ಶಿವಸೇನೆಯ ಮುಖ್ಯಸ್ಥ ಉದ್ದವ್ ಠಾಕ್ರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರ್ ಪ್ರಮಾಣ ವಚನ ಬೋಧಿಸಿದರು. ಬಾಳಠಾಕ್ರೆಯ ಮೊದಲ ಪೀಳಿಗೆಯ ಉದ್ದವ್ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿರುವುದು ವಿಶೇಷವಾಗಿದೆ.
ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪ್ರಮಾಣ ವಚನ ಸಮಾರಂಭದಲ್ಲಿ ಶಿವಸೇನೆಯಿಂದ ಇಬ್ಬರು, ಕಾಂಗ್ರೆಸ್ ಪಕ್ಷದಿಂದ ಇಬ್ಬರು ಮತ್ತು ಎನ್.ಸಿ.ಪಿ ಯಿಂದ ಇಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶಿವಸೇನೆಯಿಂದ ಏಕನಾಥ್ ಶಿಂಧೆ, ಸುಭಾಷ್ ದೇಸಾಯಿ, ಕಾಂಗ್ರೆಸ್ ಪಕ್ಷದಿಂದ ಬಾಳಾಸಾಹೇಬ್ ಥೋರಟ್ ಮತ್ತು ನಿತಿನ್ ರಾವುತ್ ಹಾಗೂ ಎನ್.ಸಿ.ಪಿಯಿಂದ ಜಯಂತ್ ಪಾಟೀಲ್, ಛಗನ್ ಬುಜ್ ಬಲ್ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ಟಿ.ಆರ್. ಬಾಲು, ಕಾಂಗ್ರೆಸ್ ನಾಯಕ ಅಹಮದ್ ಪಟೇಲ್, ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಶಿವಸೇನೆ-ಕಾಂಗ್ರೆಸ್-ಎನ್.ಸಿ.ಪಿ ಮೂರು ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಿದ್ದು ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿವೆ. ರೈತರ ಸಾಲ ಮನ್ನಾ, ನೆರೆ ಸಂತ್ರಸ್ಥರಿಗೆ ಪರಿಹಾರ, ನಿರುದ್ಯೋಗ ಪದವೀಧರರಿಗೆ ನಿರುದ್ಯೋಗ ವೇತನ, ವಿಧರ್ಬ ರೈತರ ಸಂಕಷ್ಟಕ್ಕೆ ಪರಿಹಾರ ರೂಪಿಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾಗಿದೆ.