Friday, November 1, 2024
Google search engine
Homeಜನಮನಒಂದು ಪುರಾತನ ಖಾಸಗೀ ವೃತ್ತಾಂತ

ಒಂದು ಪುರಾತನ ಖಾಸಗೀ ವೃತ್ತಾಂತ

ನಾಗೇಶ್ ಹೆಗಡೆ


ದಿಲ್ಲಿಯ ಜೆಎನ್‌ಯು ತನ್ನ 50ನೇ ವರ್ಷಕ್ಕೆ ಕಾಲಿಟ್ಟಿದೆ. ಅಲ್ಲಿನ ಹಿಂದಿನ ದಿನಗಳ ಬಗ್ಗೆ ಏನಾದರೂ ಬರೆದುಕೊಡಿರೆಂದು ನನಗೂ ಕಳೆದ ವರ್ಷ ಕೇಳಿದ್ದರು.
ನೆನಪುಗಳ ಮೆರವಣಿಗೆಯ ಆ ಭರ್ಜರಿ ಪುಸ್ತಕ ಇದೀಗ ನನ್ನ ಕೈಸೇರಿದೆ.

ಅನೇಕ ವಿಶ್ವಮಾನ್ಯ ಘಟಾನುಘಟಿ ದಿಗ್ಗಜರ ಲೇಖನಗಳು ಅದರಲ್ಲಿವೆ. (ಅಕಾರಾದಿ ಪಟ್ಟಿಯಲ್ಲಿ ಮೊದಲ ಹೆಸರೇ ನೊಬೆಲ್‌ ವಿಜೇತ ಅಭಿಜಿತ್‌ ಬ್ಯಾನರ್ಜಿ ಅವರದ್ದು). ಅವರೆಲ್ಲರ JNU ಯುವದಿನಗಳ ನೆನಪುಗಳ ಮಧ್ಯೆ ನನ್ನ ಲೇಖನವೂ ಪ್ರಕಟವಾಗಿದೆ.

ನನ್ನ ಕತೆ ಏನೆಂದರೆ- ಒಂದು ಕಪ್‌ನಿಂದಾಗಿ ನಾನು ಹೇಗೆ ಪಿಎಚ್‌ಡಿ ಪದವಿಯಿಂದ ವಂಚಿತನಾದೆ ಅನ್ನೋದು.

ಅದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ-
ಇಂದಿಗೆ 48 ವರ್ಷಗಳ ಹಿಂದೆ ನನಗೆ JNUದಲ್ಲಿ ʼಸೈನ್ಸ್‌ ಪಾಲಿಸಿʼ ಅಧ್ಯಯನ ವಿಭಾಗದಲ್ಲಿ (ಇಂಟರ್‌ವ್ಯೂ ಇಲ್ಲದೆ) ನೇರ ಪ್ರವೇಶ ಸಿಕ್ಕಿತು. ಆ ವಿಭಾಗಕ್ಕೆ ನಾನು ಒಬ್ಬನೇ ಒಬ್ಬ ವಿದ್ಯಾರ್ಥಿ, ಒಂದೇ ಪ್ರೊಫೆಸರು, ಒಬ್ಬ ಕ್ಲರ್ಕ್‌, ಒಬ್ಬ ಅಟೆಂಡರ್‌ ಇಷ್ಟೆ.

ಆಗ ಅದೇ ತಾನೆ ಬಾಂಗ್ಲಾದೇಶ್‌ ಸೃಷ್ಟಿಯಾಗಿ ಪಾಕಿಸ್ತಾನ ಅನ್ನೋದು ಬರೀ ʼಬಾಕಿಸ್ತಾನʼವಾಗಿ, ಅದು ಹತಾಶೆಯಿಂದ ಆಗ್ರಾ, ಅಮೃತಸರ್‌ ಮೇಲೆ ಬಾಂಬ್‌ ದಾಳಿ ಮಾಡುತ್ತಿತ್ತು. ದಿಲ್ಲಿಯ ಅಂಚಿನಲ್ಲೂ ದಾಳಿ ಆದೀತೆಂದು ಸಂಜೆಯಾಗುತ್ತಲೆ ನಾವೆಲ್ಲ ಬ್ಲಾಕೌಟ್‌ ಕಗ್ಗತ್ತಲಲ್ಲಿ ಪಾಳಿಯ ಮೇಲೆ ಗಸ್ತು ತಿರುಗುತ್ತಿದ್ದೆವು.

