Thursday, December 26, 2024
Google search engine
Homeಸಾಹಿತ್ಯ ಸಂವಾದಅಂತರಾಳಇದೆಲ್ಲಾ ನಿಮಗೆ ಹೇಗೆ ಗೊತ್ತಾಗುತ್ತೆ??

ಇದೆಲ್ಲಾ ನಿಮಗೆ ಹೇಗೆ ಗೊತ್ತಾಗುತ್ತೆ??

ಜಿ ಎನ್ ಮೋಹನ್


‘ಇದೆಲ್ಲಾ ನಿಮಗೆ ಹೇಗೆ ಗೊತ್ತಾಗುತ್ತೆ?’- ಅನ್ನೋ ಪ್ರಶ್ನೆ ನನಗೆ ಮೇಲಿಂದ ಮೇಲೆ ಎದುರಾಗಿದೆ.

ನನಗೆ ಮಾತ್ರ ಅಲ್ಲ ಯಾವುದೇ ಜರ್ನಲಿಸ್ಟ್ ಎಲ್ಲಿ, ಯಾರಿಗೇ ಸಿಗಲಿ ಬರುವ ಮೊತ್ತ ಮೊದಲ ಪ್ರಶ್ನೆಯೇ ‘ಈ ವಿಷಯ ನಿಮಗೆ ಹೇಗೆ ಗೊತ್ತಾಯ್ತು?’ ಅಂತ.

ಎಲ್ಲಾ ಪತ್ರಿಕೆ, ಚಾನಲ್ ಗಳು ಘಂಟಾಘೋಷವಾಗಿ ಕುಮಾರಸ್ವಾಮಿ ಅಧಿಕಾರವನ್ನು ಬಿ.ಎಸ್. ಯಡಿಯೂರಪ್ಪನವರಿಗೆ ಹಸ್ತಾಂತರಿಸುತ್ತಾರೆ ಅಂತ ಘೋಷಿಸುತ್ತಿದ್ದಾಗ ನಮ್ಮ ಸೀನಿಯರ್ ಕರೆಸ್ಟಾನ್ಡೆಂಟ್ ಸೋಮಶೇಖರ್ ಕವಚೂರು ‘ಖಂಡಿತಾ ಹಸ್ತಾಂತರ ಇಲ್ಲ’ ಅನ್ನುವ ಸುದ್ದಿ ಹೊತ್ತು ತಂದಿದ್ದರು.

ಈ ನ್ಯೂಸ್ ಬ್ರೇಕ್ ಮಾಡುವುದಕ್ಕೆ ಹಿಂದೆ ಮುಂದೆ ನೋಡ ಬೇಕಾದ ಸ್ಥಿತಿ ಇತ್ತು.

ಪರಿಸ್ಥಿತಿಯ ಮೇಲ್ಮೈ ಅವಲೋಕನ ಮಾಡಿದರೆ ಹೌದು ಖಂಡಿತಾ ಅಧಿಕಾರ ಹಸ್ತಾಂತರ ಸುಸೂತ್ರವಾಗಿ ಆಗುತ್ತೆ ಅನ್ನೋ ಸನ್ನಿವೇಶವೇ ಇತ್ತು.

ಈ ನ್ಯೂಸ್ ಪ್ರಸಾರ ಮಾಡಬಾರದು ಅಂತ ಬೆಂಗಳೂರು ಚೀಫ್, ಇದು ಹಂಡ್ರೆಡ್ ಪರ್ಸೆಂಟ್ ಕರೆಕ್ಟ್ ನ್ಯೂಸ್ ಅಂತ ಕವಚೂರು ವಾದಕ್ಕೆ ಬಿದ್ದರು. ನಾನು ಥರ್ಡ್ ಅಂಪೈರ್ ಥರಾ ಈ ನ್ಯೂಸ್ ಏರ್ ಮಾಡೋಣಾ ಅಂತ ತೀರ್ಮಾನ ಕೊಟ್ಟೆ.

