ಬೆಂಗಳೂರು: ಕೃಷಿ ರಂಗ ಎದುರಿಸುತ್ತಿರುವ ನಾನಾ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದು ಹೆಸರಾಂತ ಚಿತ್ರ ನಿರ್ದೇಶಕ ಕೇಸರಿ ಹರವೂ ಪ್ರತಿಪಾದಿಸಿದ್ದಾರೆ.
ಅವರು ನಗರದ ಬಹುರೂಪಿ ಬುಕ್ ಹಬ್ ನಲ್ಲಿಂದು ಶ್ರೀ ಪಡ್ರೆ ಅವರ ‘ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ’ ಹಾಗೂ ಆನಂದತೀರ್ಥ ಪ್ಯಾಟಿ ಅವರ ‘ಥಾಯ್ಲೆಂಡ್ ಕೃಷಿ ಪ್ರವಾಸ’ ಪುಸ್ತಕಗಳನ್ನು ಬಿಡುಗಡೆಮಾಡಿ ಮಾತನಾಡಿ, ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಮುಷ್ಕರದ ಆಚೆಗೂ ಗಮನಿಸಬೇಕಿದೆ ಎಂದರು. ‘ಒಂದೊಮ್ಮೆ ಕೇಂದ್ರ ಸರಕಾರ ನೂತನ ಮಸೂದೆಗಳನ್ನು ಹಿಂಪಡೆದುಕೊಂಡರೂ ಕೃಷಿ ರಂಗದ ಸಮಸ್ಯೆಗಳು ಬಗೆಹರಿಯುವುದಿಲ್ಲ; ರೈತರು ವಿವಿಧ ಒಳಸುರಿಗಳಿಗಾಗಿ ಬಹುರಾಷ್ಟ್ರೀಯ ಕಂಪೆನಿಗಳನ್ನು ನೆಚ್ಚಿಕೊಳ್ಳುವುದು ಮುಂದುವರಿಯುತ್ತದೆ. ಹೀಗಾಗಿ ರೈತರ ಪ್ರತಿಭಟನೆ ಕೊನೆಗೊಂಡರೂ ಅವರ ಸಂಕಷ್ಟಗಳಿಗೆ ಪರಿಹಾರ ಯಾವುದು ಎಂಬ ಬಗ್ಗೆ ಆಲೋಚಿಸಬೇಕಿದೆ ಎಂದರು.
ಹೇರಳ ಪ್ರಮಾಣದಲ್ಲಿ ರಸಗೊಬ್ಬರ ಮತ್ತು ಪೀಡೆನಾಶಕಗಳನ್ನು ಆಮದುಮಾಡಿಕೊಳ್ಳುತ್ತಿರುವ ಥಾಯ್ಲೆಂಡಿನಲ್ಲಿ ತುಂಬ ಸಣ್ಣ ಮಟ್ಟದಲ್ಲಿ ಸಾವಯವ ಕೃಷಿ ಕೈಗೊಂಡಿದ್ದು, ಈ ವಲಯದಲ್ಲಿ ಹಲವಾರು ನಾವಿನ್ಯಪೂರ್ಣ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರಿಂದ ನಾವು ಕಲಿಯುವುದು ಬಹಳಷ್ಟಿದೆ; ಪ್ಯಾಟಿ ಅವರ ಕೃತಿ ಈ ಬಗ್ಗೆ ಬೆಳಕುಚೆಲ್ಲುತ್ತದೆ ಎಂದರು.
ಹಿರಿಯ ಬರಹಗಾರ ನಾಗೇಶ ಹೆಗಡೆ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರೇರಣಾದಾಯಕ ಪುಸ್ತಕಗಳು ಗ್ರಾಮೀಣ ಯುವಜನತೆಗೆ ಹೆಚ್ಚುಹೆಚ್ಚಾಗಿ ತಲುಪಬೇಕಿದೆ; ಈ ಮೂಲಕ ಅವರು ನಗರಗಳತ್ತ ಮುಖಮಾಡುವ ಬದಲು ಗ್ರಾಮೀಣ ಭಾಗದಲ್ಲೇ ಉಳಿಯುವಂತೆ ಪ್ರೋತ್ಸಾಹಿಸಬೇಕು ಎಂದರು.
ಹಾಸನ ಕೃಷಿ ಕಾಲೇಜಿನ ಡೀನ್ ಡಾ. ಎನ್. ದೇವಕುಮಾರ್ ಮಾತನಾಡಿ, ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಇಂತಹ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು; ಇದರಿಂದ ಕೃಷಿ ರಂಗದ ಹೊಸ ವಿದ್ಯಮಾನಗಳ ಬಗ್ಗೆ ಅರಿವಿನ ಜತೆಗೆ ಪರಿಣಾಮಕಾರಿಯಾಗಿ ಬರೆಯುವ ಕ್ರಮದ ಕುರಿತು ಕೂಡ ಮಾರ್ಗದರ್ಶನ ದೊರೆಯುತ್ತದೆ ಎಂದರು.
‘ಸಹಜ ಸಮೃದ್ಧ’ ನಿರ್ದೇಶಕ ಜಿ. ಕೃಷ್ಣಪ್ರಸಾದ್ ‘ಮೌಲ್ಯವರ್ಧನೆ ಹಾಗೂ ನೇರ ಮಾರುಕಟ್ಟೆ’ ಬಗ್ಗೆ ಸಂವಾದ ನಡೆಸಿಕೊಟ್ಟರು. ಕೋವಿಡ್ ಸಂದರ್ಭದಲ್ಲಿ ರೈತ ಸಮುದಾಯ ಹೆಚ್ಚಿನ ಸಂಕಟ ಅನುಭವಿಸಿತು. ಆದರೂ ಮೌಲ್ಯವರ್ಧನೆ, ಬೀಜೋತ್ಪಾದನೆ, ಗೃಹೋದ್ಯಮದಂತಹ ಚಟುವಟಿಕೆಗಳು ಅಲ್ಲಲ್ಲಿ ತುಸು ನೆಮ್ಮದಿಯನ್ನು ತಂದುಕೊಟ್ಟವು ಎಂದರು.
ಪತ್ರಕರ್ತ ಗಾಣಧಾಳು ಶ್ರೀಕಂಠ ಪುಸ್ತಕ ಪರಿಚಯ ಮಾಡಿದರು. ಬಹುರೂಪಿ ಬುಕ್ ಹಬ್ ನಿರ್ದೇಶಕ ಜಿ.ಎನ್. ಮೋಹನ್, ಪುಸ್ತಕ ಸಂಸ್ಕೃತಿಯನ್ನು ಹೆಚ್ಚು ವ್ಯವಸ್ಥಿತ ಮತ್ತು ವೈವಿಧ್ಯಮಯವಾಗಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
ಲೇಖಕ ಆನಂದತೀರ್ಥ ಪ್ಯಾಟಿ, ಡಾ.ಜಿ. ಕರುಣಾಕರನ್, ವಿಶಾಲಾಕ್ಷಿ ಶರ್ಮ, ಸಾವಯವ ಕೃಷಿಕರಾದ ಶಿವನಾಪುರ ರಮೇಶ್, ನಂದೀಶ್ ಚುರ್ಚಿಗುಂಡಿ, ಶಿವಪುತ್ರ ಚೌಧರಿ, ಶ್ರೀಪಾದ ರಾಜ ಮುರಡಿ ಮತ್ತಿತರರು ಉಪಸ್ಥಿತರಿದ್ದರು.
***