Saturday, December 21, 2024
Google search engine
Homeಸಾಹಿತ್ಯ ಸಂವಾದಅಂತರಾಳಗಿರೀಶ್ ಕಾರ್ನಾಡ್ ಎಂಬ 'ಆಂಬ್ಯಾ ತಾಳ್ಯೋ'

ಗಿರೀಶ್ ಕಾರ್ನಾಡ್ ಎಂಬ ‘ಆಂಬ್ಯಾ ತಾಳ್ಯೋ’

ಜಿ.ಎನ್.ಮೋಹನ್


‘ಹುಷಾರು, ಒಮ್ಮೆ ಬಾಟಲಿಯಿಂದ ಅದನ್ನು ಹೊರಬಿಟ್ಟರೆ ಮತ್ತೆ ಒಳಗೆ ಸೇರಿಸುವುದು ಅಸಾಧ್ಯ’ ಎಂದವರು ಗಿರೀಶ್ ಕಾರ್ನಾಡ್.

ಅದು ೧೯೯೧.

ಆಗ ತಾನೆ ಲಾಲಕೃಷ್ಣ ಅಡ್ವಾಣಿ ಅವರು ತಮ್ಮ ಮಹತ್ವದ ಕನಸಾದ ರಥವನ್ನು ಹತ್ತಿ ಯಾತ್ರೆ ಹೊರಟಿದ್ದರು. ಅದೊಂದು ಸೂಚನೆಯೇನೋ ಎಂಬಂತೆ ಉತ್ತರ ಪ್ರದೇಶ, ಬಿಹಾರದ ಹಲವು ನಗರಗಳು ಬೆಂಕಿಯಲ್ಲಿ ಉರಿಯತೊಡಗಿದವು. ಹೆಂಗಸರು ಮಕ್ಕಳೆನ್ನದೆ ಕೋಮು ಹಿಂಸಾಚಾರ ತನ್ನ ಉರಿ ನಾಲಗೆಯನ್ನು ಚಾಚಿತು.

ಆಗಲೇ ಗಿರೀಶ್ ಕಾರ್ನಾಡ್ ಮಾತನಾಡಿದ್ದು- ‘ಕೋಮು ವಿಷ ಎನ್ನುವುದು ಬಾಟಲಿಯಲ್ಲಿರುವ ದೆವ್ವ ಅದನ್ನು ಮತ್ತೆ ಒಳಗೆ ಸೇರಿಸಿ ಬಂಧಿಸುವುದು ಕಷ್ಟ’ ಎಂದು.

ಹಾಗೆ ಹೇಳುವ ಕೆಲವೇ ದಿನಗಳ ಹಿಂದಷ್ಟೇ ಕೋಮುವಾದಿಗಳು ಕಾರ್ನಾಡರು ರಾಮ ಮಂದಿರದ ಬಗ್ಗೆ ನೀಡಿದ ಹೇಳಿಕೆಗಾಗಿ ಅವರ ಮನೆಯ ಮೇಲೆ ಕಲ್ಲು ತೂರಿದ್ದರು.

ಅದರಿಂದ ಒಂದಿಂಚೂ ವಿಚಲಿತರಾಗದೆ ಕಾರ್ನಾಡ್ ನೇರ ಎದ್ದು ‘ಏಕತೆಗಾಗಿ ನಾವು- ನೀವು’ ಎನ್ನುವ ಹೆಸರಲ್ಲಿ ನಡೆದ ಇಡೀ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಕಾರ್ನಾಡರೆಂದರೆ ಕಾರ್ನಾಡರೇ.. ಅವರಿಗೆ ಮಾತಿಗಿಂತಲೂ ಕೃತಿಯಲ್ಲಿ ಹೆಚ್ಚು ವಿಶ್ವಾಸವಿತ್ತು.

