ಡಾ.ಶ್ವೇತಾರಾಣಿ ಎಚ್.
ತುಮಕೂರು: ತುಮಕೂರು, ಗುಬ್ಬಿ ತಾಲ್ಲೂಕಿನ ಕೊರೊನಾ ನಿಯಂತ್ರಣದ ಬಿಡುವಿಲ್ಲದ ಜವಾಬ್ದಾರಿ ನಡುವೆಯೂ ಜಿಲ್ಲಾಸ್ಪತ್ರೆಯ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ, ಹಿರಿಯ ವೈದ್ಯೆ ಡಾ.ರಜನಿ ಶುಕ್ರವಾರ ಗಾಂಧಿ ಜಯಂತಿಯಂದು ಸ್ವಚ್ಛತೆಯ ಶ್ರಮದಾನದ ಮೂಲಕ ಗಮನ ಸೆಳೆದರು.
ಕೊರೊನಾ ಸೋಂಕು ವ್ಯಾಪಕವಾಗಿರುವ ಕಾರಣ ಈ ಗಾಂಧಿಜಯಂತಿಯಂದು ಶ್ರಮದಾನದ ಕೆಲಸ ಇಲ್ಲವಾಗಿದೆಸುತ್ತಮುತ್ತಲ ಪ್ರದೇಶದ ಕಸ ಕಡ್ಡಿ ತೆಗೆದರು. ಸುತ್ತಲಿನ ವಾತಾವರಣ ಗಮನ ಸೆಳೆಯುವಂತೆ ಮಾಡಿದರು.ಅವರ ಕೆಲಸ ನೋಡಿ ಆಸ್ಪತ್ರೆಗೆ ಬಂದಿದ್ದ ರೋಗಿಗಳು, ಜನರು ಸಹ ಖುಷಿಪಟ್ಟರು. ಪೂಜೆ ಸಲ್ಲಿಸಿದ ಬಳಿಕ ತಮ್ಮ ಸಿಬ್ಬಂದಿ ತಂಡ ಕಟ್ಟಿಕೊಂಡು ತರಬೇತಿ ಕೇಂದ್ರ ಸುತ್ತ ಕಸ ಕಡ್ಡಿ, ಕಳೆ ತೆಗೆದು ಸ್ವಚ್ಛಗೊಳಿಸಿದರು.
ಇದೇನಪ್ಪ, ಕೊರೊನಾ ಭಯ ಇಲ್ಲವೇ ಇವರಿಗೆ ಎಂದು ಅಲ್ಲಿದ್ದ ಕೆಲವರು ಹೇಳಿದರೆ ಮತ್ತಷ್ಟು ಮಂದಿ ಮೆಚ್ಚುಗೆಯಿಂದ ಮನದುಂಬಿ ಇವರ ಕೆಲಸ ನೋಡಿದರು.
ತುಮಕೂರು ಜಿಲ್ಲಾಸ್ಪ ತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿದ್ದರೂ ಆಸ್ಪತ್ರೆಯ ಒಳ್ಳೆಯ ಚಿಕಿತ್ಸೆಗೆ ಹೆಸರಾಗುವಂತೆ ಮಾಡಿದ್ದರು. ಅದರಲ್ಲೂ ಗರ್ಭಿಣಿ, ಬಾಣಂತಿಯರ ಆರೈಕೆಗೆ ಆಸ್ಪತ್ರೆ ಇವರ ಕಾಲದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಲಸಿಕೆಗಳ ಆಂದೋಲನದಲ್ಲಿ ಗುರಿ ಸಾಧಿಸುವಲ್ಲಿ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದರು.
ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿದ್ದು ಕೊರೊನಾ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ಹೊತ್ತಿರುವ ಅವರು ಕೊರೊನಾ ರೋಗಿಗಳ ಪಾಲಿಗೂ ದೇವರೇ ಆಗಿ ಹೋಗಿದ್ದಾರೆ.
ಕೊರೊನಾ ರೋಗಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುತ್ತಿರುವ, ಸುರಕ್ಷಿತ ಮಾರ್ಗ ಅನುಸರಿಸುತ್ತಾ ರೋಗಿಗಳನ್ನು ಮುಟ್ಟಿ ಧೈರ್ಯ ಹೇಳುತ್ತಿರುವುದು ಅವರ ಹೆಗ್ಗಳಿಕೆಯಾಗಿದೆ.
