ಜನಮನ

ಈತ ಬಿಕ್ಷೆ ಬೇಡಿ ಏನ್ ಕೆಲಸ ಮಾಡ್ತಿದ್ದಾರೆ ನೋಡಿ…

https://youtu.be/Me7PyFkyHu4

ಕೋಳಾಲ ಎಂ.ಎನ್.ಚಿನ್ಮಯ್


ಹೊರಗೆ ಸುಡುಬಿಸಿಲು, ಅಲ್ಲಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕ ಕಾಡು, ಕಿಲೋಮೀಟರ್ ಗಳವರೆಗೂ ಕಾಣಸಿಗದ ನೀರು, ಎಲ್ಲಿಂದಲೋ ಹಿಡಿದು ತಂದು ಬಿಟ್ಟ ಕೋತಿಗಳು, ಅಲ್ಲೇ ಹುಟ್ಟಿ ಬೆಳೆದ ಕೋತಿಗಳು ಹಸಿವು ಮತ್ತು ನೀರು ಸಿಗದೇ ಪಿಳಿ ಪಿಳಿ ಕಣ್ಣು ಬಿಟ್ಟು ತಡವರಿಸುವ ಈ ಎಲ್ಲಾ ಚಿತ್ರಣ ಕಾಣಸಿಗುವುದು ತುಮಕೂರಿನ ದೇವರಾಯನದುರ್ಗದ ಅರಣ್ಯ ಪ್ರದೇಶದ ರಸ್ತೆಯಲ್ಲಿ.

ಹೌದು ಇಂತಹ ಪರಿಸ್ಥಿತಿ ಈ ಋತುಮಾನದಲ್ಲಿ ಮೂಕ ಪ್ರಾಣಿಗಳ ಪಾಲಿಗೆ ನರಕ ಸದೃಶ.
ಹೀಗೆ ನರಕ ಯಾತನೆ ಅನುಭವಿಸುವ ಈ ಕೋತಿಗಳ ಪಾಲಿಗೆ ಸ್ಪಂದನೆ ನೀಡಿದ್ದು, ತುಮಕೂರಿನ ದಿಬ್ಬೂರಿನ ಸಮೀಪದ ಹೊಸಹಳ್ಳಿಯ ನಟರಾಜ್ (ಚಿಟ್ಟೆ ) ಎಂಬುವವರು.
ಚಿಟ್ಟೆ ಎಂದೇ ಪರಿಚಿತರಾದ ನಟರಾಜು ಅವರಿಗೆ ಅದೇಕೆ ಈ ದೇವರಾಯನದುರ್ಗ ದ ಕೋತಿಗಳಿಗೆ ನೀರು ಆಹಾರ ನೀಡಬೇಕು ಅನ್ನಿಸಿತೋ, ಅದ್ಯಾವ ಸನ್ನಿವೇಶ ಇಂತಹ ಉತ್ತಮವಾದ ಕಾರ್ಯ ಮಾಡಬೇಕು ಎಂದು ಪ್ರಚೋದಿಸಿತೋ ಅದೇನೇ ಇರಲಿ ಇಂತಹ ಕಾರ್ಯಕ್ಕೆ ನಮ್ಮದೊಂದು ಶ್ಲಾಘನೆ ಇರಲಿ.