ಹಾಗಾಗಿ ಅವರು ನೇರವಾಗಿ ಹೆಜ್ಜೆ ಹಾಕಿ ಎದುರಿಗೆ ಹರಡಲಾಗಿದ್ದ ೨೦೦ ಅಡಿ ಕ್ಯಾನ್ವಾಸ್ ನಲ್ಲಿ ಬಣ್ಣದ ಗೆರೆ ಎಳೆದರು.

ಅವರು ಬರೆದದ್ದು ಪಿಕಾಸೋನ ಅತ್ಯಂತ ಜನಪ್ರಿಯ ‘ಗೆರ್ನಿಕಾ’ ಕೃತಿಯನ್ನು. ಸತ್ತ ಮಗುವನ್ನು ಕೈನಲ್ಲಿ ಹೊತ್ತುಕೊಂಡು ನಗರಗಳ ಶಾಂತಿಯನ್ನು ಕದಡಿ ಹಾಕುವಂತೆ ಅಳುತ್ತಿರುವ ತಾಯಿಯ ಚಿತ್ರ ಅದು. ಯುದ್ಧ ವಿರೋಧಕ್ಕೆ ರೂಪಕವಾಗಿ ನಿಂತ ಚಿತ್ರ.

ಕಾರ್ನಾಡರು ನಾಳೆಯ ಭವಿಷ್ಯವನ್ನು ಅರಿತವರಂತೆ ಹೇಳುತ್ತಾ ಹೋದರು- ‘ಒಂದು ಜಾತಿ ಅಥವಾ ಒಂದು ಧರ್ಮಕ್ಕೆ ಬುದ್ದಿ ಕಲಿಸುತ್ತೇವೆ ಎಂದು ಹೊರಟರೆ ಬುದ್ದಿ ಕಲಿಯುವುದು ಆ ಜಾತಿ, ಧರ್ಮ, ವರ್ಗವಲ್ಲ ಬದಲಿಗೆ ಅದು ಇಡೀ ಸಮಾಜವನ್ನೇ ದುರಂತದತ್ತ ಕೊಂಡೊಯ್ಯುತ್ತದೆ. ಕೊನೆಗೆ ನಮ್ಮ ಮಕ್ಕಳನ್ನೇ ಬಲಿ ತೆಗೆದುಕೊಳ್ಳುತ್ತದೆ’ ಎಂದರು.

ಕಾರ್ನಾಡ್ ಅವರ ಕೃತಿಗಳಿಗಾಗಿ ಎಷ್ಟು ಇಷ್ಟವೋ ಅದಕ್ಕಿಂತ ಒಂದು ತೂಕ ಈ ಕಾರಣಕ್ಕಾಗಿ ನನಗೆ ಇಷ್ಟ.

ನಿಸಾರ್ ಅಹ್ಮದ್ ರ ‘ನಾನೆಂಬ ಪರಕೀಯ’ ‘ರಂಗೋಲಿ ಮತ್ತು ಮಗ’ ಹೀಗೆ ತಣ್ಣನೆ ದನಿಯಲ್ಲಿ ಸಮಾಜದ ಮಧ್ಯೆ ಕಂಡೂ ಕಾಣದಂತೆ ಏಳುತ್ತಿರುವ ಗೋಡೆಗಳ ಬಗ್ಗೆ ಇದ್ದ ಕವಿತೆಗಳನ್ನು ಓದುತ್ತಿದ್ದ ದಿನಗಳು ಅವು. ಜೊತೆಗೆ ‘ಅಲ್ಲಾನೂ ಒಂದೇ, ಬೆನಕಾನೂ ಒಂದೇ..’ ಎಂದು ಬಿ ವಿ ಕಾರಂತರ ‘ಆಲಿಬಾಬಾ’ ನಾಟಕ ಬಿಟ್ಟುಕೊಟ್ಟಿತ್ತು.

ಹೀಗೆ ಸಮಾಜದ ಮಧ್ಯೆ ಏಳುತ್ತಿರುವ ಗೋಡೆಯನ್ನು ಕಾಲಕ್ಕೂ ಮೊದಲೇ ಕಂಡವರು ಗಿರೀಶ್ ಕಾರ್ನಾಡ್.

