಮಾರ್ಗ ತೋರಿಕೊಟ್ಟವರು ನಮ್ಮ ಸಾಬರಲ್ಲವೆ.

ಬಾನ ಮುಗುದು ವಾರಾದರೂವೆ ಚರ್ಮವನ್ನು ತೆಗೆದುಕೊಂಡು ಹೋಗಲು ಸಾಬರು ಬರಲಿಲ್ಲ ಅಂತಾ ಚರ್ಮಕ್ಕೆ ಉಪ್ಪು ಸರವಿ ಕೆಡದಾಗೆ ವಾಸನೆ ಬರದಾಗೆ ಇಟ್ಟುಕೊಂಡು ಅವರು ಬಂದಾಗ ಖರೀದಿಗೆ ಕೊಡೇವು.

ಕೊಟ್ಟಿಗೇಲಿ ಹೀನುಸುಳಿ ಹುಟ್ಟದರೆ ಕಣ್ಣಿ ಕಳಚಿ ಕಾಡಿಗೇನು ಹೊಡಿಯಿಲಿಲ್ಲ ಪುಗುಸಟ್ಟೇನೂ ಯಾರಿಗೂವೆ ಮಾರಲ್ಲ. ಅವುಗಳನ್ನು ತಗೊಳೋರು ಸುಳಿ ಸುದ್ದ ನೋಡೇ ಕೊಳ್ಳೋದು. ಹಾಗೆ ಕೊಟಿಗೇಲಿ ಉಳುದಾವು ಕೊಳ್ಳೋರು ಯಾರು?

ಕೋಡು ಮುರುಕ, ಮೋಟುಬಗ್ಗರಿ, ಕಾಲು ಮುರುಕಗಳನ್ನೆಲ್ಲಾ ಯಾಪಾರ ಮಾಡಿಸಿ ಕೊಟ್ಟೋರುನ್ನ ಮರಿಯೋದೆ. ಇದು ನ್ಯಾಯಕ್ಕೆ ಸಾಕಾಗೊ ಮಾತೆ. ಮಿಶ್ರ ತಳಿ ಹಸ ಗುಂಡು ಕರ ಈದರೆ ಕರ ಅದರ ಅವ್ವನು ಹಾಲು ಕಚ್ಚಲು ಬಿಡಲ್ಲ. ಅದು ಗೇಯೋಕೆ ಬರಲ್ಲ ಅಂದು ಮೇಲೆ ಅದು ಅದರ ಅವ್ವನು ಹಾಲು ಯಾಕೆ ಕುಡಿಬೇಕು ಅನ್ನೋ ಲೆಕ್ಕಾಚಾರ.

ಗೋಣಿ ಚೀಲಕ್ಕೆ ತಂಬಿ ಮಾರಾಟ ಮಾಡುತ್ತಾರೆ. ಲಾಳ ಕಟ್ಟೋದರಿಂದ ಕಾಲು ಸೋತ ಮರಿ ಕರಪಡಿ ಮಾಡಿ ಕಾಸಿ ಕರಗಿಸಿ ಪಶುಪಾಲನಾ ಸಮುದಾಯಗಳಿಗೆ ಮತ್ತು ಕೃಷಿಕರಿಗೆ ಕರೆನ್ಸಿ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಜನರ ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಸಬಲೀಕರಣಕ್ಕೆ ನೆರವಾದವರು ಜನಸಾಮಾನ್ಯರ ಸಂಪತ್ತಿನ ಉತ್ಪಾದನಾ ವಲಯಗಳ ಆಶ್ರಯ ದಾತರು ಸಾಬರು. ಮಾಂಸೋದ್ಯಮ, ಚರ್ಮೋದ್ಯಮ ಮತ್ತು ಗುಜರಿಗೆ ಮೌಲ್ಯ ವರ್ಧನೆ ಮಾಡಿದವರು. ಗ್ರಾಮೀಣ ಭಾರತದ ಅರ್ಥ ವ್ಯವಸ್ಥೆಗೆ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ.

