Friday, May 31, 2024
Google search engine
Homeಜಸ್ಟ್ ನ್ಯೂಸ್ಕಲಿಯುವ ಕೆಲಸಕ್ಕೆ ಮುಕ್ತಾಯವಿಲ್ಲ; ಪ್ರೊ.ಎಚ್.ಎಸ್.ರಾಘವೇಂದ್ರ ರಾವ್

ಕಲಿಯುವ ಕೆಲಸಕ್ಕೆ ಮುಕ್ತಾಯವಿಲ್ಲ; ಪ್ರೊ.ಎಚ್.ಎಸ್.ರಾಘವೇಂದ್ರ ರಾವ್

Publicstory

ತುಮಕೂರು: ನಿಜವಾದ ವಿಮರ್ಶೆ ಲೋಕ ವಿಮರ್ಶೆ ಅಲ್ಲ, ಆತ್ಮವಿಮರ್ಶೆ. ಸಮಾನತೆ ಮತ್ತು ಒಳ ಮನಸ್ಸು ನಮ್ಮ ಗುರುವಾಗಬೇಕು ಎಂದು ಸಾಹಿತ್ಯ ವಿಮರ್ಶಕ ಪ್ರೊ.ಎಚ್.ಎಸ್.ರಾಘವೇಂದ್ರ ರಾವ್ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ವಿಶ್ವವಿದ್ಯಾನಿಲಯ ಪ್ರಸಾರಂಗದಿಂದ ಆಯೋಜಿಸಿದ್ದ ‘ತಿಳಿವ ತೇಜದ ನಡೆ ವಿಶೇಷ ಉಪನ್ಯಾಸ ಮಾಲೆ’ ಕಾರ್ಯಕ್ರಮದಲ್ಲಿ ‘ನವೋದಯ ಕಾವ್ಯ: ಅಧ್ಯಯನದ ಬಗೆ’ ವಿಷಯ ಕುರಿತು ಮಾತನಾಡಿದ ವಿಮರ್ಶಕ ಪ್ರೊ. ಎಚ್. ಎಸ್ ರಾಘವೇಂದ್ರರಾವ್ ಕಲಿಯುವ ಕೆಲಸಕ್ಕೆ ಮುಕ್ತಾಯವಿಲ್ಲ. ಕಲೆ, ಸಾಹಿತ್ಯ ಈ ಎಲ್ಲವೂ ನಮ್ಮನ್ನು ನಾವು ನೋಡಿಕೊಳ್ಳುವ ಕನ್ನಡಿಗಳು ಇದನ್ನು ಅರ್ಥ ಮಾಡಿಕೊಂಡಾಗ ಎಲ್ಲಾ ಕಾಲಘಟ್ಟದ ಕಾವ್ಯಗಳೂ ಅರ್ಥವಾಗುತ್ತವೆ. ಪ್ರತಿಯೊಬ್ಬ ಕವಿಯ ಮೂಲಕವೂ ಕನ್ನಡ ಹುಟ್ಟುತ್ತದೆ. ಕನ್ನಡ ಎಂಬುದು ಬರಿಯ ಭಾಷೆಯಲ್ಲ. ಕನ್ನಡ ಎಂದರೆ ಬದುಕು, ಜಗತ್ತನ್ನು ಕಟ್ಟಿಕೊಡುವ ರೀತಿ. ಸಂಸ್ಕೃತಿ ಎಂಬುದಕ್ಕೆ ಭಾಷೆ ಉಪಕರಣವೇ ಹೊರತು ಅದೇ ಸರ್ವಸ್ವವಲ್ಲ ಎಂದರು.

ಓದು ಒಂದು ಬಗೆಯಾದರೆ ಅಧ್ಯಯನ ಮತ್ತೊಂದು ಬಗೆ. ಅಧ್ಯಯನ ಮಾಡಲು ಹೊರಟಾಗ ಯಾವ ಸಂಗತಿಗಳು ಸಹಕಾರಿಯಾಗುತ್ತವೆ, ಅಡ್ಡಿಯಾಗುತ್ತವೆ ಮತ್ತು ಅವುಗಳನ್ನು ಮೀರುವುದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕು. ಇದೇ ಸರಿ, ಇಷ್ಟೇ ಓದಬೇಕು ಎಂದು ಒತ್ತಾಯ ಮಾಡಿದರೆ ಅದು ಫ್ಯಾಸಿಸಂನ ಭಾಗ. ಕಾವ್ಯವು ನಮ್ಮ ಅನುಭವ ಭಾವ, ವಿಚಾರ, ಲೋಕಕ್ಕೆ ತಕ್ಕಂತೆ ಬದಲಾಗುತ್ತದೆ ಅಥವಾ ಹೊಸತೊಂದು ಸೇರ್ಪಡೆಯಾಗುತ್ತದೆ. ಇದು ಅಧ್ಯಯನದ ಬಹುಮುಖ ಮತ್ತು ಚಲನ ಶೀಲತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಕವಿತೆ ಕಾವ್ಯಗಳಿಗೆ ದಲಿತ, ನವೋದಯ, ನವ್ಯ, ಬಂಡಾಯ, ಪ್ರಗತಿಶೀಲ ಎಂಬ ಚಳವಳಿಗಳ ಹಣೆ ಪಟ್ಟಿಯನ್ನು ಅಂಟಿಸುತ್ತೇವೆ. ಆದರೆ ಸಾಮಾಜಿಕ ಸಖ್ಯ ದಾರುಣವಾಗಿದ್ದಾಗಲೂ ಕವಿತೆ ಎನ್ನುವುದು ಅದನ್ನು ಮೀರಲು, ವಿಮರ್ಶಿಸಲು ಪ್ರಯತ್ನಿಸುತ್ತದೆ. ಸಮಾಜದ ಸ್ಥಿತಿ, ಸಂಸ್ಕೃತಿ ಹಾಗೂ ಕವಿತೆಗೂ ಇರುವ ಸಂಬಂಧವನ್ನು ನಾವು ಅರಿತಿರಬೇಕು. ನಾವು ಕೂಡ ವಿದ್ಯಾರ್ಥಿ ಎನ್ನುವ ಭಾವವನ್ನು ಯಾವಾಗ ಮರೆಯುತ್ತೇವೆ ಆಗ ಅಧ್ಯಾಪಕರಾಗಿ ಉಳಿಯುವುದಿಲ್ಲ. ಇದನ್ನು ಅರಿತರೆ ಕಲಿಸುವ ಹಕ್ಕು ಪಡೆಯುತ್ತೇವೆ. ತಾವು ಮಾಡುವ ಕೆಲಸವನ್ನು ಪ್ರೀತಿಸಬೇಕು ಹಾಗೂ ಆಸಕ್ತಿ ಮತ್ತು ಕರ್ತವ್ಯದ ರೂಪದಲ್ಲಿ ನೋಡಬೇಕಾಗುತ್ತದೆ ಎಂದರು.