ಪ್ರೈಮ್ ಬುಲೆಟಿನ್ ನಲ್ಲಿ ಸುದ್ದಿ ಪ್ರಸಾರ ಆಗಿದ್ದೇ ತಡ ಎಷ್ಟೋ ಪತ್ರಕರ್ತರು ನಕ್ಕುಬಿಟ್ಟರು.

‘ಸೋಮಶೇಖರ್ ಕವಚೂರು ಬಿಡಪ್ಪಾ ಜೋಬಿಂದ ತೆಗೆದು ಸುದ್ದಿ ಕೊಡ್ತಾನೆ..’ ಅಂದವರೂ ಇದ್ದರು. ಇನ್ನು ಕೆಲವರು ನೇರಾನೇರ ನನಗೇ ಫೋನ್ ಮಾಡಿ ‘ಏನು ಇಂಥ ರಿಸ್ಕ್ ತೆಗೊಂಡೆ’ ಅಂದ್ರು.

ಇನ್ನು ಕೆಲವರು ‘ನಾಳೆ ಸಂಜೆ ಅಷ್ಟೊತ್ತಿಗೆ ಈಟಿವಿ ಕಥೆ ಮುಗೀತು’ ಅಂತ ಷರಾ ಬರೆದುಬಿಟ್ಟರು.

ನನಗೆ ಒಂದು ದೊಡ್ಡ ವಿಶ್ವಾಸ ಇತ್ತು. ಅದು ಸೋಮಶೇಖರ್ ಕವಚೂರ್ ಕಾಂಟ್ಯಾಕ್ಟ್ಸ್ ಗಳದ್ದು.

ಮಾರನೆಯ ದಿನ ಸಂಜೆ ಐದು ಗಂಟೆಯ ಆಸುಪಾಸು. ಸೋಮಶೇಖರ್ ಫೋನ್ ಬಂತು. ‘ಸಾರ್, ಸಾಧ್ಯವಾದರೆ ಒಂದು ಸ್ಪೆಷಲ್ ಬುಲೆಟಿನ್ ಮಾಡೋಣ. ಐದು ನಿಮಿಷ ಸಿಕ್ಕರೂ ಸಾಕು’ ಅಂತ. ‘ಏನು ವಿಷಯ?’ ಅಂದೆ. ‘ಕುಮಾರಸ್ವಾಮಿ ಅಂಡ್ ಕಂಪನಿ ಈಗ ರಾಜಭವನಕ್ಕೆ ಬಸ್ ನಲ್ಲಿ ಬರ್ತಾರೆ. ಜಮೀರ್ ಟ್ರಾವೆಲ್ಸ್ ಬಸ್. ಬಂದವರೇ ರಾಜ್ಯಪಾಲರ ಕೈಗೆ ರಾಜಿನಾಮೆ ಕೊಡ್ತಾರೆ ಅಂತ ಕೆ.ಎನ್. ಸೋಮಯಾಜಿ ಥರಾ ಭವಿಷ್ಯ ಹೇಳ್ತಾ ಇದ್ರು.

ಆಗಲೂ ನಾನು ‘ವಾಟ್ ಈಸ್ ಯುವರ್ ಸೋರ್ಸ್?’ ಅಂತ ಕೇಳಲಿಲ್ಲ. ಗಾಢನಂಬುಗೆಯ ಮೇಲೆ, ಪ್ರಸಾರವಾಗುತ್ತಿದ್ದ ಧಾರವಾಹಿಯನ್ನು ಅರ್ಧಕ್ಕೇ ನಿಲ್ಲಿಸಿ ಬುಲೆಟಿನ್ ಗೆ ಸಜ್ಜಾಗೇ ಬಿಟ್ಟೆವು.

ಸೋಮಶೇಖರ್ ಹೇಳಿದ್ದಂತೆ ನಡೆದುಹೋಯಿತು.