ಹುಣಸೆ ಮರದ ಸಾಬರು ಬರಲಿಲ್ಲ, ಮಾಯಿನು ಮರದ ಸಾಬರು ಬರಲಿಲ್ಲ, ಚರ್ಮದ ಸಾಬರು ಬರಲಿಲ್ಲ, ಕಲಾಯಿ ಸಾಬರು ಬರಲಿಲ್ಲ, ಕಡ್ಡಿ ಇಡಗಲು ಸಾಬರು ಬರಲಿಲ್ಲ, ಮಷಿನ್ ಸಾಬರು ಬರಲಿಲ್ಲ, ಹುಣಸೆ ಹೆಣ್ಣಿನ ಸಾಬರು ಬರಲಿಲ್ಲ, ಹೊಂಗೆ ಬೀಜದ ಸಾಬರು ಬರಲಿಲ್ಲ ಎಂತೆಲ್ಲಾ ದಾರಿ ಕಾಯುತ್ತಿದ್ದ ಸಂದರ್ಭದಲ್ಲಿ ಇವತ್ತಿನ ಹಳ್ಳಿಗಳು ಕೊರೊನ ಕೋಮುವಾದಿಗಳು ಹಬ್ಬಿಸುವ ಸುಳ್ಳು ಸುದ್ದಿಗಳನ್ನು ನಂಬಿ ಬದುಕುವ ಪರಿಸ್ಥಿತಿಯನ್ನು ತಂದು ಕೊಂಡಿವೆಯಲ್ಲ? ಇವರು ಕೈ ಮೇಲೆ ಹಣ ಮಡಗಿ ಯಾಪಾರ ಮಾಡೋರು. ಬಿಳಿ ಚೀಟಿ ವ್ಯಾಪಾರ ವಹಿವಾಟು ನಡೆಸುವವರು ಇವರಲ್ಲ. ರೈತರ ಕಷ್ಟದ ಪರಿಸ್ಥಿತಿಯನ್ನೇ ಇಂತಹ ವ್ಯಾಪಾರದಾರರೂ ಅನುಭವಿಸುತಿದ್ದಾರೆ.

ಯಾತರ ಮಾತಿದು ರೀತಿಗೆ ಬಾರದು ಸೋತು ಸುಮ್ಮನೆ ನಡೆ ಮನೆಗೆ ಎಂದು ಹೇಳುವಂತಾಗಿದೆ. ಹೊನ್ನು ಬಿತ್ತಿ ಹೊನ್ನು ಬೆಳೆಯುವಂತಹ ಸಮುದಾಯದ ಸಂಬಂಧಗಳನ್ನು ಕಳೆದುಕೊಳ್ಳಲು ಹಳ್ಳಿಗಳು ಮುಂದಾಗಿವೆ. ತಿಳಿಯೋಣ, ಜಾತಿ ಸೂತಕ ಎಂಬೊ ಮಾತಿಲ್ಲ. ಹಾಗೆಯೇ, ಜಾತಿ ಮೂಲಕ ಕೊರೊನ ಹರಡುವುದಿಲ್ಲ.


ಉಜ್ಜಜ್ಜಿ ರಾಜಣ್ಣ ಅವರು ಹಿರಿಯ ಪತ್ರಕರ್ತರು, ಸಾಹಿತಿ‌ ಹಾಗೂ ಪ್ರಕಾಶಕರು. ಹಲವು ಹೋರಾಟಗಳಲ್ಲಿ ಮುಂಚೂಣಿ ಪಾತ್ರ ವಹಿಸಿದವರು.

ಹೋರಾಟ, ಪರಿಸರ, ಕಾಡು, ಶ್ರಮ ಸಂಸ್ಕೃತಿ ಜನರ ನಡುವೆ ಸದಾಕಾಲ ತಿರುಗಾಡುವ ಅವರು ಇದೇ ಮೊದಲ ಸಲ ಮೇಕೆ, ಕುರಿಗಾಹಿಗಳ ಸಾಂಸ್ಕೃತಿಕ ಹಿರಿಮೆ, ಗರಿಮೆಗಳ ಬಗ್ಗೆ ಆಗಾಗ ಬರೆಯುತ್ತಿದ್ದಾರೆ. ಅರೆ ಮಲೆನಾಡು, ಬಯಲು ಸೀಮೆ, ನೀಲಗಿರಿ ಸೆರಗಿನೊಂದಿಗೆ ಸಂಬಂಧ ಬೆಸೆದುಕೊಂಡಿರುವ ತುಮಕೂರು ಜಿಲ್ಲೆಯ ಸಾಂಸ್ಕೃತಿಕ, ಸಾಂಸ್ಥಿಕ ಸಂಬಂಧಗಳ ಬಗ್ಗೆ ಇವರ ಲೇಖನಗಳು ಗಮನ ಸೆಳೆಯುತ್ತವೆ. ಇವರ ಮೊ. 9 4 4 8 7 4 7 3 6 0

RELATED ARTICLES

2 COMMENTS

  1. ,ಈ ಗಳಿಗೆಯ ಅವಶ್ಯಕತೆಯ ಬರವಣಿಗೆ

  2. ಅದ್ಬುತ ಮನದಾಳದ ಮಾತುಗಳು
    ಸದಾ ಹಸನ್ಮುಖಿಯಾಗಿರಿ ಅಂತ ಹಾಶಿಸಬಲ್ಲೆ

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?