ಹಗಲು ವೇಳೆ ಮಾಡಲು ವಿಶೇಷ ಕೆಲಸ ಇಲ್ಲದೆ ನಾನೊಬ್ಬನೇ ಆಚೀಚೆ ಸುತ್ತಾಡಲು ಹೋದಾಗ ಅಲ್ಲೇ ಪಕ್ಕದ ಐಐಟಿಯಲ್ಲಿ Inter collegiate ಚಿತ್ರರಚನಾ ಸ್ಪರ್ಧೆ ಇತ್ತು. ನಾನೂ ಕೂತು ಚಿತ್ರ ಬರೆದೆ. ನನಗೇ ಮೊದಲ ಬಹುಮಾನ, ರೋಲಿಂಗ್‌ ಕಪ್‌ ಎಲ್ಲ ಬಂತು.

ಅದನ್ನು ಹೊತ್ತು ಒಬ್ಬಂಟಿಯಾಗಿ ಬರುತ್ತಿದ್ದಾಗ ಸಂಜೆಗತ್ತಲಲ್ಲಿ JNU ಕ್ಯಾಂಪಸ್ಸಿನಲ್ಲಿ ವಾಕ್‌ ಮಾಡುತ್ತಿದ್ದ ಯಾರೋ ಒಬ್ಬರು ನನ್ನನ್ನು ತಡೆದು ನಿಲ್ಲಿಸಿ ಮಾತಿಗೆಳೆದರು.

ಅವರು ಅಮೆರಿಕದಲ್ಲಿ ಪತ್ರಿಕೋದ್ಯಮ ಪದವಿ ಪಡೆದು, Films Division ನಲ್ಲಿ ಉತ್ಕೃಷ್ಟ ಕೆಲಸ ಮಾಡಿ JNU ರೆಜಿಸ್ಟ್ರಾರ್‌ ಆಗಿ ನೇಮಕಗೊಂಡ ಕನ್ನಡಿಗ NVK ಮೂರ್ತಿಯವರು.

ಮರುದಿನ ಅವರು ನನ್ನನ್ನು Vice Chancellor ಜಿ. ಪಾರ್ಥಸಾರಥಿಯವರ ಬಳಿ ಕಪ್ ಸಮೇತ ಒಯ್ದರು.
ಈ ಕುಲಪತಿ ಮಹಾನುಭಾವ ಅಂತರರಾಷ್ಟ್ರೀಯ ಖ್ಯಾತಿಯ ಡಿಪ್ಲೊಮಾಟ್‌. ತುಂಬ ಹಿಂದೆ ʼದಿ ಹಿಂದೂʼದಲ್ಲಿ ಪತ್ರಕರ್ತರಾಗಿ, ನಂತರ ವಿದೇಶಾಂಗ ಇಲಾಖೆ ಸೇರಿ ವಿಶ್ವಸಂಸ್ಥೆಯ ಶಾಶ್ವತ ರಾಯಭಾರಿಯಾಗಿ ಈಗ JNU Vice Chancellor ಎಂದು ನೇಮಕಗೊಂಡವರು.

ಇವರಿಬ್ಬರೂ ನನ್ನೊಂದಿಗೆ ಲೋಕಾಭಿರಾಮ ಮಾತಾಡುತ್ತ ನನ್ನನ್ನು ಒಂಥರಾ ಇಂಟರ್‌ವ್ಯೂ ಮಾಡಿದರು.

ನನಗೆ ಚಿತ್ರಕಲೆ, ಬರೆವಣಿಗೆ, ಫೊಟೊಗ್ರಫಿ, ಈಜು, ಓಟ ಎಲ್ಲದರಲ್ಲೂ ಆಸಕ್ತಿ ಇದೆ ಎಂದು ಗೊತ್ತಾಗಿ ಅವರಿಬ್ಬರು ಒಂದು ವ್ಯೂಹ ರಚಿಸಿದರು. ಕ್ಯಾಂಪಸ್‌ನಲ್ಲಿ ಬರೀ ರಾಜಕೀಯ ಇದ್ದರೆ ಸಾಲದು, ಸಾಂಸ್ಕೃತಿಕ ಪರಿಸರವೂ ಇರಬೇಕೆಂದು ನನ್ನೆದುರೇ ಮಾತಾಡಿಕೊಂಡರು. ಅದಕ್ಕೆ ನನ್ನನ್ನೇ ಆರಂಭಿಕ ರಾಯಭಾರಿಯನ್ನಾಗಿ ಮಾಡಿದರು.