ಹಾಗಾಗಿಯೇ ಅವರು ಗೆರ್ನಿಕಾ ಕೃತಿ ರಚಿಸಿದ ನಂತರ ‘ಲೆಬನಾನ್ ನಲ್ಲಿ ಮುಸ್ಲಿಮರು ಹಾಗೂ ಕ್ರೈಸ್ತರ ನಡುವೆ ನಡೆದ ಹಿಂಸೆಯಿಂದ ಅಲ್ಲಿನ ನಾಲ್ಕು ವಿಶ್ವವಿದ್ಯಾಲಯಗಳು ಹಾಳಾದವು. ಹನ್ನೆರಡೂವರೆ ಲಕ್ಷದಷ್ಟಿದ್ದ ಜನಸಂಖ್ಯೆ ಅಪಾರ ಸಾವು ನೋವುಗಳಿಂದ ಎರಡೂವರೆ ಲಕ್ಷಕ್ಕೆ ಇಳಿದಿದೆ’ ಎಂದಿದ್ದರು.

ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ದಲ್ಲಿ ನೆಲಕ್ಕೆ ಕಿವಿಕೊಟ್ಟು ಎಲ್ಲೋ ದೂರ, ಬಹು ದೂರದಲ್ಲಿ ಹರಿದು ಬರುತ್ತಿರುವ ನೀರನ್ನು ಗುರುತಿಸುವವರಿದ್ದಾರೆ.

ನನಗೆ ಗಿರೀಶ್ ಕಾರ್ನಾಡ್ ಅರ್ಥವಾಗಿದ್ದು ಹಾಗೆ.

ಅವರು ನಾಟಕಗಳಲ್ಲಿ ಪುರಾಣ, ಚರಿತ್ರೆಯ ಪದರುಗಳನ್ನು ಬಿಡಿಸುತ್ತಾ ಹೋದರೆ ತಮ್ಮ ಮಾತು, ನಡೆಯಲ್ಲಿ ವರ್ತಮಾನದ ತಲ್ಲಣಗಳನ್ನು ಬಿಡಿಸಿಡುತ್ತಾ ಹೋದರು. ಅವರ ಚರಿತ್ರೆ, ಪುರಾಣದ ಮರು ವ್ಯಾಖ್ಯಾನ ಹಾಗೂ ಅವರ ಇಂದಿನ ಮಾತೆಲ್ಲವೂ ಒಟ್ಟಿಗೆ ದುಡಿಯುತ್ತಿದ್ದುದು ನಾಳೆಗೆ ಎಲ್ಲರಿಗೂ ನೆಮ್ಮದಿಯ ಬದುಕನ್ನು ಕಟ್ಟಿಕೊಡಬೇಕು ಎನ್ನುವುದರ ಕಡೆಗೆ.

ಕಾರ್ನಾಡರ ಕೃತಿಗಳು ಸಾಕಷ್ಟು ಚರ್ಚೆಗೆ ದಾರಿಮಾಡಿದ್ದವು. ಅದು ಅಂದೂ ಸಾಕಷ್ಟು ವಿರೋಧವನ್ನೂ ಎದುರಿಸಿತ್ತು. ಆದರೆ ಅಂದಿನ ಕಾಲ ‘ಟ್ರಾಲ್ ಫ್ಯಾಕ್ಟರಿ’ಗಳ ಕಾಲವಲ್ಲ. ಹಾಗಾಗಿ ಆಗಿನ ಚರ್ಚೆ ಮಾತು ಮಾತು ಮಥಿಸಿ ಬರುವ ನವನೀತಕ್ಕೆ ಒಂದಿಷ್ಟು ಕಾರಣವಾಗಿತ್ತು.