ಬಹುಶಃ ಅಂದು, ಆ ನಂತರವೂ ಸೋಮಶೇಖರ್ ಮತ್ತು ಅವರಂತಹ ರಿಪೋರ್ಟರ್ಸ್ ಗಳು ಇಂತಹ ಬೆಚ್ಚಿಬೀಳುವ ಸುದ್ದಿಗಳನ್ನು ನೀಡುತ್ತಲೇ ಇದ್ದಾರೆ. ‘ವಾಟ್ ಈಸ್ ಯುವರ್ ಸೋರ್ಸ್’ ಅಂತ ಕೇಳುವ ತಪ್ಪು ಬಹುಶಃ ಅವರ ಸೀನಿಯರ್ ಗಳು ಖಂಡಿತಾ ಮಾಡಿರಲಿಕ್ಕಿಲ್ಲ.

ಸೀನಿಯರ್ ಗಳ ಮಾತು ಬಿಡಿ, ಕೋರ್ಟ್ ಗಳೂ ಸಹಾ ‘ವಾಟ್ ಈಸ್ ಯುವರ್ ಸೋರ್ಸ್’ ಎನ್ನುವ ಪ್ರಶ್ನೆ ಕೇಳುವುದಿಲ್ಲ. ಏಕೆಂದರೆ ಮಾಹಿತಿಯ ಮೂಲ ಮೀನಿನ ಹೆಜ್ಜೆಯಂತೆ, ಸುದ್ದಿಮೂಲವನ್ನು ಬಿಟ್ಟು ಕೊಡದಂತೆ ಕಾನೂನೇ ಬೆಂಗಾವಲಿಗೆ ನಿಂತಿದೆ.

ಆದರೆ ‘ವಾಟ್ ಈಸ್ ಯುವರ್ ಸೋರ್ಸ್’ ಅಂತ ಗೊತ್ತು ಮಾಡಿಕೊಳ್ಳುವ ಹುಚ್ಚುತನಕ್ಕೆ ಬಿದ್ದವರ ಸಂಖ್ಯೆ ಕಡಿಮೆಯೇನಲ್ಲ. ಸುದ್ದಿಮೂಲವನ್ನು ನಾನು ಬಯಲಿಗಿಡುವುದಿಲ್ಲ ಎಂದು ಜಿದ್ದಿಗೆ ಬಿದ್ದ ಪತ್ರಕರ್ತರ ಸಂಖ್ಯೆಯೂ ಅಷ್ಟೇ ದೊಡ್ಡದಿದೆ.

ಪತ್ರಿಕೋದ್ಯಮದ ಕ್ಲಾಸ್ ರೂಮ್ ನಲ್ಲಿ ಮೊದಲು ಹೇಳಿಕೊಡುವ ಪಾಠವೇ ನ್ಯೂಸ್ ಸೋರ್ಸ್ ಗಳ ಬಗ್ಗೆ. ಹೇಗೆ ನ್ಯೂಸ್ ಸೋರ್ಸ್ ಗಳನ್ನು ಬೆಳೆಸಿಕೊಳ್ಳಬೇಕು, ಯಾರು ನ್ಯೂಸ್ ಸೋರ್ಸ್ ಆಗುತ್ತಾರೆ, ಅವರ ಜೊತೆ ಅಗತ್ಯವಿಲ್ಲದಿದ್ದರೂ ಹೇಗೆ ನಿರಂತರ ಟಚ್ ನಲ್ಲಿರಬೇಕು. ಹೊಸ ಹೊಸಬರನ್ನ ಹೇಗೆ ನ್ಯೂಸ್ ಸೋರ್ಸ್ ಆಗಿ ಗುರುತಿಸಿ ನಮ್ಮ ಕಾಂಟ್ಯಾಕ್ಟ್ ಬೆಳೆಸಿಕೊಳ್ಳುತ್ತಲೇ ಇರಬೇಕು, ಹೀಗೆ…

ವಿಧಾನಸೌಧದ ನ್ಯೂಸ್ ಹೊರಗೆ ಎಳೆಯಬೇಕಾದರೆ ಬರೀ ಸಿ.ಎಂ ಕಾಂಟ್ಯಾಕ್ಟ್ ಇದ್ದರೆ ಮಾತ್ರ ಸಾಲದು, ಬಾಗಿಲು ಕಾಯುವ ಜವಾನನ ಕಾಂಟ್ಯಾಕ್ಟ್ ಕೂಡಾ ಬೇಕು.

