ದೇವರಹಳ್ಳಿ ಧನಂಜಯ
ಬೆಳಗೂ ಬೆೃಗು
ಸೂರ್ಯನ ಓಕಳಿಯಾಟ
ನಿಲ್ಲುವುದಿಲ್ಲ.
ಕಾಲ ದೇಶವ
ಮೀರಿದ ಎಚ್ಚರದ
ಧ್ವನಿ ನಿನ್ನದು.
ತರತಮದ
ಕತ್ತಲೆಯ ಆಟಕ್ಕೆ
ಉಳಿವು ಇಲ್ಲ
ಕಪಟ ಶಾಸ್ತ್ರ
ನಡೆಯದು ದಲಿತ
ಸೂರ್ಯನೆದುರು
ಒಳ-ಹೊರಗು
ಸಂಚಯ ವಾಗುತ್ತಿದೆ
ನೀ ಕೊಟ್ಟ ಸ್ಪೂರ್ತಿ
ಅಪಮಾನದ
ಕುಲುಮೆಯಲ್ಲಿ ಬೆಂದು
ಹದಗೊಂಡವ
ನೀ ಧಮನಿತ
ಬಂಧು ಬಾಬಾಸಾಹೇಬ
ನಮಿಪೆವಿಂದು
ಕ್ಷಣಕ್ಷಣವೂ
ಪಿತೂರಿ ನಡೆದಿದೆ
ನಿನ್ನ ನಾಶಕೆ
ಕ್ರಾಂತಿ ಚಿಲುಮೆ
ಅರಿವ ಸೂರ್ಯನಿಗೆ
ಸಾವೆಂಬುದಿಲ್ಲ
ನಿನ್ನ ಅದಮ್ಯ
ಶಕ್ತಿಗೆ ತಡೆಯಲ್ಲ
ಜಾತಿ ಸೂತಕ.
ಬೂದಿಯಾಯಿತು
ಪೊಳ್ಳು ಪುರಾಣ ನಿನ್ನ
ಪ್ರಖರತೆಗೆ
ಮನುವಾದವ
ಪುಡಿಗಟ್ಟಿ ಕಟ್ಟಿದೆ
ನವಭಾರತ
ಪ್ರಜಾಪ್ರಭುತ್ವ
ಸಮಾನತೆ ಭ್ರಾತೃತ್ವ
ಬಾಳಿನ ತತ್ವ
ಎಂದು ಸಾರಿದೆ
ನೀ ಕೊಟ್ಟ ಸಂವಿಧಾನ
ಬೆಳಕ ದೊಂದಿ
ನಡೆಯುತ್ತೇವೆ
ನಿನ್ನ ಅರಿವ ದೀಪ
ಹಿಡಿದು ಮುಂದೆ.
ಮೊಳಗುತ್ತಿದೆ
ಧಮ ಧಮನಿಯಲಿ
ಕ್ರಾಂತಿಯ ಗೀತೆ