ಲಕ್ಷ್ಮೀಕಾಂತರಾಜು ಎಂಜಿ.9844777110
ರಾಜ್ಯ ಸರ್ಕಾರದಲ್ಲಿ ಸರ್ಕಾರಿ ಹುದ್ದೆಗಳಿಗೆ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ,ಪರೀಕ್ಷೆ ಇಲ್ಲದೇ ಅರ್ಹತಾ ಪರೀಕ್ಷೆಯ ಅಂಕಗಳ ಮೇರೆ ನೇಮಕ ಮಾಡಿಕೊಳ್ಳುತ್ತಿರುವುದು ಗ್ರಾಮ ಲೆಕ್ಕಿಗರ ಹುದ್ದೆ ಮಾತ್ರ.
ಹೌದು. ಕಂದಾಯ ಇಲಾಖೆಯು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನ ಅರ್ಹತಾ ಪರೀಕ್ಷೆಯಾದ ಪಿಯುಸಿ ಅಂಕಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಪ್ರಸ್ತುತವಾಗಿ ಉಡುಪಿ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ. ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿಯೂ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನ ಕಂದಾಯ ಇಲಾಖೆ ಆಗಾಗ ತುಂಬಿಕೊಳ್ಳುತ್ತಿದೆ. ಆದರೆ, ಈ ಹುದ್ದೆಗಳಿಗೆ ಅರ್ಹತಾ ಪರೀಕ್ಷೆಯಾದ ಪಿಯುಸಿ ಅಂಕಗಳ ಆಧಾರದ ಮೇರೆಗೆ ನೇಮಕಮಾಡಿಕೊಳ್ಳಲಾಗುತ್ತಿದೆ.
ಗ್ರಾಮ ಲೆಕ್ಕಿಗರ ಹುದ್ದೆಗೆ ಸಮಾನವಾದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯೂ ಸೇರಿದಂತೆ ಎಲ್ಲ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ,ಪೊಲೀಸ್ ಇಲಾಖೆ, ಹಾಗೂ ಇತರೆ ಇಲಾಖೆಯವರು ಪರೀಕ್ಷೆ ನಡೆಸಿ ಗಳಿಸಿದ ಅಂಕಗಳ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿರುವಾಗ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಮಾತ್ರ ಅರ್ಹತಾ ಪರೀಕ್ಷೆಯ ಅಂಕಗಳನ್ನ ಆಧರಿಸಿ ನೇಮಕ ಮಾಡಿಕೊಳ್ಳುತ್ತಿರುವುದು ಅವೈಜ್ಞಾನಿಕವಾಗಿದೆ .
ಪಿಯುಸಿಯಲ್ಲಿ ಗರಿಷ್ಠ ಅಂಕಗಳನ್ನ ಪಡೆದುಕೊಂಡವರು ಬಹುತೇಕರು ಆಯ್ಕೆಯಾಗುತ್ತಿದ್ದಾರೆ. ಅದರಲ್ಲೂ ಕಲಾ ವಿಭಾಗದವರು ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಯಾಗುತ್ತಿದ್ದು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪಿಯು ಅಭ್ಯರ್ಥಿಗಳು ಆಯ್ಕೆಯಾಗುತ್ತಿಲ್ಲ. ಪಿಯುಸಿಯ ಮೂರು ವಿಭಾಗಗಳಾದ ವಿಜ್ಞಾನ ,ಕಲಾ ವಿಭಾಗ,ವಾಣಿಜ್ಯ ವಿಷಯಗಳನ್ನ ಸಮಾನವಾಗಿ ನಿಗಧಿ ಪಡಿಸಿರುವ ಕಾರಣ ಕಲಾ ವಿಭಾಗದವರು ಹೆಚ್ಚು ಅಂಕಗಳನ್ನ ಪಡೆದು ಆಯ್ಕೆಯಾಗುತ್ತಿದ್ದಾರೆ. ಕಬ್ಬಿಣದ ಕಡಲೆಯಾಗಿರುವ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದವರು ಕಲಾ ವಿಭಾಗವರ ಅಂಕಗಳಷ್ಟು ತಗೆಯಲಾದೀತೆ? ಇದೊಂದು ರೀತಿಯಲ್ಲಿ ಸಂಪೂರ್ಣ ಅವೈಜ್ಞಾನಿಕ ಕ್ರಮವಾಗಿದೆ ಎಂದು ದೂರುತ್ತಿದ್ದಾರೆ ಗ್ರಾಮ ಲೆಕ್ಕಿಗರ ಹುದ್ದೆ ಬಯಸಿರುವ ಅಭ್ಯರ್ಥಿಗಳು
ಪಿಯುಸಿಯ ಈ ಮೂರು ವಿಭಾಗಗಳಿಗೆ ಆಗಿರುವ ಅಸಮತೋಲನವನ್ನ ಸರಿಪಡಿಸಿ ಎಂದು ಅನೇಕ ಮನವಿಗಳನ್ನ ಕಂದಾಯ ಮಂತ್ರಿಗಳು ಸೇರಿದಂತೆ ಇಲಾಖೆತ ಪ್ರಧಾನ ಕಾರ್ಯದರ್ಶಿಗಳಿಗೂ ಮನವಿ ಸಲ್ಲಿಸಿದರೂ ಪ್ರಯೋಜನ ವಾಗಿಲ್ಲವೆಂದು ಈ ಸಂಬಂಧ ಹೋರಾಟ ಮಾಡಿರುವ ಅಭ್ಯರ್ಥಿಗಳು ಬೇಸರಿಸಿಕೊಳ್ಳುತ್ತಿದ್ದಾರೆ.
ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ದ್ವಿತೀಯ ಪಿಯುಸಿಯನ್ನ ಕೇವಲ ಅರ್ಹತಾ ಪರೀಕ್ಷೆಯನ್ನಾಗಿ ಪರಿಗಣಿಸಿ ಅರ್ಜಿ ಕರೆದು ಪ್ರವೇಶ ಪರೀಕ್ಷೆ ನಡೆಸಿ ಅದರಲ್ಲಿ ಗಳಿಸಿದ ಅಂಕಗಳ ಆಧಾರದ ಮೇರೆಗೆ ಆಯ್ಕೆ ಮಾಡಿಕೊಂಡರೆ ಪಿಯುಸಿ ಯ ಎಲ್ಲಾ ವಿಭಾಗದವರಿಗೂ ಸಮಾನ ಅವಕಾಶ ಮಾಡಿಕೊಟ್ಟಂತಾಗುತ್ತದೆ.ಜೊತೆಗೆ, ಸಾಮಾನ್ಯ ಜ್ಞಾನ ಹಾಗೂ ಪ್ರಚಲಿತ ಘಟನೆಗಳ ಅರಿವು ಇರುವವರಿಗೆ ಅವಕಾಶ ದೊರೆದಂತಾಗುತ್ತದೆ.
ಪಿಯುಸಿ ಯ ಎಲ್ಲ ವಿಭಾಗಗಳನ್ನ ಸಮಾನವಾಗಿ ಸ್ವೀಕರಿಸಿರುವ ಕಾರಣ ಕಲಾ ವಿಭಾಗದವರ ಅಂಕಗಳ ಮುಂದೆ ವಿಜ್ಞಾನ ವಿಭಾಗದ ಅಭ್ಯರ್ಥಿಗಳ ಅಂಕಗಳು ಸಾಲುತ್ತಿಲ್ಲ. ಈ ಹುದ್ದೆಗಳಿಗೆ ಆಯ್ಕೆಯಾಗುತ್ತಿರುವವರು ಕಲಾ ವಿಭಾಗದವರೇ ಆಯ್ಕೆಯಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಅಂಕಗಳ ಆಧಾರದಲ್ಲಿ ನೇಮಕ ಮಾಡಿಕೊಂಡರೆ ವಿಜ್ಞಾನ ವಿಭಾಗದವರು ಆಯ್ಕೆಯಾಗುವ ಸಾಧ್ಯತೆ ಇರುತ್ತದೆ.
ವಿನಯ್ ,ಗ್ರಾಮ ಲೆಕ್ಕಿಗ ಹುದ್ದೆಯ ಆಕಾಂಕ್ಷಿ.ಚೇಳೂರು
…………….
ಅರ್ಹತಾ ಪರೀಕ್ಷೆ ಅಂಕಗಳ ಆಧಾರದ ಮೇರೆ ಆಯ್ಕೆ ಮಾಡಿಕೊಳ್ಳುತ್ತಿರುವ ಕಾರಣ ಅತಿ ಹೆಚ್ಚು ಅಂಕಗಳಿಸಿದ ಆಗಷ್ಟೇ ಪಿಯುಸಿ ಮುಗಿಸಿರುವ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಇವರಿಗೆ ಕಂದಾಯ ಇಲಾಖೆಯ ಸಾಮಾನ್ಯ ತಿಳುವಳಿಕೆ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಕಂದಾಯ ಇಲಾಖೆಯ ಕುರಿತ ಪತ್ರಿಕೆಯೊಂದನ್ನ ನಡೆಸುವ ಮೂಲಕ ಆಯ್ಕೆ ಮಾಡಿಕೊಂಡರೆ ಒಳ್ಳೆಯದು
…….
ರಮೇಶ್ ಸಾಮಾಜಿಕ ಹೋರಾಟಗಾರ