ಬೆಂಗಳೂರು ವಿಶ್ವವಿದ್ಯಾಲಯದ ಮಾಸ್ ಕಮ್ಯುನಿಕೇಷನ್ ವಿಭಾಗದಲ್ಲಿ ಮಾತನಾಡುವ ಅವಕಾಶ ಬಂತು. ಅಲ್ಲಿದ್ದ ಅರಳುಗಣ್ಣಿನ, ನಾಳೆ ಪತ್ರಕರ್ತರಾಗಲಿರುವ ಎಲ್ಲರದ್ದೂ ಒಂದೇ ಕುತೂಹಲ. ಅಲ್ಲಾ ನಿಮಗೆ ಎಲ್ಲಾ ವಿಷಯ ಹೇಗೆ ಗೊತ್ತಾಗುತ್ತೆ ಅಂತ.

ನಾನು ಆಗ ಅವರನ್ನು ನಿಮ್ಮ ಬಳಿ ಎಷ್ಟು ಫೋನ್ ನಂಬರ್ ಗಳಿವೆ ಅನ್ನೋ ಪ್ರಶ್ನೆ ಕೇಳಬೇಕಾಗಿ ಬಂತು. 20, 50, 200ರವರೆಗೆ ಬಂದ ಸಂಖ್ಯೆ ಅಲ್ಲಿಗೇ ನಿಂತಿತು.

ಮತ್ತೆ ಕೇಳಿದೆ- ಈ ನಂಬರ್ ಗಳಲ್ಲಿ ನಿಮ್ಮ ಅಣ್ಣ, ತಂಗಿ, ಮಾವ, ಅತ್ತೆ, ಕ್ಲಾಸ್ ಮೇಟ್ ಹೀಗೆ ಎಲ್ಲರ ನಂಬರ್ ತೆಗೆದು ಎಷ್ಟು ನಂಬರ್ ಉಳಿಯಿತು ಹೇಳಿ ಅಂತ.

ನಾನು ಕೇಳಿದ್ದು ಏನು ಅಂತ ಅವರಿಗೆ ಗೊತ್ತಾಯಿತು. ಹೌದು ಸಾರ್ ಇನ್ಮೇಲೆ ಕಾಂಟ್ಯಾಕ್ಟ್ ಬೆಳೆಸಿಕೊಳ್ತೇವೆ. ಮುಂದಿನ ಸಲ ನೀವು ಬರುವ ವೇಳೆಗೆ ನಮ್ಮ ಫೋನ್ ಡೈರಿಯಲ್ಲಿ ಹೊಸ ನಂಬರ್ ಗಳಿಗೆ ಜಾಗ ಇಲ್ಲಾ ಅನ್ನುವ ಹಾಗೇ ಮಾಡಿರ್ತೀವಿ ಅಂತ.

ಒಬ್ಬ ಪತ್ರಕರ್ತ ರಾಜಕಾರಣಿಯ ಜೊತೆಗೂ ಕಾಂಟ್ಯಾಕ್ಟ್ ಹೊಂದಿರುತ್ತಾನೆ. ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುವವನ ಜೊತೆಗೂ ಟಚ್ ನಲ್ಲಿರುತ್ತಾನೆ.

ವಿಜಯ್ ಮಲ್ಯ ಕೊಡೋ ಪಾರ್ಟಿಯಲ್ಲೂ ಕಾಣಿಸಿಕೊಳ್ಳುತ್ತಾನೆ. ದೀಪಿಕಾ ಪಡುಕೋಣೆ ‘ಬ್ರೇಕ್ ಕೆ ಬಾದ್’ ಪ್ರೀಮಿಯರ್ ನಲ್ಲೂ ಕಾಣಿಸಿಕೊಳ್ತಾನೆ.

