ತುಮಕೂರ್ ಲೈವ್

ಈಜಲು ಹೋದ ಇಬ್ಬರು ಬಾಲಕರು ನೀರು ಪಾಲು

ಶಿರಾ: ಈಜಲು ಹೋದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಶಿರಾ ತಾಲೂಕು ಪಟ್ಟನಾಯಕನಹಳ್ಳಿಯಲ್ಲಿ ನಡೆದಿದೆ. ಮೃತರನ್ನು 9 ವರ್ಷದ ಮಾರುತಿ ಮತ್ತು 11 ವರ್ಷದ ಸಲ್ಮಾನ್ ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ ಪಟ್ಟನಾಯಕನಹಳ್ಳಿಯ ಸಿಡಿಯಜ್ಜನಪಾಳ್ಯದಲ್ಲಿ ಶಾಲೆ ಬಿಟ್ಟ ಕೂಡಲೇ ಆ ಮಕ್ಕಳು ಆಟವಾಡುತ್ತ ಗ್ರಾಮದ ಸಮೀಪವೇ ಇರುವ ಕಟ್ಟೆಗೆ ಹೋಗಿದ್ದಾರೆ. ನೀರಿನಲ್ಲಿ ಈಜಲು ಹೋದಾಗ ಈಜು ಬಾರದೆ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ಎರಡು ಕುಟುಂಬಗಳ ಪೋಷಕರು ಶನಿವಾರ ಸಂಜೆಯವರೆಗೂ ಸುತ್ತಮುತ್ತಲ ಹೊಲಗದ್ದೆಗಳಲ್ಲಿ ಹುಡುಕಿದ್ದಾರೆ. ಎಲ್ಲಿಯೂ ಕಾಣದಿದ್ದಾಗ ಕಂಗಾಲಾಗಿದ್ದಾರೆ. ಕತ್ತಲು ಹೆಚ್ಚಿದಂತೆ ಏನೂ ಮಾಡಲು ತೋಚದೆ ಮನೆಗೆ ಮರಳಿದ್ದಾರೆ.
ಭಾನುವಾರ ಮುಂಜಾನೆ ಎದ್ದು ಕಟ್ಟೆಯ ಬಳಿ ನೋಡಿದಾಗ ಇಬ್ಬರು ಬಾಲಕರ ಶವಗಳು ತೇಲುತ್ತಿದ್ದುದು ಕಂಡು ಬಂದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದ ನೂರಾರು ಮಂದಿ ಕಟ್ಟೆಯ ಬಳಿಗೆ ಬಂದು ಶವಗಳನ್ನು ವೀಕ್ಷಿಸಿದರು.

ಮಕ್ಕಳ ತಂದೆ-ತಾಯಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಮಹಿಳೆಯರು ಅವರನ್ನು ಸಾಂತ್ವನಗೊಳಿಸುತ್ತಾ ತಾವು ಕಣ್ಣೀರು ಹಾಕತೊಡಗಿದರು. ಎಲ್ಲರೂ ದುಃಖದ ಮಡುವಿನಲ್ಲಿ ಮುಳುಗಿದ್ದರು.

Comment here