ಆದರೆ ಜಾಗತೀಕರಣ ಹಾಗೂ ನಮ್ಮ ಮೇಲೆ ಇನ್ನಿಲ್ಲದಷ್ಟು ಹಿಡಿತ ಸಾಧಿಸಿರುವ ತಾಂತ್ರಿಕತೆ ಮಾಧ್ಯಮದ ವಿನ್ಯಾಸವನ್ನೇ ಬದಲಿಸಿಹಾಕಿದೆ. ಜಾಗತೀಕರಣ ಸಮೂಹ ಪ್ರಜ್ಞೆಯನ್ನು ಇನ್ನಿಲ್ಲವಾಗಿಸುತ್ತಾ ಹೋದಾಗಲೇ ಎದ್ದು ಬಂದ ಭಿನ್ನ ಮಾಧ್ಯಮಗಳು ಅಸಹನೆಯ ಅಂಗಳಗಳಾಗಿವೆ.

ಅಸಹನೆ ಇಂದು ಬದುಕು, ಮಾಧ್ಯಮ, ರಾಜಕಾರಣ ಎಲ್ಲದರ ಕೇಂದ್ರ ಬಿಂದು. ಹಾಗಾಗಿಯೇ ಗಿರೀಶ್ ಕಾರ್ನಾಡರಿಗೆ ಹೆಚ್ಚು ಮಾತನಾಡಬೇಕಾದ ಅನಿವಾರ್ಯತೆ ಬಂತು. ಹಾಗಾಗಿಯೇ ಹೆಚ್ಚು ಅಸಹನೆಯನ್ನು ಎದುರಿಸಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಯಿತು.

ಮನೆಗೆ ಕಲ್ಲು ಹೊಡೆದವರನ್ನು ಕಂಡು ಹಿಡಿದುಬಿಡಬಹುದು. ಸೋಶಿಯಲ್ ಮೀಡಿಯಾದ ಮರೆಯಲ್ಲಿ ನಿಂತು ಎಸೆಯುವ ಅಸ್ತ್ರಗಳನ್ನು ಎದುರಿಸುವುದು ಹೇಗೆ ಎಂದು ಗೊತ್ತಾಗದೆ ತಬ್ಬಿಬ್ಬಾಗಿರುವ ದಿನಗಳು ಇವು.

ಕಾರ್ನಾಡರು ನನಗೆ ಹತ್ತಿರವಾಗಲು ಅವರು ಫಾದರ್ ಮಾರ್ಟಿನ್ ನೆಮ್ಯೂಲರ್ ಅವರ ಕವಿತೆಗೆ ವಿರುದ್ಧವಾಗಿ ಬದುಕಿದರು ಎನ್ನುವುದೂ ಮುಖ್ಯ ಕಾರಣ.

‘ಅವರು ಕೊನೆಗೆ ನಮ್ಮನ್ನೇ ಹುಡುಕಿ ಬಂದರು, ಆಗ ನಮ್ಮ ಪರವಾಗಿ ದನಿ ಎತ್ತುವವರು ಯಾರೂ ಇರಲಿಲ್ಲ’ ಎನ್ನುತ್ತದೆ ಕವಿತೆ.

ಇಲ್ಲ, ಕಾರ್ನಾಡರು ಹಾಗಲ್ಲ. ಅವರು ಇದ್ದಾರೆ ಅವರು ದನಿ ಎತ್ತುತ್ತಾರೆ ಎನ್ನುವ ಅಪಾರ ವಿಶ್ವಾಸ ಎಲ್ಲರಿಗೂ ಇತ್ತು.

ಅವರು ದನಿ ಎತ್ತುತ್ತಿದ್ದರು ಮಾತ್ರವಲ್ಲ ಅವರು ಈ ಒಳಿತಿನ ಪರವಾಗಿ ಮತ್ತೊಬ್ಬರೂ ಸಹಾ ದನಿ ಎತ್ತಲು ಕಾರಣರಾಗುತ್ತಿದ್ದರು.