ಕತ್ತಿ ಮಚ್ಚು ಮಸೆದು ನಾಳೆ ನಾಲ್ವರ ತಲೆ ಎಗರಿಸ್ತೀನಿ ಅನ್ನೋವರೂ ಗೊತ್ತಿರ್ತಾರೆ. ಬೇಡಪ್ಪಾ ಈ ಎಲ್ಲಾ ಸಹವಾಸ ಅಂತ ಶರಣಾಗಿರುವವರ ಜೊತೇನೂ ಇರ್ತಾರೆ.

ನಿತ್ಯಾನಂದ ಆಶ್ರಮದ ಫೋನ್ ನಂಬರ್ರೂ ಅವರ ಬಳಿ ಇರುತ್ತೆ. ರಜನೀಕಾಂತ್ ಫ್ಲಾಟ್ ನಂಬರ್ರೂ ಗೊತ್ತಿರುತ್ತೆ. ಚಿಕ್ಕಮಗಳೂರು ನಕ್ಸಲೈಟ್ ಗಳ ಕಾಂಟ್ಯಾಕ್ಟ್ ಇರುತ್ತೆ.

ಏರ್ ಪೋರ್ಟ್ ಅಧಿಕಾರಿ ವಾಸುದೇವ ರಾವ್ ಕೂಡಾ ಗೊತ್ತಿರಬೇಕು, ಬಜರಂಗದಳದ ಪಬ್ ಅಟ್ಯಾಕರ್ಸ್ ಗೊತ್ತಿರಬೇಕು, ರವಿ ಪೂಜಾರಿ ಗ್ಯಾಂಗ್ ಗೊತ್ತಿರುತ್ತೆ, ರೆವೆನ್ಯೂ ಮಿನಿಸ್ಟರ್ರೂ ಗೊತ್ತಿರುತ್ತಾರೆ, ಸ್ಟ್ರೈಕ್ ಗೆ ಸಜ್ಜಾಗಿರೋ ವರ್ಕರ್ಸ್ ಯೂನಿಯನ್ ಲೀಡರ್ರು ಗೊತ್ತು, ನೈಸ್ ರೋಡ್ ಮೇಲೆ ಕುಳಿತು ಪ್ರೊಟೆಸ್ಟ್ ಮಾಡೋ ರೈತನೂ ಗೊತ್ತು.

ಹಾಗಿರುವಾಗ ರವಿ ಪೂಜಾರಿ ಗ್ಯಾಂಗ್ ಗುಂಡು ಹಾರಿಸಿದ್ದರ ಹಿಂದೆ ನೀನಿಲ್ಲ ಅಂತ ಏನು ಗ್ಯಾರಂಟಿ ಅಂತ ಅರೆಸ್ಟ್ ಮಾಡಿದ್ರೆ, ನಕ್ಸಲೈಟ್ ಗಳ ಚಲವಲನದ ಸುಳಿವು ಕೊಡಬೇಕಾದ್ದು ನಿನ್ನ ಜವಾಬ್ದಾರಿ ಅಂದ್ರೆ, ನೈಸ್ ರೋಡ್ ನಲ್ಲಿ ರೈತರು ಪ್ರೊಟೆಸ್ಟ್ ಮಾಡೋ ವಿಚಾರ ಯಾಕೆ ತಿಳಿಸಲಿಲ್ಲ ಅಂದ್ರೆ ಅವರಿಗೆ ಜರ್ನಲಿಸಂ ಎಬಿಸಿಡಿ ಗೊತ್ತಿಲ್ಲ ಅಂತ ಅರ್ಥ.

ಪಬ್ ಅಟ್ಯಾಕ್ ಮಾಡಿದ ಸುದ್ದಿ ನಮಗೆ ಯಾಕೆ ತಿಳಿಸಲಿಲ್ಲ ಅಂತ ಪತ್ರಕರ್ತರ ಮೇಲೆ ಏರಿ ಹೋದರೆ ಆತ ಜರ್ನಲಿಸ್ಟ್ ಕೆಲಸ ಮಾಡಬೇಕಾ, ಪೊಲೀಸ್ ಕೆಲಸ ಮಾಡಬೇಕಾ ಅನ್ನೋ ಪ್ರಶ್ನೆ ಬರುತ್ತೆ.