ಕೇಳುವುದೇನು, ಹೊಸ ವಿವಿಯಲ್ಲಿ ಹೊಸ ಗೆಳೆಯರ ತಂಡ ಕಟ್ಟಿಕೊಂಡು ನಾನು ಫೋಟೊಗ್ರಫಿ, ಚಿತ್ರಕಲೆ, ಸಂಗೀತ, ಸ್ಕೇಟಿಂಗ್‌, ನಾಟಕ, ನೃತ್ಯ ಇತ್ಯಾದಿ ಕ್ಲಬ್‌ಗಳನ್ನು ಆರಂಭಿಸಿದೆ. (ಸಫ್ದರ್‌ ಹಾಶ್ಮಿಯ ತಮ್ಮ ಸೊಹೇಲ್‌ ಹಾಶ್ಮಿ ಕೂಡ ನನ್ನೊಂದಿಗಿದ್ದ). ಹಣಕ್ಕೇನೂ ಕೊರತೆ ಇಲ್ಲವಾದ್ದರಿಂದ ಅವುಗಳಿಗೆ ಸಂಬಂಧಿಸಿದ ಪರಿಕರ ಖರೀದಿಗೆ ದಿಲ್ಲಿಯಲ್ಲೆಲ್ಲ ಸುತ್ತಾಡಿದೆ.

ನಮ್ಮ ಸಾಂಸ್ಕೃತಿಕ ಸಂಘ ದಿಲ್ಲಿಯ ಇತರ ಕಾಲೇಜುಗಳಲ್ಲಿ ಜಯಭೇರಿ ಬಾರಿಸಿ, ದೂರದ ಜಯಪುರ, ಅಮೃತಸರ, ಭೋಪಾಲ್‌ಗಳಿಗೆಲ್ಲ ಹೋಗಿ ಫಲಕ, ಪ್ರಶಸ್ತಿ ಗೆದ್ದು ಬಂತು.
(ಜಯಪುರದಲ್ಲಿ ನಾನು ಪ್ರೇತನೃತ್ಯ ಮಾಡಿ ವಿಶೇಷ ಬಹುಮಾನ ಗಿಟ್ಟಿಸಿದೆ ಬೇರೆ ಯಾವ ನೃತ್ಯವೂ ನನಗೆ ಗೊತ್ತಿರಲಿಲ್ಲ; ಅಲ್ಲಿನವರಿಗೆ ಈ ಎಡಬಿಡಂಗಿ ಕತ್ತಲ ಕುಣಿತ ಗೊತ್ತಿರಲಿಲ್ಲ. ಕುಣಿತ ನೋಡಿ ಭಾರೀ ಚಪ್ಪಾಳೆ ʼವನ್ಸ್‌ ಮೋರ್‌ʼ ಎಲ್ಲ ಬಂತು.

ಆದರೆ ಪ್ರೇತನೃತ್ಯದ ರೀ ಪ್ಲೇ ಸಾಧ್ಯವಿರಲಿಲ್ಲ. ಏಕೆಂದರೆ ಮೈಗೆಲ್ಲ ಕರೀ ಬಣ್ಣ ಬಳಿದುಕೊಂಡು ಅಸ್ಥಿಪಂಜರದಂತೆ ಬಿಳಿಬಿಳೀ ರಟ್ಟುಗಳನ್ನು ಕಟ್ಟಿಕೊಂಡು ಕುಣಿಯುವಾಗ ಅವೆಲ್ಲ ಒಂದೊಂದಾಗಿ ಕಳಚಿ ಬೀಳುವಂತೆ ವ್ಯವಸ್ಥೆ ಮಾಡಿಕೊಂಡಿದ್ದೆ. ಕತ್ತಲ ರಂಗಸ್ಥಳದಲ್ಲಿ
ಅದು ತುಂಬ ಡ್ರಮಾಟಿಕ್‌ ಎಫೆಕ್ಟ್‌ ಕೊಟ್ಟಿತ್ತಾದರೂ ಮತ್ತೊಮ್ಮೆ ಕೆಳಕ್ಕೆ ಬಿದ್ದು ಚೂರಾದ ಮೂಳೆಗಳನ್ನೆಲ್ಲ ಹೆಕ್ಕಿ ಜೋಡಿಸಲು ಸಾಧ್ಯವೆಲ್ಲಿ?)