‘ಶಿವ’ ನಾಟಕಕ್ಕೆ ಬಂದ ಬೆದರಿಕೆಯ ಹಿನ್ನೆಲೆಯಲ್ಲಿ ಆ ನಾಟಕವನ್ನು ಹಿಂದೆಗೆದುಕೊಂಡಾಗ ಕಾರ್ನಾಡರು ಇಲ್ಲ ಇದು ಮುಗಿಯಬೇಕಾದದ್ದು ಹೀಗಲ್ಲ ಎಂದು ಸ್ಪಷ್ಟವಾಗಿ ತಿಳಿದವರಾಗಿದ್ದರು.

ಹಾಗಾಗಿಯೇ ಆ ತಂಡದ ಮುಖ್ಯಸ್ಥರಿಗೆ ‘ಇದು ಈ ರೀತಿ ಅಂತ್ಯವಾಗಲು ನೀವು ಬಿಡಬಾರದಿತ್ತು. ನಾವು ಬೆದರಿಕೆಯ ವಿರುದ್ಧ ದನಿ ಎತ್ತದಿದ್ದರೆ ಅವರು ನಮ್ಮನ್ನು ಭಯಪಡಿಸುತ್ತಲೇ ಇರುತ್ತಾರೆ’ ಎಂದು ಅವರು ಮನಗಾಣುವಂತೆ ಮಾಡಿದ್ದರು.

ಖ್ಯಾತ ಸಂಗೀತಗಾರರಾದ ಟಿ ಎಂ ಕೃಷ್ಣ ಹೇಳುತ್ತಾರೆ- ‘ಕಲೆ ಮುಂದೊಡ್ಡುವ ಅನಾಮಿಕ ಬಾಗಿಲು, ಕಿಟಕಿಗಳ ಮೂಲಕ ನಾವು ಬದುಕನ್ನು ಅರ್ಥೈಸಿಕೊಳ್ಳುತ್ತೇವೆ. ಈ ಬಾಗಿಲು, ಕಿಟಕಿಗಳನ್ನು ತೆರೆದುಕೊಡುವ ಕೆಲಸ ಕಲಾವಿದನದ್ದು. ಆದರೆ ಗಿರೀಶ್ ಕಾರ್ನಾಡರು ಕೇವಲ ಆ ಬಾಗಿಲುಗಳನ್ನು ತೆರೆದುಕೊಡುವ ಕೆಲಸ ಮಾಡಲಿಲ್ಲ ಬದಲಿಗೆ ಕೆಲವನ್ನು ಮುರಿದರು ಕೂಡಾ’ ಎಂದು.

ಗಿರೀಶ್ ಕಾರ್ನಾಡ್ ನಾಟಕಗಳಲ್ಲಿ ಹೇಗೆ ಒಂದು ಕಥೆಯನ್ನೋ, ಪಾತ್ರವನ್ನೋ ಮುರಿದು ಕಟ್ಟುತ್ತಿದ್ದರೋ ಥೇಟ್ ಹಾಗೆಯೇ ತಮ್ಮ ಬದುಕಿನಲ್ಲೂ ಸಮಾಜ, ವ್ಯವಸ್ಥೆ ಈಗಾಗಲೇ ಕಟ್ಟಿಬಿಟ್ಟಿದ್ದ ಗೋಡೆಗಳನ್ನು ಕೆಡಹುತ್ತಲೇ ಹೋದರು.

ನನಗೆ ಕಾರ್ನಾಡರ ಬಗ್ಗೆ ಇರುವ ಒಂದು ಅಚ್ಚರಿಯೆಂದರೆ ಅವರು ಒಂದು ಕೃತಿ ರಚನೆಯ ಬಗ್ಗೆ ಹೇಗೆ ಸಾಕಷ್ಟು ಹೋಮ್ ವರ್ಕ್ ಮಾಡುತ್ತಿದ್ದರೋ ಹಾಗೆಯೇ ವಿವೇಕ್ ಶಾನಭಾಗ್ ಹೇಳುವಂತೆ ತಾವು ಕೈಗೆತ್ತಿಕೊಳ್ಳುತ್ತಿದ್ದ ಒಂದು ಕವಿತೆಯ ಅನುವಾದಕ್ಕೂ ಅಷ್ಟೇ ಹೋಮ್ ವರ್ಕ್ ಮಾಡುತ್ತಿದ್ದರು.