ಎಲ್ಲರೂ ಕವಿತೆಗೆ ಮರುಳರಾಗಿರಬೇಕು ಎಂಬುದನ್ನು ಯಾರೂ ಅಪೇಕ್ಷೆ ಪಡಬೇಕಾದ್ದಿಲ್ಲ. ಯಾವುದೇ ಕಾವ್ಯ ನಿಶ್ಚಿತವಾದ ಅರ್ಥವನ್ನು ಒಳಗೊಂಡಿರುವುದಿಲ್ಲ. ಓದದೇ, ಕೇಳದೆ ಬರುವ ಆತ್ಮವಿಶ್ವಾಸ ಅಹಂಕಾರವಾಗಿರುತ್ತದೆ. ನಾವು ಸ್ವಂತವಾಗಬೇಕಾದರೆ ಲೋಕಾಂತವನ್ನು ಒಳಗೊಳ್ಳಬೇಕು. ಇದು ಕಾವ್ಯಕ್ಕೂ ಅನ್ವಯಿಸುತ್ತದೆ. ಕವಿತೆಯಲ್ಲಿ ಭಾಷೆ ಬದಲಾಗುತ್ತದೆ. ಪ್ರತಿಯೊಂದು ಕವಿತೆಯೂ ಕವಿಯನ್ನು ಮತ್ತೆ ಮತ್ತೆ ಹುಟ್ಟಿಸುತ್ತದೆ. ಕುವೆಂಪು ಅವರು ‘ರಾಮಾಯಣ ದರ್ಶನಂ’ ಕಟ್ಟಿಕೊಟ್ಟರು ಮತ್ತು ಅದರೊಂದಿಗೆ ತಮ್ಮನ್ನೂ ಕಟ್ಟಿಕೊಂಡರು ಎಂದು ತಿಳಿಸಿದರು.

ಪಾಠ ಮಾಡುವಾಗ ಕವಿಯ ಅರ್ಥ ಒಂದು ಬಗೆಯಾದರೆ, ಅಧ್ಯಾಪಕನ ಅರ್ಥ ಇನ್ನೊಂದು, ವಿದ್ಯಾರ್ಥಿಗಳ ಅನುಭವ ಮತ್ತು ದೃಷ್ಠಿಕೋನದಿಂದ ಹುಟ್ಟುವ ಅರ್ಥ ಹಾಗೂ ವಿದ್ಯಾರ್ಥಿ ತಾನೇ ಓದಿ ತನಗೆ ದಕ್ಕಿದಷ್ಟು ಅರ್ಥ ಮಾಡಿಕೊಳ್ಳುವುದು ಮತ್ತೊಂದು ಬಗೆ. ಇದರಲ್ಲಿ ಅಂತಿಮ ಅರ್ಥ ಹೇಗೆ ಹುಟ್ಟುತ್ತದೆ? ಎಂದು ಪ್ರಶ್ನಿಸಿದರು. ಸಾಹಿತ್ಯವೆಂದರೆ ಧರ್ಮ ಗ್ರಂಥವಲ್ಲ. ಅದು ಗೋಡೆಗಳನ್ನು ನಿರ್ಮಿಸುವುದಿಲ್ಲ, ಕೆಡವುತ್ತದೆ. ನಮ್ಮ ಓದು, ಕಲಿಕೆ, ಬರವಣಿಗೆ ಕಾಲದ ಒತ್ತಡವನ್ನು ಮೀರಬೇಕು ಹಾಗೂ ಮೇಷ್ಟ್ರುಗಳಿಗೆ ನಿಷ್ಪಕ್ಷಪಾತ ಗುಣಬೇಕು ಎಂದು ಅಭಿಪ್ರಾಯಪಟ್ಟರು. ಉಪನ್ಯಾಸದ ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದವೂ ನಡೆಯಿತು.

ಪ್ರಸಾರಾಂಗ ನಿರ್ದೇಶಕರಾದ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಯವರು ಸ್ವಾಗತಿಸಿದರು. ಸಂಶೋಧನಾರ್ಥಿ ರಂಗಸ್ವಾಮಿ ಹೆಚ್. ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?