ವೈ.ಎನ್.ಹೊಸಕೋಟೆ : ತಾಲ್ಲೂಕಿನಲ್ಲಿ ಗಿಡಮರಗಳನ್ನು ಹೆಚ್ಚು ಹೆಚ್ಚು ಬೆಳೆಸುವುದರಿಂದ ಜನತೆಯ ಆರೋಗ್ಯವು ಬೆಳೆಯುತ್ತದೆ ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಮರಿದಾಸನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವನದರ್ಶನ ಪ್ರವಾಸಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇದೆ. ಇದಕ್ಕೆ ಮರಗಿಡಗಳ ಕಡಿಮೆ ಇರುವುದು ಒಂದು ಕಾರಣ. ಬೇರೆ ಬೇರೆ ಉದ್ದೇಶಕ್ಕಾಗಿ ಜನತೆ ಮರಗಿಡಗಳನ್ನು ಕಡಿದು ನಾಶ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಮಳೆಯ ಅಭಾವ ಕಡಿಮೆ ಇದೆ. ಇದನ್ನು ಅರಿತು ಮಕ್ಕಳು ಗಿಡಗಳ ಮಹತ್ವವನ್ನು ಅರಿಯಬೇಕು ಮತ್ತು ಸಾದ್ಯವಾದಷ್ಟು ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದರು.
ತಿಪಟೂರು ಅರಣ್ಯ ವಿಭಾಗದ ಅಧಿಕಾರಿ ಶ್ರೀನಿವಾಸ್ ಮಾತನಾಡಿ ಮಕ್ಕಳಲ್ಲಿ ಗಿಡ-ಮರಗಳ ಅರಿವಿನ ಅವಶ್ಯಕತೆ ಇದೆ. ಅರಣ್ಯದ ಪ್ರಾಮುಖ್ಯತೆಯನ್ನು ಅರಿಯದಿದ್ದರೆ ಮುಂದಿನ ತಲೆಮಾರು ಅನಾರೋಗ್ಯ ಪೀಡಿತವಾಗಬೇಕಾಗುತದೆ. ಹಾಗಾಗಿ ಗಿಡಮರಗಳ ಮಹತ್ವವನ್ನು ಮನವರಿಕೆ ಮಾಡಲು ಅರಣ್ಯ ಇಲಾಖೆಯ ವತಿಯಿಂದ ವನದರ್ಶನ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಚಿತ್ರದುರ್ಗದ ಜೋಗಿಮಟ್ ಅರಣ್ಯ ಪ್ರದೇಶಕ್ಕೆ ವನದರ್ಶನಕ್ಕೆ ಕರೆದುಕೊಂಡು ಹೋಗಲಾಯಿತು.
ಗ್ರಾಮಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ, ತಾಲ್ಲೂಕು ವಲಯ ಅರಣ್ಯಾಧಿಕಾರಿ ಹೆಚ್.ಎಂ.ಸುರೇಶ್, ಉಪವಲಯ ಅರಣ್ಯಾಧಿಕಾರಿ ಬಸವರಾಜು ಮತ್ತು ಶರತ್ ಕುಮಾರ್, ಮುಖಂಡ ಅಂಜಿನನಾಯಕ, ಪ್ರಾಂಶುಪಾಲರಾದ ಸೀತಾಲಕ್ಷ್ಮಿ, ಮುಖ್ಯಶಿಕ್ಷಕರಾದ ರಾಜಗೋಪಾಲ್ ಮತ್ತು ಹನುಮಂತರಾಯಪ್ಪ, ಶಿಕ್ಷಕರು ಮತ್ತು ಪೋಷಕರು ಹಾಜರಿದ್ದರು.