ಒಂದು ಕವಿತೆಯ ಬೆನ್ನತ್ತಲು ಅವರು ಆ ಕವಿಯ ಎಲ್ಲ ಕೃತಿಗಳ ಆಳಕ್ಕೆ ಇಳಿಯುತ್ತಿದ್ದರು.

ನನಗೆ ಅನಿಸುತ್ತದೆ ಅವರು ತಮ್ಮ ಬಗ್ಗೆ ಬರುವ ವಿರೋಧ, ಹತಾಶೆ, ಸಿಟ್ಟು, ಆರ್ಭಟಗಳನ್ನೂ ಸಹಾ ಅರ್ಥ ಮಾಡಿಕೊಳ್ಳಲು ಅಷ್ಟೇ ಹೋಮ್ ವರ್ಕ್ ಮಾಡುತ್ತಿದ್ದರು ಎಂದು.

ಇಲ್ಲದಿದ್ದರೆ ಕ್ಯಾ. ಗೋಪಿನಾಥ್ ಅವರು ಹೇಳುವಂತೆ ಗಿರೀಶ್ ಕಾರ್ನಾಡರು ‘ಜನರನ್ನು ಒಡೆಯುವ ಪ್ರಯತ್ನಗಳು ಸಹಾ ಪ್ರಜಾಪ್ರಭುತ್ವದ ಒಂದು ಭಾಗವೇ. ನಾವು ಅದನ್ನು ಎದುರಿಸಬೇಕು ಸೋಶಿಯಲ್ ಮೀಡಿಯಾಗಳಿಂದಾಗಿ ಆದು ವಿವಾದವೋ ಭಾವನಾತ್ಮಕ ಸಂಗತಿಯೋ ಆಗುತ್ತದೆ. ಅದನ್ನು ನಿಯಂತ್ರಿಸಲು ಬರುವುದಿಲ್ಲ. ಪ್ರಜಾಪ್ರಭುತ್ವ ಕೆಲಸ ಮಾಡುವುದೇ ಹಾಗೆ’ ಹೇಳಲು ಸಾಧ್ಯವಾಗುತ್ತಿರಲಿಲ್ಲ .

ಕವಿ ಎಕ್ಕುಂಡಿಯವರು ನನ್ನೊಂದಿಗೆ ಹೇಳುತ್ತಿದ್ದರು- ‘ನಾನು ಯೋಧನಾಗಿ ರಣರಂಗಕ್ಕೆ ಹೋಗಲಾಗಲಿಲ್ಲ. ಆದರೆ ಅವರಿಗೆ ಬೇಕಾದ ಕತ್ತಿ ಗುರಾಣಿಗಳನ್ನು ಮಾಡಿಕೊಟ್ಟೆ’.

ಗಿರೀಶ್ ಕಾರ್ನಾಡ್ ಅವರನ್ನು ಅವರಿಲ್ಲದ ಈ ಕಾಲದಲ್ಲಿ ನೆನಪಿಸಿಕೊಳ್ಳುವಾಗ ನನಗೆ ಸ್ಪಷ್ಟವಾಗುತ್ತಿರುವುದು- ಅವರು ಯೋಧರೂ ಆಗಿದ್ದರು ಹಾಗೂ ಅವರು ಯೋಧರಿಗೆ ಬೇಕಾದ ಕತ್ತಿ ಗುರಾಣಿಗಳನ್ನೂ ಮಾಡಿಕೊಟ್ಟರು.