ದೂರದಲ್ಲಿ ನಿಲ್ಲಿಸಿ ಮಾತ್ರೆ ಕೊಡುವುದಕ್ಕೂ ಸುರಕ್ಷೆಯನ್ನು ಇಟ್ಟುಕೊಂಡು ಅವರನ್ನು ಮಾತನಾಡಿಸಿ, ಮುಟ್ಟಿ ಚಿಕಿತ್ಸೆ ನೀಡುವುದಕ್ಕೂ ವ್ಯತ್ಯಾಸವಿದೆ. ಕೊರೊನಾ ಬಂದವರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ನಾವು ಸಹ ಅವರನ್ನು ದೂರ ಇಟ್ಟರೆ ಮತ್ತಷ್ಟು ಭಯ ಬೀಳುತ್ತಾರೆ. ಹೀಗಾಗಿ ಅವರಿಗೆ ಮನದಾಳದ ಆರೈಕೆ ಮಾಡುತ್ತೇನೆ. ರೋಗಿಗಳೇ ನನಗೆ ದೇವರಿದ್ದಂತೆ ಎನ್ನುತ್ತಾರೆ ಡಾ. ರಜನಿಯವರು.
ಸ್ವಚ್ಛತೆ, ಸಮತೋಲಿತ ಆಹಾರ, ಮಾಸ್ಕ್ ಧರಿಸುವುದು, ಕೈ ತೊಳೆಯುವುದು, ದೈಹಿಕವಾಗಿ ಅಂತರ ಕಾಪಾಡಿಕೊಂಡರೆ ಕೊರೊನಾ ಬರುವುದಿಲ್ಲ. ಪರೀಕ್ಷೆ ಮಾಡಿಸಿಕೊಳ್ಳುವುದರಿಂದಲೂ ಮತ್ತೊಬ್ಬರಿಗೆ ಹರಡುವುದನ್ನು ತಡೆಯಬಹುದು.ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಸಹ ಮಾಡುತ್ತಿರುವುದಾಗಿ ತಿಳಿಸಿದರು.
ರೋಗಿಗಳಿಗೆ ಫೋನ್ ಮೂಲಕವೂ ಸ್ಥೈರ್ಯ ನೀಡುತ್ತಿದ್ದಾರೆ. ಎಷ್ಟೇ ಒತ್ತಡ ಇದ್ದರೂ ಕೊರೊನಾ ರೋಗಿಗಳು ಕರೆ ಮಾಡಿದರೆ ಅವರಿಗೆ ಉತ್ತರಿಸಿ, ಸಲಹೆ ನೀಡುತ್ತಿದ್ದಾರೆ.
ನನಗೆ ತೊಂದರೆ ಆಗುತ್ತಿದೆ ಎನ್ನುವುದು ಮುಖ್ಯವಲ್ಲ. ಕೊರೊನಾ ರೋಗಿಗಳು ಪ್ರತಿ ಕ್ಷಣವೂ ಆತಂಕದಲ್ಲಿರುತ್ತಾರೆ. ಹೀಗಾಗಿ ಯಾರೇ ಕರೆ ಮಾಡಿದರೂ ಉತ್ತರಿಸುತ್ತೇನೆ. ಈ ಸಂದರ್ಭದಲ್ಲಿ ಇಂತಹ ಕೆಲಸ ಮಾಡುವುದರಲ್ಲೇ ತೃಪ್ತಿ ಇದೆ ಎಂದರು.
ತುಮಕೂರು ಮತ್ತು ಗುಬ್ಬಿ ತಾಲ್ಲೂಕಿನ ರೋಗಿಗಳಿಗೆ ಇವರೀಗ ವರದಾನವಾಗಿದ್ದಾರೆ.
ಡಾ.ರಜನಿ ಮೇಡಂ ಬಳಿ ಹೋದಾಗ ಮುಟ್ಟಿ ನೋಡಿದರು. ಮತ್ತಷ್ಟು ಪರೀಕ್ಷೆ ಮಾಡಿಸಿದರು. ಈಗ ನನಗೆ ನೆಮ್ಮದಿ ಸಿಕ್ಕಿದೆ. ದೇಹ ಸುಧಾರಿಸಿದೆ. ಇಂತಹ ವೈದ್ಯರೇ ನಿಜವಾದ ದೇವರುಗಳು ಎಂದು ರೋಗಿಯೊಬ್ಬರು ಸಂತಸ ಹಂಚಿಕೊಂಡರು.
ಅಂದಹಾಗೆ, ಮೇಡಂ ಬರೀ ಡಾಕ್ಟರ್ ಅಷ್ಟೇ ಅಲ್ಲ, ಒಳ್ಳೆಯ ಕವಯತ್ರಿಯೂ ಹೌದು. ಹಲವು ಮಹತ್ವದ ಕವನಗಳನ್ನು ಸಹ ಬರೆದಿದ್ದಾರೆ. ಟಿ.ವಿ., ರೇಡಿಯೊಗಳಲ್ಲಿ ಅನೇಕ ಆರೋಗ್ಯ ಸಲಹಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.