Publicstory.in
Thuruvekere: ಬೇಂದ್ರೆ ಸಾಹಿತ್ಯ ಸೌಂದರ್ಯ ಮತ್ತು ವರ್ತಮಾನದ ಸಂಗತಿಗಳನ್ನು ತುಲನಾತ್ಮಕವಾಗಿ ವಿಮರ್ಶಿಸುವ ಮೂಲಕ ಅವರ ಸಾಹಿತ್ಯ ಸೌಂದರ್ಯದ ಶುಚಿತ್ವವನ್ನು ಅನಾವರಣಗೊಳಿಸಬಹುದು ಎಂದು ಬೆಂಗಳೂರು ಕ್ರಿಸ್ತು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎ.ಕೆ.ರವಿಶಂಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ¬ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಕಾಯಕ ವರ್ಷಾಚರಣೆಯ ಅಂಗವಾಗಿ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ದ.ರಾ.ಬೇಂದ್ರೆ ಸಾಹಿತ್ಯೋತ್ಸವ ಮತ್ತು ಕವಿ-ಕಾವ್ಯ ಗೋಷ್ಟಿ ಕಾರ್ಯಕ್ರಮದಲ್ಲಿ “ಬೇಂದ್ರೆ ಸಾಹಿತ್ಯದ ಸೌಂದರ್ಯ ಶುಚಿ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಬೇಂದ್ರೆ ಸಾಹಿತ್ಯದಲ್ಲಿ ಚತುರ್ಮುಖ ಸೌಂದರ್ಯವಿದೆ. ಸೌಂದರ್ಯವನ್ನು ಐಂದ್ರಿಕ, ಕಾಲ್ಪನಿಕ, ಬೌದ್ಧಿಕ ಮತ್ತು ಆದರ್ಶ ಸೌಂದರ್ಯ ಎಂದು ವಿಂಗಡಿಸಬಹುದಾಗಿದೆ.ಸಮಾಜ ಕೇವಲ ಐಂದ್ರಿಕ ಹಾಗೂ ಕಾಲ್ಪನಿಕ ಹಂತವನ್ನು ಮಾತ್ರ ಕಾಣಲು ಶಕ್ತವಾಗಿರುತ್ತದೆ. ಅದನ್ನು ಮೀರಿ ಬೌದ್ಧಿಕ ಮತ್ತು ಆದರ್ಶ ಸೌಂದರ್ಯದ ನೆಲೆಯಲ್ಲಿ ನಿಂತು ಅರ್ಥೈಸಿಕೊಂಡಾಗಲೇ ಬೇಂದ್ರೆ ಸಾಹಿತ್ಯದ ಅನೂಹ್ಯ ಸ್ವರೂಪ ಹಾಗೂ ಹೊಳಹುಗಳು ಗೋಚರಿಸುತ್ತವೆ, ಬೇಂದ್ರೆಯವರ ಬದುಕು ಮತ್ತು ಸಾಹಿತ್ಯದ ನೋವು, ತಲ್ಲಣಗಳು ವರ್ತಮಾನದ ನೋವು, ಸಂಕಟಗಳಿಗೆ ಸಾಕ್ಷೀಭೂತವಾಗಿ ನಿಲ್ಲುತ್ತವೆ. ವಸ್ತು ಮತ್ತು ವಿಷಯದಾಚೆ ಭಾವಸಂದರ್ಭದ ಮೂಲಕ ಅವರ ಕಾವ್ಯವನ್ನು ಅರ್ಥೈಸಿಕೊಳ್ಳಬೇಕು. ಬೇಂದ್ರೆಯವರ ಗದ್ಯಸಾಹಿತ್ಯವನ್ನು ಓದಿಕೊಂಡವರಷ್ಟೇ ಅವರ ಕಾವ್ಯ ಅರ್ಥಮಾಡಿಕೊಳ್ಳಲು ಸಾಧ್ಯ ಎಂದರು
ಪ್ರಸ್ತುತ ಶಿಕ್ಷಣ ನೀತಿಯ ಭಾಷೆಯ ಆಯ್ಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳಿಗೆ ಮಾನವಿಕ ವಿಷಯಗಳ ಆಯ್ಕೆಯ ಸ್ವಾತಂತ್ಯ್ರವನ್ನು ಕೊಟ್ಟಿದ್ದು ಭಾಷೆಗಳನ್ನು ಆಯ್ದುಕೊಳ್ಳದಿರುವ ಅಪಾಯವಿದೆ. ಹೀಗಾಗಿ ಎಸ್.ಎಸ್.ಎಲ್.ಸಿ ಮತ್ತು ಪಿಯು ಶಿಕ್ಷಣದ ನಂತರವೂ ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ನೀತಿ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ ಸಿ.ರಂಗದಾಮಯ್ಯ ದ.ರಾ.ಬೇಂದ್ರೆಯವರಯವರಂತಹ ಶ್ರೇಷ್ಠ ಕವಿಗಳ ವಿಚಾರಧಾರೆಗಳನ್ನು ನಮ್ಮ ಮಕ್ಕಳಿಗೆ ತಿಳಿಸದೆ ದೂರವಿಟ್ಟಿದ್ದೇವೆ. ಇಂದು ನಮ್ಮ ಮಕ್ಕಳಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಹೇಳಲು ಸಾದ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾಧನೀಯ ಎಂದರು.
ಸಾಹಿತಿ ತುರುವೇಕೆರೆ ಪ್ರಸಾದ್ ಮಾತನಾಡಿ ಕಾವ್ಯ ರಚನೆ ಕೂಡ ಅವಸರದ ಸಾಹಿತ್ಯ ಎನ್ನುವಂತಾಗಿದೆ. ಸಮಕಾಲಿನ, ಸಾಮಾಜಿಕ ಸ್ಥಿತಿಗತಿಗಳನ್ನು ಬಿಂಬಿಸುವುದರಿಂದ ಕಾವ್ಯ ಮಲಿನವಾಗುವುದಿಲ್ಲ. ವಸ್ತುವಿನ ಆಯ್ಕೆ ಮತ್ತು ಭಾಷಾ ಪ್ರೌಢಿಮೆ ಕಾವ್ಯದ ಶ್ರೇಷ್ಠತೆಯನ್ನು ನಿರ್ಧರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ತುರುವೇಕೆರೆ ಪ್ರಸಾದ್ ಅವರ ‘ ಕರೋನಾ ಅಟ್ಟಿದ ಗಟ್ಟಿಗರ ಕತೆಗಳು’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಶ್ರೀನಿವಾಸ್ ಹಾಗೂ ಕನ್ನಡ ಭಾಷಾ ಬೋಧಕರ ಸಂಘದ ಮಾಜಿ ಅಧ್ಯಕ್ಷ ಮಂಜಯ್ಯಗೌಡರನ್ನು ಸನ್ಮಾನಿಸಲಾಯಿತು. ನಂತರ ದ.ರಾ.ಬೇಂದ್ರೆ ಕುರಿತು ಹಲವರು ಕವಿಗಳು ಕವಿತೆ ವಾಚನ ಮಾಡಿದರು. ದ.ರಾ.ಬೇಂದ್ರೆ ವಿರಚಿತ ಗೀತೆಗಳನ್ನು ಶರಿತಾ ದೇವರಮನೆ ಹಾಗೂ ವಾಸವಿ ಸತೀಶ್ ಹಾಡಿದರು.
ಕಾರ್ಯಕ್ರಮದಲ್ಲಿ ಕಸಾಪ ಗೌರವಾದ್ಯಕ್ಷ ಪ್ರೊ.ಪುಟ್ಟರಂಗಪ್ಪ, ಅಧ್ಯಕ್ಷ ನಂ.ರಾಜು, ನಿಕಟಪೂರ್ವ ಅಧ್ಯಕ್ಷ ಸಾ.ಶಿದೇವರಾಜು, ಸ್ವಾಮಿ ವಿವೇಕಾನಂದ ಕಾಲೇಜು ಪ್ರಾಂಶುಪಾಲ ಬಿ.ಶಿವಮೂರ್ತಿ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ್ ಕೆಂಕೆರೆ, ಪರಮೇಶ್ವರಸ್ವಾಮಿ, ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ವೆಂಕಟೇಶ್, ಚಿದಂಬರೇಶ್ವರ ಗ್ರಂಥಾಲಯದ ರಾಮಚಂದ್ರು, ಸತೀಶ್, ದಿನೇಶ್, ಅಮ್ಮಸಂದ್ರ ಶಿವು ಸೇರಿದಂತೆ ಇತರರು ಇದ್ದರು. ಲೈಬ್ರರಿ ರಾಮಚಂದ್ರು ಸ್ವಾಗತಿಸಿದರು. ಡಾ.ಟಿ.ಆರ್.ಚಂದ್ರಯ್ಯ ವಂದಿಸಿದರು. ಹಂಸರೇಖಾ ದಿಲೀಪ್ ನಿರೂಪಿಸಿದರು.