JNUದ ಎಡಪಂಥೀಯ ಬೆಂಕಿ ನವಾಬರುಗಳಿಗೆ ಇಂಥ ಸಾಂಸ್ಕೃತಿಕ ವಿಷಯಗಳೆಲ್ಲ ಇಷ್ಟ ಆಗ್ತಾ ಇರಲಿಲ್ಲ. ಇವೆಲ್ಲ ಬರೀ ಬೂಸಾ (ಬೂರ್ಶ್ವಾ) ಚಟುವಟಿಕೆ ಎಂದು ನಮ್ಮನ್ನು ಹಂಗಿಸುತ್ತಿದ್ದರು.
ನಾವು ಎಡಪಂಥೀಯರ ವಿರುದ್ಧ “ಫ್ರೀ ಥಿಂಕರ್ಸ್”‌ ಎಂಬ ಬೇರೆ ಗುಂಪು ಕಟ್ಟಿದೆವು. ಎರಡು ಗುಂಪುಗಳ ಮಧ್ಯೆ ಭಾರೀ ಚುನಾವನಾ ಹಣಾಹಣಿ ನಡೆಯುತ್ತಿತ್ತು. ನಾನು ನಮ್ಮ ಗುಂಪಿಗೆ ಭಿತ್ತಿಚಿತ್ರ, ವ್ಯಂಗ್ಯಚಿತ್ರ ಬರೆಯುತ್ತಿದ್ದೆ.
ಎರಡು ಬಾರಿ ಎಡಪಂಥೀಯರನ್ನು ಸೋಲಿಸಿ, ಎಲ್ಲ ಪತ್ರಿಕೆಗಳಲ್ಲೂ ರಾರಾಜಿಸಿ ನಮ್ಮ ಫ್ರೀ ಥಿಂಕರ್ಸ್‌ ತಂಡ ಭಾರೀ ಕೀರ್ತಿ ಗಳಿಸಿಬಿಟ್ಟಿತು.
ಈ ಎಲ್ಲ ಅವಾಂತರಗಳಲ್ಲಿ ನನ್ನ ಪಿಎಚ್‌ಡಿ ಎಕ್ಕುಟ್ಟಿ ಹೋಯಿತು.

ಈ ಮೂರು ವರ್ಷಗಳಲ್ಲಿ ನಾನು ಬರೆದಿದ್ದು ಒಂದೇ ಒಂದು ಸಂಶೋಧನ ಪ್ರಬಂಧ . ಆದರೆ ಮೂರು ಜನ್ಮಕ್ಕಾಗುವಷ್ಟು ವೈವಿಧ್ಯಮಯ ಅನುಭವ ನನ್ನದಾಯಿತು. ನಾನು ಕೊನೆಗೆ ಪತ್ರಕರ್ತನಾಗಿ ಬೆಂಗಳೂರು ಸೇರಿದೆ.

ಈಗ ಹಿಂದಿರುಗಿ ನೋಡಿ, ನನ್ನ ಹಣೆಯಲ್ಲಿ ಇದನ್ನೆಲ್ಲ ಬರೆದಿದ್ದು ಯಾರು ಎಂದು ನೋಡಿದರೆ – ಅದೇ ಆ ರೆಜಿಸ್ಟ್ರಾರು, ಆ ವೈಸ್‌ಚಾನ್ಸಲರು.

ಇಬ್ಬರೂ ಜರ್ನಲಿಸಂ ಮೂಲಕವೇ ಮೇಲೆ ಬಂದವರಾಗಿದ್ದರು. ಆದಿನ ನನ್ನ ಕೈಗೆ ಆ ಕಪ್‌ ಬಂದಿರದಿದ್ದರೆ, ನಾನವರ ಕಣ್ಣಿಗೆ ಬೀಳದಿರುತ್ತಿದ್ದರೆ… ಜರ್ನಸಲಿಸ್ಟ್‌ ಆಗುವ ಬದಲು ಬೇರೇನೋ ಆಗುತ್ತಿದ್ದೆ.

*
ಇವಿಷ್ಟು ಈ ಗ್ರಂಥದಲ್ಲಿದೆ. ಅದರಲ್ಲಿ ಬಿಟ್ಟುಹೋದ ಚೂರು ಮಾಹಿತಿ ಇಲ್ಲಿದೆ:
ನನ್ನ ರೀಸರ್ಚ್‌ ಪೇಪರ್‌ ಅಂದು ಸಂಸತ್ತಿನಲ್ಲಿ ಚರ್ಚೆಯಾದ ಮಾರನೆ ತಿಂಗಳಲ್ಲೇ ಎಮರ್ಜನ್ಸಿ ಘೋಷಣೆ ಬಂತು. ಪೊಲೀಸರು ವಿದ್ಯಾರ್ಥಿ ನಾಯಕರನ್ನು ಅಟ್ಟಾಡಿಸಿ ಅರೆಸ್ಟ್‌ ಮಾಡಲು ಬಂದಿದ್ದರು. ನಾನು ನಾಯಕನೇನೂ ಆಗಿರಲಿಲ್ಲ. ಆದರೆ ಹೇಗೋ ನನ್ನ ಹೆಸರೂ ಪಟ್ಟಿಯಲ್ಲಿತ್ತು.

