ತುಮಕೂರು: ತುಮಕೂರಿನಲ್ಲಿ ನಡೆದ ಸಿಐಟಿಯು 14ನೇ ರಾಜ್ಯಮಟ್ಟದ ಸಮ್ಮೇಳನಕ್ಕೆ ಕಾರ್ಮಿಕರ ಸಾಗರವೇ ಹರಿದು ಬಂದಿತ್ತು. ಗಾಜಿನಮನೆ ತುಂಬಿ ಹೋಗಿ ಹೊರಗೂ ನಿಂತು ನಾಯಕರ ಭಾಷಣ ಆಲಿಸಿದರು.
ಭಾಷಣಕಾರೆಲ್ಲರೂ ಮಹಿಳೆಯ ಭಾಗವಹಿಸುವಿಕೆ ಶೇಕಡ 90ರಷ್ಟಿದೆ ಎಂದು ಶ್ಲಾಘಿಷಿದರು. ವೇದಿಕೆಯ ಮೇಲಿದ್ದ ಗಣ್ಯರು ಲಾಲ್ ಸಲಾಂ, ಐಕ್ಯತೆ ಚಿರಾಯುವಾಗಲಿ, ಹೋರಾಟ ಮುಂದುವರೆಸುತ್ತೇವೆ ಎಂಬ ಘೋಷಣೆ ಮೊಳಗಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಹಾಗೂ ವಿಶೇಷವಾಗಿ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸಾವಿರಾರು ಮಂದಿ ಅಂಗನವಾಡಿ, ಬಿಸಿಯೂಟ, ಸ್ಕೀಂ ನೌಕರರು, ಕೈಗಾರಿಕೆಗಳ ಸಂಘಟಿತ ಅಸಂಘಟಿತ ಕಾರ್ಮಿಕರು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಮತ್ತು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಮಾವೇಶಕ್ಕೆ ಬಂದಿದ್ದರು.
ವೇದಿಕೆಯಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಮಂಡಿಸಲಾಯಿತು.ಮೊದಲನೆಯದು ಜನವರಿ 8ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಯಶಸ್ವಿಗೆ ಎಚ್.ಎಸ್.ಸುನಂದ ವಿಷಯ ಮಂಡಿಸಿದರು. ಕೆ.ಮಹಾಂತೇಶ್ ಅನುಮೋದಿಸಿದರು.
ಅದರಲ್ಲಿ ರಾಷ್ಟ್ರೀಯ ಕನಿಷ್ಟ ವೇತನ 21 ಸಾವಿರಕ್ಕೆ ನಿಗದಿ ಮಾಡಬೇಕು. ಎಲ್ಲರಿಗೂ ಸರ್ಕಾರದಿಂದಲೇ 10 ಸಾವಿರ ಕನಿಷ್ಟ ಪಿಂಚಣಿ ಜಾರಿಗೊಳಿಸಬೇಕು.ಗ್ರಾಮೀಣ ಮತ್ತು ನಗರದ ೆಲ್ಲಾ ಕುಟುಂಬಗಳನ್ನು ಒಳಗೊಂಡ ಸಮರ್ಪಕ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಬೇಕು. ಗ್ರಾಮೀಣ ಸಂಕಷ್ಟವನ್ನು ಕಡಿಮೆ ಮಾಡಲು ಸೂಕ್ತವಾದ ಸಂಗ್ರಹ ಸೌಲಭ್ಯಗಳೊಂದಿಗೆ ಡಾ.ಸ್ವಾಮಿನಾಥನ್ ಶಿಫಾರಸಿನಂತೆ ಬೆಂಬಲ ಬೆಲೆ ನಿಗದಿ ಮಾಡಬೇಕು. ರೈತರ ಮತ್ತು ಕೂಲಿಕಾರರ ಸಾಲ ಮನ್ನಾ ಮಾಡಬೇಕು.ಕಾಯಂಗೊಳಿಸಬೇಕು. ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಬೇಕು. ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಮತ್ತೊಂದು ವಿಷಯ ಅಯೋಧ್ಯ ಪ್ರಕರಣ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ, ಸೌಹಾರ್ದತೆ ಮತ್ತು ದುಡಿಯುವ ಜನರ ಐಕ್ಯತೆ ಕಾಪಾಡಲು ಕರೆ ನೀಡಲಾಯಿತು. ಪ್ರಕಾಶ್ ಅವರ ವರದಿ ಮಂಡಿಸಿದರು. ಎನ್.ಕೆ.ಸುಬ್ರಮಣ್ಯ ಅನುಮೋದನೆ ನೀಡಿದರು.