ಗಿರೀಶ್ ಕಾರ್ನಾಡ್ ಅಂತಹ ನಂಬುಗೆಯ ನೆರಳಾಗಿದ್ದರು. ಅಷ್ಟೇ ಅಲ್ಲ ಕಾರ್ಮೋಡ ಆವರಿಸುವ ಸಂದರ್ಭದಲ್ಲಿ ಅದರಿಂದ ರಕ್ಷಿಸುವ ನೆರಳೂ ಆಗಿದ್ದರು.

ಗಿರೀಶ್ ಕಾರ್ನಾಡ್ ಅವರಿಗೆ ಹೊಸ ಬೆಳವಣಿಗೆಗಳು ಹುಟ್ಟು ಹಾಕುತ್ತಿರುವ ಹೊಸ ಭಾಷೆಯ ಬಗ್ಗೆ ಆತಂಕವಿತ್ತು.

ಲಿಂಚಿಂಗ್, ನಗರ ನಕ್ಸಲ್, ಟುಕುಡೆ – ಟುಕುಡೆ, ದೇಶ ವಿರೋಧಿ ಎನ್ನುವ ಪದಗಳು ಹುಟ್ಟುತ್ತಿರುವ ಭಾಷೆಯ ಹೊಸ ಬೆಳವಣಿಗೆಯ ಬಗ್ಗೆ ಅವರು ಆತಂಕಿತರಾಗಿದ್ದರು.

‘ಹೊಸ ಭಾಷೆಯ ಶಬ್ದಗಳು ರಾಜಕೀಯವನ್ನು, ನಾಗರಿಕ ಹಕ್ಕುಗಳನ್ನು ಎಲ್ಲಾ ಜನರ ಮನಸ್ಸನ್ನು ವಿರೂಪಗೊಳಿಸುತ್ತಿದೆ’ ಎನ್ನುವುದು ಅವರಿಗೆ ಗೊತ್ತಾಗಿ ಹೋಗಿತ್ತು.

ಗಿರೀಶ್ ಕಾರ್ನಾಡರದ್ದು ಸದಾ ಮುಂದೆ ನಿಂತು ಗೆದ್ದು ಬರುವ ಗುಣ. ಕಾಲೇಜಿನಲ್ಲಿ ಕಾರ್ನಾಡರನ್ನು ಸಹಪಾಠಿಯಾಗಿ ಹೊಂದಿದ್ದ ವಿವೇಕ್ ಶಾನಭಾಗ್ ರ ಅಮ್ಮ ವಿವೇಕರ ಬಳಿ ಕಾರ್ನಾಡರ ಸದಾ ಮುನ್ನುಗ್ಗುವ ಸ್ವಭಾವ ಹಾಗೂ ಗೆದ್ದು ಬರುವ ಗುಣದಿಂದಾಗಿಯೇ ಅವರ ಕಾಲೇಜು ದಿನಗಳಲ್ಲಿ ಅವರಿ ಗೆ ‘ಆಂಬ್ಯಾ ತಾಳ್ಯೋ’ ಎಂದು ಹೆಸರಿಟ್ಟಿದ್ದೆವು ಎಂದಿದ್ದರಂತೆ.

‘ಆಂಬ್ಯಾ ತಾಳ್ಯೋ’ ಎಂದರೆ ಮಾವಿನ ತಳಿರು. ಅದಕ್ಕೆ ಹೆಬ್ಬಾಗಿಲ್ಲಲ್ಲೇ ಇದ್ದು ಗೊತ್ತು ಹಾಗೂ ಹೆಬ್ಬಾಗಿಲಲ್ಲೇ ಎಲ್ಲರನ್ನು ಎದುರಿಸುವುದೂ ಗೊತ್ತು. ಅಂತಹ ಮಾವಿನ ಎಲೆ ಈಗಿಲ್ಲ.
—–
ಫೋಟೋ-
‘ರಂಗಶಂಕರ’ದಲ್ಲಿ ಗಿರೀಶ್ ಕಾರ್ನಾಡ್, ನಾನು ಹಾಗೂ ಪಲ್ಲವಿ ಅರುಣ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?