ವೃತ್ತಿಯಲ್ಲಿ ಬಹುಮುಖ ಪ್ರತಿಭೆ ಇವರು. ಆದರೂ
ಪ್ರತಿನಿತ್ಯ ತುಮಕೂರಿನ ತರಕಾರಿ ಮಾರುಕಟ್ಟೆ ಗೆ ಚೀಲ ತೆಗೆದುಕೊಂಡು ಹೋಗಿ ಆ ಕೋತಿಗಳ ಪರವಾಗಿ ಭಿಕ್ಷೆ ಬೇಡಿ ಕಡಿಮೆ ಬೆಲೆಯ ಸೌತೆ ಕಾಯಿ, ಬೀನ್ಸ್, ಕೋಸು ಇತ್ಯಾದಿ ಯನ್ನು ಕಾಡಿ ಬೇಡಿ ಪಡೆದು, ಗ್ರಾಹಕರಿಂದ ತಿರಸ್ಕರಿದ ತರಕಾರಿಗಳನ್ನು, ಹೆಚ್ಚು ಮಾಗಿದ ಬಾಳೆ ಹಣ್ಣು, ಹಂಪಲು ಗಳನ್ನು ಪಡೆದು, ತನ್ನ ಬೈಕ್ ನಲ್ಲಿ ತೆಗೆದು ಕೊಂಡು, ವಾಟರ್ ಕ್ಯಾನ್ ನಲ್ಲಿ ನೀರು ತುಂಬಿಸಿ ಕೊಂಡು ಹೊರಟು ದೇವರಾಯನ ದುರ್ಗದ ರಸ್ತೆಯಲ್ಲಿ ಹೊರಡುವ ನಟರಾಜ್ ಬಂದು ಸೇರುವುದು ನಾಮದ ಚಿಲುಮೆ ಭಾಗದ ರಸ್ತೆಯ ಅರಣ್ಯ ಪ್ರದೇಶಕ್ಕೆ.

ಅಲ್ಲಿ ಬಂದು ತಂದಂತಹ ಆ ತರಕಾರಿ, ಹಣ್ಣು ಹಂಪಲು ಗಳನ್ನು ಹಸಿವು, ದಣಿವು ಗಳಿಂದ ತತ್ತರಿಸಿದ ಮಂಗಗಳಿಗೆ ತನ್ನ ಕೈ ಯಾರ ನೀಡಿಕೊಂಡು ಮುಂದೆ ಮುಂದೆ ಹೋಗುವ ಈ ನಟರಾಜ್ ನೋಡುತ್ತಿದ್ದರೆ ಅವರ ಮುಖದಲ್ಲಿ ಏನೋ ಸಾಧಿಸಿದ ಸಾರ್ಥಕತೆ, ಸಮಾಧಾನ.

ಈ ಕಾರ್ಯ ಬೇಸಿಗೆ ಪ್ರಾರಂಭ ಆದಾಗಿನಿಂದ ಪ್ರಾರಂಭವಾಗಿ ಮುಂದುವರಿಯುತ್ತಿದೆ. ಈ ಸಮಾಜಮುಖಿ ಕಾರ್ಯಕ್ಕೆ ಈಗೀಗ ಹಲವಾರು ಗೆಳೆಯರು, ಹೃದಯವಂತರು ಕೈ ಜೋಡಿಸುತ್ತಿದ್ದಾರೆ. ಅವರಿಗೂ ಆ ದೇವರು ಒಳ್ಳೆಯದು ಮಾಡಲಿ.

ತುಮಕೂರಿನ ತರಕಾರಿ ಮಾರುಕಟ್ಟೆ ಯ ಹಲವು ಮಾಲೀಕರು, ಸಿಬ್ಬಂದಿ ಯ ಸಹಕಾರ ಈ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು. ಈ ಶ್ಲಾಘನೀಯ ಕಾರ್ಯದ ಯಾತ್ರೆ ಕೈ ಗೊಂಡ ನಟರಾಜು (ಚಿಟ್ಟೆ )ಅವರಿಗೆ ಇನ್ನೂ ಹೆಚ್ಚಿನ ಸಹಾಯ ಮಾಡುವ ಮನಸ್ಸು ಮತ್ತು ಶಕ್ತಿಯನ್ನು ಆ ಭಗವಂತ ಕರುಣಿಸಲಿ.

ಇಂತಹ ಸಮಾಜ ಮುಖಿ ಕೆಲಸಕ್ಕೆ ಇನ್ನೂ ಹೆಚ್ಚಿನ ಸ್ನೇಹಿತರು ಕೈಜೋಡಿಸಲಿ. ಆ ಪ್ರಾಣಿ ಸಂಕುಲದ ತೃಪ್ತಿ ದಾಯಕ ಆಶೀರ್ವಾದ ನಟರಾಜ್ ಅವರನ್ನು ಕಾಪಾಡಲಿ.


ಲೇಖಕರು ತುಮಕೂರಿನಲ್ಲಿ ವಕೀಲರು

Comment here