ಭಾರತ ಗಡಿಯಲ್ಲಿ ಸೈನಿಕರ ಡೇರೆ ಸ್ಥಾಪಿಸಿರುವ ಚೀನಾ
ನವದೆಹಲಿ: ಭಾರತ ಚೀನಾ ನಡುವೆ ದಿನೇ ದಿನೇ ಪರಿಸ್ಥಿತಿ ವಿಷಮಿಸುತ್ತಿದ್ದು, ಭಾರತದಲ್ಲಿರುವ ತನ್ನ ಪ್ರಜೆಗಳನ್ನು ವಾಪಸ್ ಬರುವಂತೆ ಚೀನಾ ಸೋಮವಾರ ಸೂಚಿಸಿದೆ.
ಭಾರತದಲ್ಲಿರುವ ತನ್ನ ದೇಶದ ಪ್ರಜೆಗಳ ನಿಖರ ಮಾಹಿತಿ ಹೊಂದಿರುವುದಾಗಿ ತಿಳಿಸಿರುವ ಚೀನಾ ರಾಯಭಾರ ಕಚೇರಿ, ವಿಶೇಷ ವಿಮಾನದ ವ್ಯವಸ್ಥೆ ಕಲ್ಪಿಸುತ್ತಿದ್ದು, ತನ್ನ ದೇಶದ ಪ್ರಜೆಗಳನ್ನು ವಾಪಸ್ ತೆರಳಲು ಸಿದ್ಧರಾಗಿರುವಂತೆ ತಿಳಿಸಿದೆ ಎಂದು ಹಲವಾರು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಮೇ 27ರಂದು ಭಾರತದಿಂದ ವಾಪಸ್ ಮರಳಲು ತನ್ನ ಪ್ರಜೆಗಳಿಗೆ ಸೂಚಿಸಿರುವ ಚೀನಾ.ಇದರಲ್ಲಿ ಪ್ರವಾಸಿ, ಉದ್ಯಮ, ವ್ಯಾಸಂಗ ಹಾಗೂ ತೀರ್ಥಯಾತ್ರೆ ವೀಸಾ ಪಡೆದಿರುವ ಪ್ರಜೆಗಳಿಗೆ ತಿಳಿಸಿದೆ.
ಆದರೆ ಚೀನಾ ತನ್ನ ವಿಶೇಷ ವಿಮಾನ ಎಲ್ಲಿಂದ ಎಲ್ಲಿಗೆ ಹೋಗುತ್ತದೆ ಎಂದು ತಿಳಿಸಿಲ್ಲ.
ಭಾರತ- ಚೀನಾ ಗಡಿಯಲ್ಲಿ ಸೇನೆ ಜಮಾವಣೆಗೊಂಡ ನಂತರ ದಿನೇ ದಿನೇ ಎರಡೂ ದೇಶಗಳ ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು ಈ ಆದೇಶಕ್ಕೆ ಕಾರಣ ಎನ್ನಲಾಗಿದೆ.
ಇದರ ಜೊತೆ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೊರೊನಾ ರೋಗಿಗಳ ಸಂಖ್ಯೆಯೂ ಕಾರಣ ಎನ್ನಲಾಗುತ್ತಿದೆ.
ಇದಲ್ಲದೇ ಪ್ರಪಂಚದಾದ್ಯಂತ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ವಿಶ್ವದ ಹಲವಾರು ದೇಶಗಳು ಚೀನಾವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದು, ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಚೀನಾ, ಪ್ರಪಂಚದ ದೇಶಗಳ ದೃಷ್ಠಿಯನ್ನು ಬೇರೆಡೆಗೆ ತಿರುಗಿಸಲು ಸೈನ್ಯ ಜಮಾವಣೆ ತಂತ್ರ ಅನುಸರಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದೊಂದಿಗೆ ಅತೀ ದೊಡ್ಡ ಗಡಿ ಹೊಂದಿರುವ ಚೀನಾ ತನ್ನ ಜೊತೆಗೆ ಭಾರತದ ದಾಯಾದಿ ದೇಶಗಳಾದ ನೇಪಾಳ ಹಾಗೂ ಪಾಕಿಸ್ತಾನವನ್ನು ಎತ್ತಿಕಟ್ಟುತ್ತಿರುವುದು ಭಾರತ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.