ನಂಜುಂಡಸ್ವಾಮಿ ರೈತ ಸಂಘದವರು ಕೆಎಫ್ ಸಿ ಮೇಲೆ ದಾಳಿ ಮಾಡಿದಾಗ ನೀವು ಹೇಗೆ ಶೂಟ್ ಮಾಡಿದ್ರಿ ಅಂತ ಎನ್ ಡಿಟಿವಿ ನೂಪುರ್ ಬಸುನ ಕೇಳಿದರೆ ಕ್ಯಾಮೆರಾಗೂ, ಪೊಲೀಸ್ ಲಾಠಿಗೂ ಇರೋ ವ್ಯತ್ಯಾಸಾನೇ ಅದೂ ಅಂತ ಹೇಳಿಯಾರು.

ಅಟ್ಯಾಕ್ ಮಾಡೋವಾಗ ನೀವು ಮಾತ್ರ ಯಾಕೆ ಅಲ್ಲಿದ್ರಿ? ನಿಮಗೆ ಮಾತ್ರ ಅದು ಹೇಗೆ ಗೊತ್ತಾಯ್ತು? ನೀವೂ, ಅವರೂ ಫೋನ್ ಮಾಡಿಕೊಂಡಿದ್ದೀರಿ ಅಂದ್ರೆ, ಹೌದು ಅದಕ್ಕೇ ನಾವು ಜರ್ನಲಿಸ್ಟ್ ಗಳು ಅಂತ ಹೇಳೋ ಪಡೆಯೂ ಇದೆ.

ಮುತ್ತತ್ತಿ ಫಾರೆಸ್ಟ್ ನಲ್ಲಿ ರಾತ್ರೋರಾತ್ರಿ ಸಯನೈಡ್ ನುಂಗಿ ಉಗ್ರರು ಪ್ರಾಣ ಬಿಟ್ರು… ಗೊತ್ತಾಗಿದ್ದು ಪ್ರಜಾವಾಣಿಯ ಮಂಡ್ಯ ರಿಪೋರ್ಟರ್ ಆಗಿದ್ದ ಕುಸುಮಾ ಶಾನ್ ಭಾಗ್ ಗೆ.

ಆ ಅಧೋರಾತ್ರಿಯಲ್ಲಿ ಟ್ಯಾಕ್ಸಿ ಹಿಡಿದು ಕಾಡಿಗೆ ನುಗ್ಗಿದರು. ನಿಮಗೇ ಹೇಗೆ ಗೊತ್ತಾಯ್ತು? ನಿಮ್ಮ ಮೊಬೈಲ್ ಗೆ ಫೋನ್ ಮಾಡಿದವರು ಯಾರು? ಈ ರಾತ್ರಿಯಲ್ಲಿ ಬರಬೇಕು ಅಂದ್ರೆ ನಿಮಗೇನು ಅಷ್ಟೊಂದು ಇಂಟರೆಸ್ಟು ಅಂತ ಪ್ರಶ್ನೆ ಉದುರಿಸಿ ‘ನೀನೇ ಯಾಕೆ ಎಲ್ ಟಿಟಿಇ ಆಗಿರಬಾರದು’ ಅನ್ನೋ ಥರಾ ನೋಡಿದ್ರೆ ಪಾಪ ‘ಮುಕ್ತಪತ್ರಿಕೆ ಅನ್ನೋದು ಸವಲತ್ತಲ್ಲ, ಯಾವುದೇ ಸಮಾಜದ ಅನಿವಾರ್ಯ ಅಂಗ’ ಅಂದ ಥಾಮಸ್ ಜೆಫರ್ಸನ್ ಸಹಾ ನಕ್ಕಾರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?