ಅವರು ದಾಳಿಗೆ ಬಂದು ನನ್ನ ಹಾಸ್ಟೆಲ್‌ ರೂಮಿನ ಬಾಗಿಲು ಒದೆದಾಗ ನಾನು ಅಲ್ಲೇ ಸಮೀಪ ಹಾಸ್ಟೆಲಿನ ಬಚ್ಚಲೊಲೆಗೆ ಬೆಂಕಿ ಹಚ್ಚಿ ಗಾಳಿ ಊದುತ್ತ ಕೂತಿದ್ದೆ.
ಪೊಲೀಸರು ಧಾಡ್‌ಧೂಡ್‌ ಬಂದು “ಆ ಹುಡುಗ ಎಲ್ಲಿ ಹೋದ?” ಎಂದು ನನ್ನನ್ನೇ ಕೇಳಿದರು. ನಾನು ಭಯದಿಂದ ಬೆಬ್ಬೆಬ್ಬೆ ಅನ್ನುತ್ತಿದ್ದಾಗ ಅವರು ಬೈದುಕೊಳ್ಳುತ್ತ ಹೊರಟು ಹೋದರು.

ಬಚಾವಾದ ಈ ಬಡಜೀವವನ್ನು ಆರೆಸ್ಸೆಸ್‌ ಗೆಳೆಯರು (ಅವರು ಎಡಪಂಥೀಯರನ್ನು ಸೋಲಿಸಲೆಂದೇ ಫ್ರೀ ಥಿಂಕರ್ಸ್‌ ಗುಂಪಿಗೆ ಸೇರಿದ್ದರು) ಎಲ್ಲೆಲ್ಲೋ ಹಿಮಾಲಯದಲ್ಲಿ ಸುತ್ತಾಡಿಸಿ ಕೊನೆಗೆ ವಾರ್ಧಾದ ಗಾಂಧೀಜಿ ಆಶ್ರಮಕ್ಕೆ ಕರೆತಂದು ಬಿಟ್ಟರು. ಅಲ್ಲಿ ಗ್ರಾಮೋದ್ಧಾರದ ಕೆಲಸಕ್ಕೆ ಸಹಾಯವಾಗಲೆಂದು ʼಸೈನ್ಸ್‌ ಫಾರ್‌ ವಿಲೇಜಿಸ್‌ʼ ಎಂಬ ಪತ್ರಿಕೆಯನ್ನು ಆರಂಭಿಸಲು ನಿರ್ಧರಿಸಲಾಯಿತು.

ನಾನು ಅದರ ಆರಂಭಿಕ ಸಂಪಾದಕನಾಗಿ ನೇಮಕಗೊಂಡೆ.. ತುರ್ತುಸ್ಥಿತಿ ಮುಗಿದ ಬಳಿಕ ಮತ್ತೆ ಜೆಎನ್‌ಯುಕ್ಕೆ ಹೋದೆ. ನನ್ನ ಪಿಎಚ್‌ಡಿ ರೆಜಿಸ್ಟ್ರೇಶನ್‌ ರದ್ದಾಗಿತ್ತು. ಆದರೆ ಅಧ್ಯಾಪಕರೆಲ್ಲ ಪರಿಚಿತರೇ ಆಗಿದ್ದರಿಂದ ಹೊಸದಾಗಿ ಆರಂಭವಾದ ಪರಿಸರ ವಿಭಾಗದಲ್ಲಿ ನನಗೊಂದು ನೌಕರಿ ಮತ್ತು ಪಿಎಚ್‌ಡಿಗೆ ಅವಕಾಶ ಸಿಕ್ಕಿತು….


[ನನ್ನ ಭವಿಷ್ಯವನ್ನು ಬದಲಿಸಿದ ಆ ಕಪ್‌ ಈಗಲೂ ನನ್ನ ಬಳಿ ಇದೆ. ನೆಲ್ಲಿಕಾಯಿ ಒಣಗಿಸಲೆಂದು ಬಳಸುತ್ತಿದ್ದ ಅದನ್ನು ಹಿಡಿದು ಈಚೆಗೆ ಟೆರೇಸ್‌ ಮೇಲೆ ಏರುತ್ತಿದ್ದಾಗ ನನ್ನ ಪತ್ನಿ ತೆಗೆದ ಫೋಟೊ ಇದು]

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?